ನದಿ ಜೋಡಣೆ: ಕರ್ನಾಟಕದ ಸಮರ್ಪಕ ಪಾಲು ಬೇಕು
ಬೆಂಗಳೂರು, ಫೆಬ್ರವರಿ 07; ಮುಖ್ಯಮಂತ್ರಿಗಳು ಸೋಮವಾರ ನವದೆಹಲಿ ಪ್ರವಾಸದಲ್ಲಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಮ್ಮ ನದಿ ಪಾತ್ರದಲ್ಲಿ ಉತ್ಪಾದನೆಯಾಗುವ ನೀರು, ನಮ್ಮ ಅಗತ್ಯ ಹಾಗೂ ಈಕ್ವಿಟಿ ಆಧರಿಸಿ ಪಾಲು ನಿರ್ಧಾರವಾಗಬೇಕೆನ್ನುವುದು ನಮ್ಮ ನಿಲುವು" ಎಂದರು.
"ಡಿಪಿಆರ್ ಅಂತಿಮಗೊಳಿಸುವ ಮುನ್ನ ಎಲ್ಲಾ ರಾಜ್ಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಕೂಡ ಹೇಳಲಾಗಿದೆ. ಕರ್ನಾಟಕ್ಕೆ ನ್ಯಾಯಸಮ್ಮತವಾದ ಪಾಲನ್ನು ಪಡೆದುಕೊಳ್ಳಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು" ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

"ಜೀವನದಿಗಳಾಗಿರುವ ಕೃಷ್ಣ ಮತ್ತು ಕಾವೇರಿ ಜಲಾನಯನ ಪ್ರದೇಶಗಳ ಪ್ರಶ್ನೆಯಾಗಿರುವುದರಿಂದ ಈ ಬಗ್ಗೆ ನಮ್ಮ ನಿಲುವನ್ನು ಸ್ಪಷ್ಟಪಡಿಸಲಾಗಿದೆ. ಈ ಬಗ್ಗೆ ಯಾವುದೇ ರಾಜಿ ಇಲ್ಲ" ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಮಹಾನದಿ, ಗೋದಾವರಿ, ಕೃಷ್ಣ, ಕಾವೇರಿ, ಪಾಲಾರ್, ಪೆನ್ನಾರ್, ನದಿ ಜೋಡಣೆ ಹಿಮಾಲಯ ಹಾಗೂ ಪೆನೆಸ್ಯುಲಾರ್ ಭಾಗದ ಪ್ರಮುಖ ನದಿಜೋಡಣೆ ಯೋಜನೆಗಳು. ನಮ್ಮ ನಿಲುವಿನ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಆ ನಿಲುವಿಗೆ ನಾವು ಬದ್ಧರಾಗಿದ್ದೇವೆ ಎಂದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2022-23ರ ಬಜೆಟ್ ಮಂಡಿಸಿದ್ದರು. ಬಜೆಟ್ ಭಾಷಣದಲ್ಲಿ ಸಚಿವರು ಕಾವೇರಿ-ಪೆನ್ನಾರ್ ಸೇರಿದಂತೆ ದೇಶದ 5 ನದಿಗಳ ಜೋಡಣೆಗೆ ಅನುಮೋದನೆ ನೀಡಲಾಗಿದೆ ಎಂದು ಘೋಷಣೆ ಮಾಡಿದ್ದರು. ಇದಕ್ಕಾಗಿ ಬಜೆಟ್‌ನಲ್ಲಿ 44 ಸಾವಿರ ಕೋಟಿ ಹಣ ಮೀಸಲಿಡಲಾಗಿದೆ ಎಂದು ಹೇಳಿದ್ದರು.
ಬಜೆಟ್ ಭಾಷಣದಲ್ಲಿ ಕಾವೇರಿ-ಪೆನ್ನಾರ್, ಗೋದಾವರಿ-ಕೃಷ್ಣ, ಕೃಷ್ಣ-ಪೆನ್ನಾರ್, ನರ್ಮದಾ-ಗೋವಾವರಿ ನದಿಗಳ ಜೋಡಣೆಗೆ ಒಪ್ಪಿಗೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದರು. ಬಳಿಕ ನದಿ ಜೋಡಣೆ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ವಿವಿಧ ಸಚಿವರ ಭೇಟಿ; ಎರಡು ದಿನಗಳ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿಗಳು ವಿವಿಧ ಕೇಂದ್ರ ಸಚಿವರನ್ನು ಭೇಟಿ ಮಾಡಲಿದ್ದಾರೆ. ಈ ಕುರಿತು ಮಾತನಾಡಿದ ಅವರು, "ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇಂಧನ ಸಚಿವರು, ರಕ್ಷಣ ಸಚಿವ ರಾಜ್‍ನಾಥ್ ಸಿಂಗ್ ಅವರನ್ನು ಭೇಟಿಯಾಗಲಿದ್ದೇನೆ" ಎಂದರು.
"ಮಂಗಳವಾರವೂ ದೆಹಲಿಯಲ್ಲಿಯೇ ಇರುತ್ತೇನೆ. ಜೆ. ಪಿ. ನಡ್ಡಾ ಹಾಗೂ ಅಮಿತ್ ಶಾರನ್ನೂ ಭೇಟಿಯಾಗುವ ಸಾಧ್ಯತೆಗಳಿವೆ. ಕೇಂದ್ರದ ನಾಯಕರು ಸಮಯ ನೀಡಿದಾಗ ಸಂಪುಟ ರಚನೆಗೆ ಸಂಬಂಧಿಸಿದ ವಿಷಯಗಳು ಚರ್ಚೆಗೆ ಬರಲಿವೆ. ಈ ಕುರಿತು ಸಾರ್ವಜನಿಕವಾಗಿ ನಾನು ಮಾತನಾಡುವುದಿಲ್ಲ" ಎಂದು ಹೇಳಿದರು.
ರೈಲ್ವೆ ಸಚಿವರ ಭೇಟಿ; ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ಮಾಡಿದರು. ಬಳಿಕ ಮಾತನಾಡಿದ ಅವರು, "ಕಲ್ಲಿದ್ದಿಲು ಸಾಗಾಣಿಕೆಗೆ ಅಗತ್ಯವಿರುವ ರೇಕುಗಳ ಸರಬರಾಜಿನ ಕುರಿತು ಚರ್ಚಿಸಲಾಗಿದೆ. ಈ ಬಗ್ಗೆ ರೈಲ್ವೆ ಮಂಡಳಿಯಲ್ಲಿ ಸಂಬಂಧಿಸಿದವರಿಗೆ ಸೂಚನೆ ನೀಡುವುದಾಗಿ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ" ಎಂದರು.
ವಸ್ತ್ರ ಸಂಹಿತೆ ಸುತ್ತೋಲೆ ಪಾಲಿಸಿ; ಹಿಜಾಬ್ ವಿವಾದದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, "ಶಾಲಾ ಕಾಲೇಜುಗಳಲ್ಲಿ ಯಾವ ರೀತಿಯ ವಸ್ತ್ರಸಂಹಿತೆ ಇರಬೇಕೆನ್ನುವುದು ಸಂವಿಧಾನ ಹೇಳಿದೆ. ಕರ್ನಾಟಕ ಶಿಕ್ಷಣ ಕಾಯ್ದೆಯ ನಿಯಮಗಳಲ್ಲಿ ಹಾಗೂ ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ ಸಹ ಸ್ಪಷ್ಟವಾಗಿ ಹೇಳಿದೆ. ಸರ್ಕಾರವೂ ಈಗಾಗಲೇ ಸುತ್ತೋಲೆ ಹೊರಡಿಸಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮುಖ್ಯ. ಪರೀಕ್ಷೆಯೂ ಹತ್ತಿರ ಬರುತ್ತಿರುವುದರಿಂದ ಸರ್ಕಾರದ ಸುತ್ತೋಲೆಯನ್ನು ಎಲ್ಲರೂ ಪರಿಪಾಲಿಸಬೇಕು" ಎಂದು ಹೇಳಿದರು.
"ಉಚ್ಛ ನ್ಯಾಯಾಲಯದಲ್ಲಿಯೂ ಈ ಬಗ್ಗೆ ರಿಟ್ ಅರ್ಜಿ ಹಾಕಲಾಗದ್ದು, ಅಲ್ಲಿಯೂ ಚರ್ಚೆಯಾಗಿ ತೀರ್ಮಾನವಾಗಲಿದೆ. ಈ ಹಿನ್ನೆಲೆಯಲ್ಲಿ ಶಾಂತಿಯನ್ನೂ ಕಾಪಾಡಬೇಕು. ಯಾರೂ ಶಾಂತಿಯನ್ನು ಕದಡುವ ತೀರ್ಮಾನ ಮಾಡಬಾರದು. ಸುತ್ತೋಲೆಯನ್ನು ಪರಿಪಾಲಿಸಬೇಕು. ಇಂಥ ಪ್ರಕರಣಗಳು ಎಲ್ಲಾ ರಾಜ್ಯಗಳಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತಿ ತೀರ್ಮಾನಗಳಾಗಿವೆ" ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.












Click it and Unblock the Notifications