ಕರ್ನಾಟಕಕ್ಕೆ 1,200 ಟನ್ ಆಕ್ಸಿಜನ್ ಕೊಡಿ; ಕೇಂದ್ರಕ್ಕೆ ಹೈಕೋರ್ಟ್ ಆದೇಶ
ಬೆಂಗಳೂರು, ಮೇ 06; ಆಮ್ಲಜನಕ ಬಫರ್ ಸ್ಟಾಕ್ ಮಾಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ಆದರೆ ಈ ತನಕ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಕೋವಿಡ್‌ಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎ. ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ತಕ್ಷಣದಿಂದಲೇ ಅನ್ವಯವಾಗುವಂತೆ ರಾಜ್ಯದ ಆಮ್ಲಜನಕ ಪಾಲನ್ನು ಪ್ರತಿ ದಿನಕ್ಕೆ 1,200 ಟನ್‌ಗೆ ಹೆಚ್ಚಿಸುವಂತೆ ಸರ್ಕಾರಕ್ಕೆ ಸೂಚಿಸಿದೆ.
ಎಲ್ಲಾ ರಾಜ್ಯಗಳಲ್ಲಿ ಆಮ್ಲಜನಕ ಕಾಯ್ದಿರಿಸಿದ ದಾಸ್ತಾನು (ಬಫರ್ ಸ್ಟಾಕ್) ವ್ಯವಸ್ಥೆ ಮಾಡುವಂತೆ ಏಪ್ರಿಲ್ 30ರಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ. ಆದರೆ ಇದುವರೆಗೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ ರಾಜ್ಯದ ಆಮ್ಲಜನಕ ಹಂಚಿಕೆ ಪಾಲನ್ನು 865 ಟನ್‌ನಿಂದ 965 ಟನ್‌ಗಳಿಗೆ ಹೆಚ್ಚಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿತು. ಕೋವಿಡ್ ಪ್ರಕರಣಗಳ ಏರಿಕೆಯ ಆಧಾರದಲ್ಲಿ ಹೆಚ್ಚುವರಿ ಬೇಡಿಕೆ ಪರಿಶೀಲಿಸಿ ಸಲ್ಲಿಸುವಂತೆ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತು.
ರಾಜ್ಯದಲ್ಲಿ ಬಫರ್ ಸ್ಟಾಕ್ ಆಕ್ಸಿಜನ್ ಲಭ್ಯವಿದ್ದರೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳು ಸಾವನ್ನಪ್ಪುವಂತಹ ಪ್ರಕರಣ ನಡೆಯುತ್ತಿರಲಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿತು. ಕರ್ನಾಟಕ ಹೊಸ ಪ್ರಸ್ತಾವನೆ ಸಲ್ಲಿಸುವ ತನಕ ಪ್ರತಿದಿನದ ಪಾಲನ್ನು 1,200 ಟನ್‌ಗೆ ಹೆಚ್ಚಿಸುವಂತೆ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.
ಅರ್ಜಿಯ ವಿಚಾರಣೆ ವೇಳೆ ಕರ್ನಾಟಕದಲ್ಲಿ ಒಂದು ವಾರದ ಅವಧಿಯಲ್ಲಿ 1.60 ಲಕ್ಷದಷ್ಟು ಹೊಸ ಪ್ರಕರಣ ದಾಖಲಾಗಿರುವುದು ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ 4.64 ಲಕ್ಷ ದಾಟಿರುವುದನ್ನು ನ್ಯಾಯಪೀಠ ಉಲ್ಲೇಖಿಸಿತು.
ಕರ್ನಾಟಕದಲ್ಲಿಯೇ ಆಕ್ಸಿಜನ್ ಉತ್ಪಾದನೆ ಘಟಕಗಳಿವೆ. ಆದರೆ ಕೇಂದ್ರ ವಿಶಾಖಪಟ್ಟಣ, ಓಡಿಶಾ, ಮತ್ತು ಕೇರಳದಿಂದ ಹೆಚ್ಚುವರಿ ಆಮ್ಲಜನಕ ತರಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವಡಗಿ ಕೋರ್ಟ್‌ಗೆ ಮಾಹಿತಿ ನೀಡಿದರು.












Click it and Unblock the Notifications