ಭ್ರೂಣ ಲಿಂಗ ಪತ್ತೆ ಕುರಿತು ಮಾಹಿತಿ ನೀಡುವವರಿಗೆ ಸರ್ಕಾರದಿಂದ ಬಂಪರ್ ಬಹುಮಾನ
ಬೆಳಗಾವಿ, ಡಿಸೆಂಬರ್ 13: ರಾಜ್ಯದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಭ್ರೂಣ ಪರೀಕ್ಷೆ ಮತ್ತು ಭ್ರೂಣಹತ್ಯೆ ಕುರಿತಂತೆ ನಿಖರ ಮಾಹಿತಿ ನೀಡುವವರಿಗೆ ರೂ.1 ಲಕ್ಷ ರೂ ಗಳ ಬಹುಮಾನ ನೀಡುವುದರ ಜೊತೆಗೆ ಮಾಹಿತಿ ನೀಡುವವರ ಗೋಪ್ಯತೆಯನ್ನು ಕಾಪಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಈ ಕುರಿತು ಮಂಗಳವಾರ ವಿಧಾನಪರಿಷತ್‌ನಲ್ಲಿ ನಡೆದ ಗಮನ ಸೆಳೆಯುವ ಸೂಚನೆಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ದಿನೇಶ್ ಗುಂಡೂರಾವ್ ಅವರು, ರಾಜ್ಯದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ತಡೆಯುವ ಕುರಿತಂತೆ ಪ್ರಸ್ತುತ ಜಾರಿಯಲ್ಲಿರುವ ಪಿಸಿಪಿಎನ್‌ಡಿಟಿ ಕಾಯಿದೆಯನ್ವಯ ಸ್ಕ್ಯಾನಿಂಗ್ ಸೆಂಟರ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳುವುದರ ಜೊತೆಗೆ ಪ್ರತೀ 3 ತಿಂಗಳಿಗೊಮ್ಮೆ ಅಧಿಕಾರಿಗಳ ಮೂಲಕ ಗೋಪ್ಯ ಕಾರ್ಯಚರಣೆ ನಡೆಸುವ ಮೂಲಕ ಅಕ್ರಮ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾನೂನು ಬಾಹಿರವಾಗಿ ನಡೆಯುವ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಕುರಿತಂತೆ ಸಾರ್ವಜನಿಕರು ಇಲಾಖೆಯ ಉಚಿತ ಸಹಾಯವಾಣಿ 104 ಗೆ ಮಾಹಿತಿ ನೀಡಬಹುದಾಗಿದ್ದು, ಮುಂದಿನ ದಿನಗಳಲ್ಲಿ ಪತ್ಯೇಕ ಸಹಾಯವಾಣಿ ಆರಂಭಿಸಲಾಗುವುದು ಹಾಗೂ ನಿಖರ ಮಾಹಿತಿ ನೀಡುವ ಸಾರ್ವಜನಿಕರಿಗೆ 1 ಲಕ್ಷ ರೂ ಗಳ ಬಹುಮಾನ ನೀಡಲಾಗುವುದು.
ಇಲಾಖೆಯ ವ್ಯಾಪ್ತಿಯಲ್ಲಿರುವ ಎಲ್ಲಾ ಉಪ ವಿಭಾಗಗಳ ಮಟ್ಟದಲ್ಲಿ ತಂಡ ರಚಿಸುವ ಮೂಲಕ ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಸ್ತ್ರೀ ಶಕ್ತಿ ಸಂಘಗಳ ಮೂಲಕ ಮಾಹಿತಿ ಪಡೆಯುವ ಮೂಲಕ ಹಾಗೂ ಶೈಕ್ಷಣಿಕ ವ್ಯವಸ್ಥೆಯಲ್ಲಿ ಜಾಗೃತಿ ಮೂಡಿಸುವ ಮೂಲಕ ಮತ್ತು ತಪ್ಪಿತಸ್ಥರ ವಿರುದ್ದ ಅತ್ಯಂತ ಕಠಿಣ ಕಾನೂನು ಕ್ರಮ ಜರುಗಿಸುವ ಮೂಲಕ ಇದನ್ನು ಸಂಪೂರ್ಣವಾಗಿ ತಡೆಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಬಾಲ್ಯವಿವಾಹ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕಾನೂನು ಕ್ರಮ: ಲಕ್ಷ್ಮಿ ಹೆಬ್ಬಾಳ್ಕರ್
ಯಾದಗಿರಿ ಸೇರಿದಂತೆ ರಾಜ್ಯದ ಯಾವುದೇ ಕಡೆಗಳಲ್ಲಿ ಬಾಲ್ಯವಿವಾಹಗಳು ಜರುಗದಂತೆ ಕಾನೂನು ಕ್ರಮ ಬಿಗಿಗೊಳಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮಿ ಆರ್ ಹೆಬ್ಬಾಳಕರ ಅವರು ಹೇಳಿದರು.

ವಿಧಾನಸಭೆಯಲ್ಲಿ ಶಾಸಕರಾದ ಶರಣಗೌಡ ಕಂದಕೂರ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಿಷೇಧಿತ ಬಾಲ್ಯವಿವಾಹ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರು ಸಹ ಅವರನ್ನು ರಕ್ಷಿಸುವ ಪ್ರಮೆಯೇ ಇಲ್ಲ. ತಪ್ಪಿತಸ್ಥರನ್ನು ಯಾವುದೇ ಮುಲಾಜಿಲ್ಲದೇ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ತಿಳಿಸಿದರು.
ಯಾದಗಿರಿ ಜಿಲ್ಲೆಯಲ್ಲಿ 2020-2021ರಲ್ಲಿ 1, 2021-22ರಲ್ಲಿ 9 ಹಾಗೂ 2022-23ರಲ್ಲಿ 2 ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಎಫ್‌ಐಆರ್ ದಾಖಲಾಗಿದ್ದು ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದೆ. ಬಾಲ್ಯವಿವಾಹ ಸಮಾಜಕ್ಕೆ ಮಾರಕವಾಗಿ ಪರಿಣಮಿಸಿದೆ. ಬಾಲ್ಯವಿವಾಹದಿಂದ ಮುಂದೆ ಆಗುವ ದುಷ್ಪರಿಣಾಮಗಳೇನು ಎಂಬುದರ ಬಗ್ಗೆ ಸಾರ್ವಜನಿಕರು ಅರಿಯಬೇಕು. ಕಾನೂನು ಕ್ರಮಗಳನ್ನು ಪಾಲನೆ ಮಾಡಬೇಕು ಎಂದು ಸಲಹೆ ಮಾಡಿದರು.
ರಾಜ್ಯದಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ ಮತ್ತಿತರ ಸಂಬಂಧಿಸಿದ ಇಲಾಖೆಗಳಲ್ಲದೇ ಸ್ಟೇಟ್ ಕ್ರೈಮ್ ರೆಕಾರ್ಡ್ ಬ್ಯೂರೋ, ಬಾಲ್ಯ ವಿವಾಹ ನಿಷೇಧ ಕೋಶ ಇತ್ಯಾದಿ ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗವು ಇವುಗಳ ಮೇಲುಸ್ತುವಾರಿ ಹಾಗೂ ದಾಖಲಾಗುವ ನಿರ್ದಿಷ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳುತ್ತಿದೆ ಎಂದು ತಿಳಿಸಿದರು












Click it and Unblock the Notifications