ರೋಹಿಣಿ ಸಿಂಧೂರಿ vs ರೂಪಾ, ಪ್ರತಿಬಂಧಾಕಾಜ್ಞೆ ಹೈಕೋರ್ಟ್‌ನಿಂದ ರದ್ದು
ಬೆಂಗಳೂರು, ಏಪ್ರಿಲ್ 12; ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪ ಮೌದ್ಗಿಲ್ ನಡುವಿನ ಕದನಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಡಿ. ರೂಪಾ ಅವರು ರೋಹಿಣಿ ಕುರಿತಂತೆ ಯಾವುದೇ ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ನಿರ್ಬಂಧಕಾಜ್ಞೆ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದು ಮಾಡಿದೆ. ಹಾಗಾಗಿ ಇನ್ನು ಡಿ. ರೂಪಾ, ರೋಹಿಣಿ ವಿರುದ್ಧ ಆರೋಪಗಳನ್ನು ಮಾಡಬಹುದು, ಹೇಳಿಕೆಗಳನ್ನು ನೀಡಬಹುದು.
ತಮ್ಮ ವಾದವನ್ನು ಆಲಿಸದೇ ಏಕಪಕ್ಷೀಯವಾಗಿ ನೀಡಿರುವ ಆದೇಶವನ್ನು ಪ್ರಶ್ನಿಸಿ ಐಪಿಎಸ್ ಅಧಿಕಾರಿ ಡಿ. ರೂಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಅವರಿದ್ದ ನ್ಯಾಯಪೀಠ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಗೊಳಿಸಿ ಆದೇಶಿಸಿದೆ. ಈ ಆದೇಶದಿಂದ ವಿಚಾರಣಾ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆ ತೆರವಾದಂತಾಗಿದೆ.

ಅರ್ಜಿದಾರರ ವಾದವೇನು?; ಡಿ. ರೂಪಾ ಮೌದ್ಗಿಲ್ ಪರ ವಾದ ಮಂಡಿಸಿದ ವಕೀಲ ಮಧುಕರ್ ದೇಶಪಾಂಡೆ, ವಿಚಾರಣಾ ನ್ಯಾಯಾಲಯ ತಡೆಯಾಜ್ಞೆ ನೀಡಿದ ಬಳಿಕ ಪ್ರತಿವಾದಿಯಾಗಿರುವ ನಮ್ಮ ಕಕ್ಷಿಧಾರರಿಗೆ ಅರ್ಜಿದಾರರು ನ್ಯಾಯಾಲಯಕ್ಕೆ ಸಲ್ಲಿಸಿರುವ ಎಲ್ಲಾ ದಾಖಲೆಗಳ ಪ್ರತಿಯೊಂದಿಗೆ ತಲುಪಿಸಬೇಕಾಗಿತ್ತು. ಆದರೆ, ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿರುವುದಾಗಿ ಹೇಳಿ ನಿರ್ಬಂಧಕಾಜ್ಞೆ ವಿಸ್ತರಣೆ ಮಾಡುವಂತೆ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ನ್ಯಾಯಾಲಯ ನಿರ್ಬಂಧಕಾಜ್ಞೆ ವಿಸ್ತರಣೆಯನ್ನು ಮಾಡಿದೆ.
ಆದರೆ, ಪ್ರತಿವಾದಿಗಳಿಗೆ ನೋಟಿಸ್ ತಲುಪದಿದ್ದರೂ, ನಿರ್ಬಂಧಕಾಜ್ಞೆ ವಿಸ್ತರಣೆ ಮಾಡಿದಲ್ಲಿ ಅದು ತಾನಾಗಿಯೇ ರದ್ದಾಗಲಿದೆ. ಜತೆಗೆ ಮಧ್ಯಂತರ ತಡೆಯಾಜ್ಞೆ ವಿಸ್ತರಣೆ ಮಾಡುವುದಕ್ಕೆ ಅವಕಾಶವಿಲ್ಲ. ಹೀಗಾಗಿ ನಿರ್ಬಂಧಕಾಜ್ಞೆ ವಿಸ್ತರಣೆ ಮಾಡಿರುವ ಆದೇಶ ರದ್ದು ಮಾಡಬೇಕು ಎಂದು ಮನವಿ ಮಾಡಿದ್ದರು. ಇದನ್ನು ಆಲಿಸಿದ ನ್ಯಾಯಪೀಠ, ವಿಚಾರಣಾ ನ್ಯಾಯಾಲಯ ನೀಡಿದ್ದ ಮಧ್ಯಂತರ ನಿರ್ಬಂಧಕಾಜ್ಞೆ ಆದೇಶವನ್ನು ರದ್ದು ಪಡಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ; ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಫೋಟೋಗಳನ್ನು ಡಿ. ರೂಪಾ ಹಂಚಿಕೊಂಡಿದ್ದರು. ಅಲ್ಲದೇ, ರೋಹಿಣಿ ಸಿಂಧೂರಿ ವಿರುದ್ಧ ಕೆಲ ಆರೋಪಗಳನ್ನು ಮಾಡಿದ್ದರು. ಈ ನಡುವೆ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆಗಳು, ಫೋಟೋಗಳನ್ನು ಪ್ರಕಟ ಮಾಡದಂತೆ ಡಿ. ರೂಪಾ ಮತ್ತು ಇತರೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವಂತೆ ಕೋರಿ ರೋಹಿಣಿ ಸಿಂಧೂರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ 2023ರ ಫೆಬ್ರವರಿ 23 ರಂದು ಏಕಪಕ್ಷೀಯವಾಗಿ (ಎಕ್ಸ್‌ಪಾರ್ಟಿ) ನಿರ್ಬಂಧಕಾಜ್ಞೆ ವಿಧಿಸಿತ್ತು. ಅಲ್ಲದೆ, ಪ್ರತಿವಾದಿಗೆ ನೋಟಿಸ್ ಜಾರಿ ಮಾಡಿತ್ತು. ಇದರ ಮುಂದುವರೆದ ಭಾಗವಾಗಿ ನೋಟಿಸ್ ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಅರ್ಜಿದಾರರಿಗೆ ತಲುಪಿಸಬೇಕಾಗಿತ್ತು.
ಆದರೆ, ದೂರುದಾರರಾದ ರೋಹಿಣಿ ಸಿಂಧೂರಿ ಅವರು, ಎಲ್ಲಾ ದಾಖಲೆಗಳನ್ನು ರಿಜಿಸ್ಟ್ರರ್ ಪೋಸ್ಟ್ ಮೂಲಕ ಕಳುಹಿಸಿದ್ದೇವೆ ಎಂಬುದಾಗಿ ತಿಳಿಸಿ ಮಧ್ಯಂತರ ಅರ್ಜಿ ಸಲ್ಲಿಸಿ ನಿರ್ಬಂಧಕಾಜ್ಞೆ ಆದೇಶ ವಿಸ್ತರಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ನಿರ್ಬಂಧಕಾಜ್ಞೆಯನ್ನು ವಿಸ್ತರಿಸಿತ್ತು. ಇದನ್ನು ಪ್ರಶ್ನಿಸಿ ಡಿ. ರೂಪಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ರೋಹಿಣಿ ಸಿಂಧೂರಿ ಮತ್ತು ಡಿ. ರೂಪಾ ಜಟಾಪಟಿ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಕರ್ನಾಟಕ ಸರ್ಕಾರ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಈ ಕುರಿತು ತನಿಖೆ ನಡೆಸುವಂತೆ ಸೂಚನೆ ನೀಡಿತ್ತು. ಜಟಾಪಟಿ ಬೆಳಕಿಗೆ ಬಂದ ಬಳಿಕ ಇಬ್ಬರೂ ಅಧಿಕಾರಿಗಳನ್ನು ಸರ್ಕಾರ ಯಾವುದೇ ಸ್ಥಳ ನಿಯೋಜನೆ ಮಾಡದೇ ವರ್ಗಾವಣೆ ಮಾಡಿತ್ತು.












Click it and Unblock the Notifications