ಸೈಲೆಂಟ್ ಸುನೀಲನ ವಿವಾದ: ರೌಡಿ ಶೀಟರ್‌ಗಳಿಗೆ ಮನ್ನಣೆ ಕೊಡುವುದಿಲ್ಲ ಎಂದ ಸಿಎಂ ಬೊಮ್ಮಾಯಿ
ಬೆಂಗಳೂರು, ನವೆಂಬರ್ 29: ರೌಡಿ ಸೈಲೆಂಟ್ ಸುನೀಲನ ಜೊತೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡಿರುವ ವಿವಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಪಕ್ಷದ ಟ್ವೀಟ್‌ಗೆ ಸಂಬಂಧಿಸಿದಂತೆ ರೌಡಿ ಶೀಟರ್‌ಗಳ ಕುರಿತಾದ ಪತ್ರಕರ್ತರ ಪ್ರಶ್ನೆಗೆ ನಾನು ಉತ್ತರಿಸಿದ್ದೇನೆ. ಇದನ್ನು ಇಷ್ಟಕ್ಕೆ ಸೀಮಿತವಾಗಿ ನೋಡಬೇಕು. ನಮ್ಮ ಪಕ್ಷವು ಯಾವುದೇ ರೌಡಿ ಶೀಟರ್‌ಗಳಿಗೆ ಮನ್ನಣೆ ಕೊಡುವುದಿಲ್ಲ ಹಾಗೂ ಅವರನ್ನು ಸಹಿಸುವುದಿಲ್ಲ' ಎಂದು ಹೇಳಿದ್ದಾರೆ.
'ನಮ್ಮ ಪಕ್ಷದ ಅಧ್ಯಕ್ಷರು ಈಗಾಗಲೇ ತಿಳಿಸಿರುವಂತೆ ಸೈಲೆಂಟ್ ಸುನೀಲನನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ' ಎಂದೂ ಸಿಎಂ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

ಸೈಲೆಂಟ್ ಸುನೀಲನನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ
ಸೈಲೆಂಟ್ ಸುನೀಲನ ಕುರಿತು ವ್ಯಾಪಕ ವಿವಾದ ಭುಗಿಲೆದ್ದಿದೆ. ಆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ರೌಡಿ ಸೈಲೆಂಟ್ ಸುನೀಲನನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ವ್ಯಕ್ತಿಗಳ ನಿರ್ಮಾಣದ ಮೂಲಕ ದೇಶ ನಿರ್ಮಾಣದ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. ಆ ಹಿನ್ನೆಲೆಯಲ್ಲಿ ಭಯೋತ್ಪಾದಕರು, ರೌಡಿಗಳು, ಸಮಾಜ ಘಾತುಕ ಶಕ್ತಿಗಳನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ಕಟೀಲ್ ತಿಳಿಸಿದ್ದಾರೆ.
ಪಕ್ಷದ ಮುಖಂಡರು ಭವಿಷ್ಯದಲ್ಲಿ ಇಂತಹ ಘಟನೆಗಳು ಜರುಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ.

ಸೈಲೆಂಟ್ ಸುನೀಲ ವಿಚಾರವಾಗಿ ಕಿಡಿಕಾರಿದ ಸಿದ್ದರಾಮಯ್ಯ
ವೇದಿಕೆಯ ಮೇಲೆ ರೌಡಿ ಸೈಲೆಂಟ್ ಸುನೀಲನ ಪಕ್ಕದಲ್ಲಿ ಬಿಜೆಪಿ ನಾಯಕರು ಕುಳಿತಿದ್ದರು. ಆ ಸಂದರ್ಭದಲ್ಲಿ ಸಿಸಿಬಿ ಪೊಲೀಸರಿಗೆ ಆತನನ್ನು ಬಂಧಿಸುವ ಧೈರ್ಯವಾದರೂ ಹೇಗೆ ಬರುತ್ತೆ ಎಂದು ವಿಧಾನಸಭೆ ವಿರೋಧ ಪರಿಷತ್ ನಾಯಕ ಸಿದ್ದರಾಮಯ್ಯ ಕೇಳಿದ್ದಾರೆ.
ಅವನ್ಯಾವನೋ ರೌಡಿ ಸುನೀಲನ ಜೊತೆ ಬೆಂಗಳೂರು ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಪಿ.ಸಿ.ಮೋಹನ ವೇದಿಕೆ ಹಂಚಿಕೊಂಡಿದ್ದಾರೆ. ಡಕಾಯತಿ, ಬೆದರಿಕೆ, ಕೊಲೆ ಪ್ರಕರಣಗಳಲ್ಲಿ ಭಾಗಿಯಾದವರ ಜೊತೆ ಬಿಜೆಪಿ ಮುಖಂಡರು ಸಂಪರ್ಕ ಹೊಂದಿದ್ದಾರೆ. ಬಿಜೆಪಿಯವರು ಹೇಳುವುದು ವೇದಾಂತ, ತಿನ್ನುವುದು ಬದನೆಕಾಯಿ ಬದ್ನೆಕಾಯಿ ಎಂದು ಹರಿಹಾಯ್ದಿದ್ದಾರೆ.

ಬಿಜೆಪಿ ನಾಯಕರ ಜೊತೆ ಕಾಣಿಸಿಕೊಂಡ ವಾಂಟೆಡ್ ರೌಡಿ
'ವಾಂಟೆಡ್ ಲಿಸ್ಟ್‌ನಲ್ಲಿರುವ ರೌಡಿ ಪೊಲೀಸರ ಕೈಗೆ ಸಿಗುವುದಿಲ್ಲ, ಆದರೆ ಬಿಜೆಪಿ ನಾಯಕರ ಜೊತೆ ಸಿಗುತ್ತಾರೆ. ಕಳ್ಳರು, ಸುಳ್ಳರು, ಭ್ರಷ್ಟರು, ರೌಡಿಗಳು ಎಲ್ಲರಿಗೂ ಒಂದೇ ಸೂರು ಬಿಜೆಪಿ ಆಗಿದೆ. ಪೊಲೀಸರು ಹುಡುಕುತ್ತಿದ್ದ ರೌಡಿಯ ಜೊತೆಗೆ ಬಿಜೆಪಿ ನಾಯಕರಿಗೆ ಏನು ಕೆಲಸ? ಆತನ ಬಂಧನ ಆಗದಿರುವ ಹಿಂದೆ ಕೇಸರಿ ಪಕ್ಷದ ಕೈವಾಡವಿದೆಯೇ' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಬಿಜೆಪಿಯಲ್ಲಿ ರೌಡಿಗಳ ಘಟಕ ಸ್ಥಾಪನೆ ಎಂದ ಕಾಂಗ್ರೆಸ್
'ರೌಡಿಗಳು, ಕ್ರಿಮಿನಲ್‌ಳೊಂದಿಗೆ ಬಿಜೆಪಿಯ ಗಾಢ ನೆಂಟಸ್ತಿಕೆ ಇರುವಾಗ ರಾಜ್ಯದಲ್ಲಿ ಅಪರಾಧ ಪ್ರಕರಣ ಸಂಖ್ಯೆ ಇಳಿಯುತ್ತದೆಯೇ? ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ, ರೌಡಿಗಳನ್ನು ಹಿಡಿಯುವ ಯೋಗ್ಯತೆ ನಿಮ್ಮ ಇಲಾಖೆಗೆ ಇಲ್ಲವೇ ಅಥವಾ ನೀವೇ ಪೊಲೀಸರನ್ನು ಕಟ್ಟಿಹಾಕಿದ್ದೀರಾ? ಸಿಸಿಬಿ ಪೊಲೀಸರ ಕೈಗೆ ಸಿಗದ ರೌಡಿ, ಬಿಜೆಪಿ ನಾಯಕರ ಕೈಗೆ ಸಿಕ್ಕಿದ್ದು ಹೇಗೆ' ಎಂದು ಕಾಂಗ್ರೆಸ್ ಕೇಳಿದೆ.
ಬಿಜೆಪಿಯ ಕೃಪಾಕಟಾಕ್ಷದಿಂದ ಸೈಲೆಂಟ್ ಸುನಿಲ್ ಎಂಬ ರೌಡಿಯ ಮುಂದೆ ಈಗ ಪೊಲೀಸರೇ ಸೈಲೆಂಟ್ ಆಗಿದ್ದಾರೆ. ಆರಗ ಜ್ಞಾನೇಂದ್ರ ಅವರೇ, ಸೈಲೆಂಟ್ ಸುನೀಲನಿಗೆ ಪೊಲೀಸರು ಹುಡುಕುತ್ತಿರಲಿಲ್ಲವೇ? ಬಿಜೆಪಿ ನಾಯಕರೊಂದಿಗೆ ವೇದಿಕೆಯಲ್ಲಿದ್ದಾಗ ಅಲ್ಲಿ ಪೊಲೀಸರು ಇರಲಿಲ್ಲವೇ? ಬಂಧಿಸದಂತೆ ಪೊಲೀಸರನ್ನು ತಡೆದವರು ಯಾರು? ಪೊಲೀಸರಿಗಿಂತ ರೌಡಿಗಳೇ ಪ್ರಭಾವಿಗಳಾದರೆ' ಎಂದು ಕೆಪಿಸಿಸಿ ಪ್ರಶ್ನಿಸಿದೆ.












Click it and Unblock the Notifications