ಹಲವು ವರ್ಷಗಳಿಂದ ಒಂದೇ ಸ್ಥಳ, ಕಂದಾಯ ಇಲಾಖೆ ಅಧಿಕಾರಿಗಳ ಪಟ್ಟಿ ಕೇಳಿದ ಸಚಿವರು
ಬೆಂಗಳೂರು, ಜುಲೈ 14: ಕಂದಾಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳ ಪಟ್ಟಿ ತಯಾರಾಗುತ್ತಿದೆ. ಸ್ವತಃ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ಈ ಕುರಿತು ಮಾಹಿತಿ ನೀಡಿದ್ದಾರೆ.
ಕಂದಾಯ ಸಚಿವರ ಸೂಚನೆ ಮೇರೆಗೆ ಈ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಪತ್ರವನ್ನು ಬರೆದಿದ್ದಾರೆ. ಸಚಿವರು ಈ ಪತ್ರವನ್ನು ಟ್ವೀಟ್ ಮಾಡಿ ಪೋಸ್ಟ್‌ವೊಂದನ್ನು ಹಾಕಿದ್ದಾರೆ.

ಸಚಿವ ಕೃಷ್ಣ ಬೈರೇಗೌಡ ತಮ್ಮ ಟ್ವೀಟ್‌ನಲ್ಲಿ, 'ಒಂದೇ ಸ್ಥಳದಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಕಂದಾಯ ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ದೂರುಗಳಿರುವವರ ಪಟ್ಟಿಯನ್ನು ಶೀಘ್ರದಲ್ಲಿ ನೀಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚಿಸಲಾಗಿದೆ. ಒಂದೇ ಸ್ಥಳದಲ್ಲಿ ದೀರ್ಘಕಾಲ ಸೇವೆ ಸಲ್ಲಿಸುತ್ತಿರುವ ಕೆಲವು ಅಧಿಕಾರಿಗಳ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬರುತ್ತಿದೆ' ಎಂದು ಹೇಳಿದ್ದಾರೆ.
ಪತ್ರದಲ್ಲಿ ಏನಿದೆ?; ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಬರೆದಿರುವ ಪತ್ರದಲ್ಲಿ ದಿನಾಂಕ 8/7/2024ರಂದು ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು/ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆ ನಡೆಸಲಾಯಿತು.
ಸದರಿ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳು ಜನರ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಮತ್ತು ಗುಣಾತ್ಮಕವಾಗಿ ಇತ್ಯರ್ಥಪಡಿಸಲು ಹಾಗೂ ಜಿಲ್ಲಾ ಮಟ್ಟದಲ್ಲಿ ಯೋಜನೆಗಳ ಪರಿಣಾಮಕಾರಿಯಾಗಿ ಜಾರಿಯಾಗುವಂತೆ ಸಮನ್ವಯತೆ ಸಾಧಿಸುವಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ತಮ್ಮ ಅಧೀನ ಅಧಿಕಾರಿ/ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಸೂಚಿಸಲಾಗಿದೆ.
ಅಲ್ಲದೆ ಕಛೇರಿಯಲ್ಲಿ ಉತ್ತಮ ಕಾರ್ಯಕ್ಷಮತೆ, ಶಿಸ್ತು ಪಾಲಿಸುವಂತೆ ಕ್ರಮ ವಹಿಸಲು ಮತ್ತು ಒಂದು ವೇಳೆ ಈ ದಿಸೆಯಲ್ಲಿ ನಿರ್ಲಕ್ಷತೆ ತೋರಿದ ಅಧಿಕಾರಿ/ ಸಿಬ್ಬಂದಿಗಳ ಮೇಲೆ ನಿಯಮಾನುಸಾರ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವಂತೆ ಸಹ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಯಾವುದೇ ಅಧಿಕಾರಿ/ ನೌಕರರ ಬಗ್ಗೆ ಅಸಮರ್ಥತೆ ಅಥವಾ ದೂರುಗಳು ಇತ್ಯಾದಿಗಳ ಕಾರಣದಿಂದ ಅವರನ್ನು ವರ್ಗಾವಣೆ ಮಾಡಲು ಅಥವಾ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲು ಅಗತ್ಯವಿರುವ ಪ್ರಸ್ತಾವನೆಯನ್ನು ಕಳುಹಿಸುವಂತೆ ಸೂಚಿಸಿದೆ.
ಹಲವು ಅಧಿಕಾರಿಗಳು ಮತ್ತು ನೌಕರರು ಒಂದೇ ಕಚೇರಿ ಅಥವಾ ಒಂದೇ ಸ್ಥಳದಲ್ಲಿ ಅವಧಿ ಮೀರಿ ಕೆಲಸ ಮಾಡುತ್ತಿರುವುದು, ಅಲ್ಲದೆ. ಇಂತಹ ಹಲವು ಅಧಿಕಾರಿಗಳು/ ನೌಕರರುಗಳ ವಿರುದ್ಧ ದೂರುಗಳು ಸಹ ಸ್ವೀಕೃತವಾಗಿರುವುದು ಸರ್ಕಾರದ ಗಮನಕ್ಕೂ ಬಂದಿದೆ ಎಂದು ಉಲ್ಲೇಖ ಮಾಡಲಾಗಿದೆ.
ಆದ್ದರಿಂದ ಒಂದೇ ಹುದ್ದೆ/ ಸ್ಥಾನದಲ್ಲಿ ಅಥವಾ ಒಂದೇ ಸ್ಥಳದಲ್ಲಿ 5 ವರ್ಷ ಮೀರಿ ಮುಂದುವರಿದಿದ್ದಲ್ಲಿ ಮತ್ತು ಅಂತಹವರ ವಿರುದ್ಧ ದೂರುಗಳೇನಾದರೂ ಇದ್ದಲ್ಲಿ, ಅವರ ಅಧಿಕಾರಾವಧಿಯ ವಿವರಗಳೊಂದಿಗೆ ವಿವರವಾದ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಲು ಸೂಚಿಸಿದೆ. ಇದನ್ನು ಆದ್ಯತೆಯ ಮೇರೆಗೆ ಎಂದು ಪರಿಗಣಿಸುವಂತೆ ಕೋರಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕರ್ನಾಟಕ ಸರ್ಕಾರ ಈಗಾಗಲೇ ಸರ್ಕಾರಿ ನೌಕರರ ಬೇಡಿಕೆಯಂತೆ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ ನಡೆಸುತ್ತಿದೆ. ಈ ಮೊದಲು 15 ದಿನದಲ್ಲಿ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಆದೇಶಿಸಲಾಗಿತ್ತು. ಆದರೆ ವರ್ಗಾವಣೆ ಅವಧಿಯನ್ನು ಮತ್ತೆ ವಿಸ್ತರಣೆ ಮಾಡಿ ಆದೇಶಿಸಲಾಗಿದೆ.
ದಿನಾಂಕ 25/06/2024ರ ಸರ್ಕಾರಿ ಆದೇಶದಲ್ಲಿ ವಿವರಿಸಿರುವ ಷರತ್ತುಗಳ ಅನ್ವಯ 2024-25ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ ಪ್ರಾಯೋಜಿಸಲಾಗಿದೆ. ಈ ವರ್ಗಾವಣೆಯ ಅವಧಿಯನ್ನು ದಿನಾಂಕ 15/07/2024ರ ವರೆಗೆ ವಿಸ್ತರಿಸಿ ಆದೇಶಿಸಿದೆ.
ಈಗ ಕಂದಾಯ ಇಲಾಖೆ ಅಧಿಕಾರಿಗಳ ಪಟ್ಟಿಯನ್ನು ಸಹ ಕೇಳಲಾಗಿದೆ. ಆದ್ದರಿಂದ ಸರ್ಕಾರ ಕಂದಾಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿರುವ, ಜನರಿಂದ ದೂರುಗಳು ಬರುತ್ತಿರುವ ಅಧಿಕಾರಿಗಳನ್ನು ವರ್ಗಾವಣೆಗೊಳಿಸುವ ನಿರೀಕ್ಷೆಯೂ ಇದೆ.












Click it and Unblock the Notifications