Prajwal Revanna: ತಕ್ಷಣ ವಾಪಸ್‌ ಆಗು, ಪ್ರಜ್ವಲ್‌ಗೆ ದೇವೇಗೌಡರ ಎಚ್ಚರಿಕೆ

ಬೆಂಗಳೂರು, ಮೇ 23: ಮಾಜಿ ಪ್ರಧಾನಿ, ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡರ ಮೊಮ್ಮಗ, ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದಾರೆ.

ಎಚ್. ಡಿ. ದೇವೇಗೌಡರು ಗುರುವಾರ ' ಪ್ರಜ್ವಲ್ ರೇವಣ್ಣನಿಗೆ ನನ್ನ ಎಚ್ಚರಿಕೆ' ಎಂದು ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿಯೂ ಪೋಸ್ಟ್ ಮಾಡಿದ್ದು, ಪ್ರಜ್ವಲ್ ರೇವಣ್ಣ ತಕ್ಷಣ ಆಗಮಿಸಬೇಕು ಎಂದು ಪತ್ರದಲ್ಲಿ ಸೂಚನೆ ನೀಡಿದ್ದಾರೆ.

Return Immediately HD Deve Gowda Letter To Hassan MP Prajwal Revanna

ದೇವೇಗೌಡರ ಪತ್ರದ ವಿವರ: 'ನಾನು ಮೇ 18ನೇ ತಾರೀಖಿನಂದು ದೇವಸ್ಥಾನಕ್ಕೆ ಹೊರಟಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣನ ಕುರಿತಾಗಿ ಮಾತನಾಡಿದ್ದೆ. ಆತ ನನಗೆ, ನನ್ನ ಕುಟುಂಬಕ್ಕೆ, ನನ್ನ ಸಹೋದ್ಯೋಗಿಗಳಿಗೆ, ಸ್ನೇಹಿತರಿಗೆ ಮತ್ತು ನನ್ನ ಪಕ್ಷದ ಕಾರ್ಯಕರ್ತರಿಗೆ ತಂದೊಡ್ಡಿರುವ ಆಘಾತ ಮತ್ತು ನೋವಿನಿಂದ ಹೊರಬಂದು ಮಾತನಾಡಲು ಕೊಂಚ ಸಮಯ ಹಿಡಿಯಿತು' ಎಂದು ಪತ್ರವನ್ನು ಆರಂಭಿಸಿದ್ದಾರೆ.

'ನಾನು ಈಗಾಗಲೇ ಸ್ಪಷ್ಟಪಡಿಸಿರುವ ಹಾಗೆ ಕಾನೂನಿನ ಪ್ರಕಾರ ಅವನು ತಪ್ಪಿತಸ್ಥನೆಂದಾದರೆ, ಅವನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು. ನನ್ನ ಈ ನಿಲುವನ್ನು ನನ್ನ ಮಗ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಹೆಚ್. ಡಿ. ಕುಮಾರಸ್ವಾಮಿಯವರು ಹಗರಣ ಹೊರಬಿದ್ದ ಮೊದಲ ದಿನದಿಂದಲೇ ಪ್ರತಿಪಾದಿಸಿದ್ದಾರೆ' ಎಂದು ಪತ್ರದಲ್ಲಿ ಹೇಳಿದ್ದಾರೆ.

"ಈ ಕೆಲವು ವಾರಗಳಿಂದ ಜನರು ನನ್ನ ಮತ್ತು ನನ್ನ ಕುಟುಂಬದವರ ಕುರಿತಾಗಿ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದೆಲ್ಲವೂ ನನಗೆ ತಿಳಿದಿದೆ. ನಾನು ಅವರು ಮಾತನಾಡುವುದನ್ನು ನಿಲ್ಲಿಸುವ ಪ್ರಯತ್ನ ಮಾಡುವುದಿಲ್ಲ. ನಾನು ಅವರನ್ನು ಟೀಕೆ ಮಾಡಲೂ ಹೋಗುವುದಿಲ್ಲ. ಈ ಹಗರಣದ ಎಲ್ಲಾ ಸತ್ಯಾಂಶಗಳು ಹೊರಬರುವವರೆಗೂ ಅವರು ತಾಳ್ಮೆಯಿಂದ ಕಾಯಬೇಕಿತ್ತು ಎಂದು ಅವರೊಂದಿಗೆ ವಾದಕ್ಕೆ ಇಳಿಯುವುದಿಲ್ಲ' ಎಂದು ಪತ್ರದಲ್ಲಿ ತಿಳಿಸಿದ್ದಾರೆ.

"ಪ್ರಜ್ವಲ್‌ನ ಚಟುವಟಿಕೆಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ನಾನು ಅವರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಿಲ್ಲ. ಅವನನ್ನು ರಕ್ಷಿಸುವ ಯಾವುದೇ ಇರಾದೆಯೂ ನನಗಿಲ್ಲ. ಅವನ ಈಗಿನ ಚಲನವಲನ ಮತ್ತು ಅವನ ವಿದೇಶಿ ಯಾತ್ರೆಯ ಬಗ್ಗೆ ನನಗೆ ಏನೂ ತಿಳಿದಿಲ್ಲ, ತಿಳಿದಿರಲಿಲ್ಲ ಎಂದು ನಾನು ಜನರಿಗೆ ಅರ್ಥ ಮಾಡಿಸಲು ಸಾಧ್ಯವಿಲ್ಲ. ನಾನು ನನ್ನ ಆತ್ಮಸಾಕ್ಷಿಗೆ ಮಾತ್ರ ಉತ್ತರಿಸಬಲ್ಲೆ. ನನಗೆ ದೇವರಲ್ಲಿ ನಂಬಿಕೆ ಇದೆ ಮತ್ತು ಆ ದೇವರಿಗೆ ಎಲ್ಲಾ ಸತ್ಯ ತಿಳಿದಿದೆ ಎಂದು ನಾನು ನಂಬಿದ್ದೇನೆ' ಎಂದು ಪತ್ರದಲ್ಲಿ ಹೇಳಿದ್ದಾರೆ.

"ನಾನು ಈಚಿನ ದಿನಗಳಲ್ಲಿ ನಡೆದಿರುವ ರಾಜಕೀಯ ಪಿತೂರಿಗಳು, ಚಿತಾವಣೆಗಳು, ಉತ್ಪ್ರೇಕ್ಷೆಗಳು ಮತ್ತು ಮಿಥ್ಯಾರೋಪಗಳ ಬಗ್ಗೆ ಈಗ ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಅವುಗಳನ್ನು ಮಾಡಿದವರು ದೇವರಿಗೆ ಉತ್ತರಿಸಬೇಕಾಗುತ್ತದೆ ಮತ್ತು ತಾವು ಎಸಗಿದ ಕೃತ್ಯಗಳಿಗೆ ಸೂಕ್ತ ಬೆಲೆ ತೆರಬೇಕಾಗುತ್ತದೆ ಎಂದು ನಂಬಿದ್ದೇನೆ. ನನ್ನ ಸತ್ಯ ಮತ್ತು ನೋವಿನ ಹೊರೆಯನ್ನು ಭಗವಂತನ ಪದತಳದಲ್ಲಿ ಇರಿಸಿದ್ದೇನೆ" ಎಂದು ಭಾವುಕರಾಗಿದ್ದಾರೆ.

"ಈ ಸಂದರ್ಭದಲ್ಲಿ ನಾನು ಈಗ ಒಂದು ಕೆಲಸವನ್ನಷ್ಟೆ ಮಾಡಬಲ್ಲೆ. ಅದೇನೆಂದರೆ, ಪ್ರಜ್ವಲ್‌ನು ಎಲ್ಲಿದ್ದರೂ ಬಂದು, ಪೋಲಿಸರ ಮುಂದೆ ಶರಣಾಗಿ, ವಿಚಾರಣೆಯನ್ನು ಎದುರಿಸಬೇಕು ಎಂದು ಯಾವುದೇ ಮುಲಾಜು, ಮರ್ಜಿಯಿಲ್ಲದೆ ಹೇಳಬಲ್ಲೆ ಮತ್ತು ಹೇಳುತ್ತಿದ್ದೇನೆ. ಇದು ನಾನು ಅವನಿಗೆ ಕೊಡುತ್ತಿರುವ ಎಚ್ಚರಿಕೆ ಎಂದು ಕೂಡ ತಿಳಿಯಬೇಕು. ಅವನು ಈ ಎಚ್ಚರಿಕೆಗೆ ಮನ್ನಣೆ ಕೊಡದಿದ್ದಲ್ಲಿ ಅವನು ನನ್ನ ಮತ್ತು ಕುಟುಂಬದವರೆಲ್ಲರ ಕೋಪವನ್ನೂ ಎದುರಿಸಬೇಕಾಗುತ್ತದೆ. ಅವನು ಎಸಗಿದ್ದಾನೆ ಎನ್ನಲಾದ ತಪ್ಪುಗಳನ್ನು ತೀರ್ಮಾನಿಸಲು ಕಾನೂನು ಇದೆ. ಆದರೆ ಈ ಎಚ್ಚರಿಕೆಗೆ ಅವನು ತಲೆಬಾಗದಿದ್ದಲ್ಲಿ, ಅವನು ಮನೆಯವರ ಕಣ್ಣಲ್ಲಿ ಏಕಾಂಗಿಯಾಗುವುದರಲ್ಲಿ ಸಂದೇಹವಿಲ್ಲ. ನನ್ನ ಬಗ್ಗೆ ಅವನಿಗೆ ಏನಾದರೂ ಗೌರವವಿದ್ದಲ್ಲಿ ಅವನು ಕೂಡಲೆ ಹಿಂದಿರುಗಿ ಬರಬೇಕು" ಎಂದು ದೇವೇಗೌಡರು ಪತ್ರದಲ್ಲಿ ತಿಳಿಸಿದ್ದಾರೆ.

"ನಾನಾಗಲಿ, ನನ್ನ ಕುಟುಂಬದವರಾಗಲಿ ಈ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಭರವಸೆ ಕೊಡುತ್ತೇನೆ. ಇದರಲ್ಲಿ ಯಾವುದೇ ಭಾವನೆಗೆ ಸಿಲುಕದೆ, ಅವನು ಎಸಗಿದ್ದಾನೆ ಎನ್ನಲಾದ ಕೃತ್ಯಗಳು ಮತ್ತು ತಪ್ಪುಗಳಿಂದ ನೊಂದಿರುವ, ಅನ್ಯಾಯಕ್ಕೆ ಒಳಗಾಗಿರುವ ಎಲ್ಲರಿಗೂ ನ್ಯಾಯ ಸಿಗುವುದಷ್ಟೆ ನನಗೆ ಮುಖ್ಯ. ಜನರ ವಿಶ್ವಾಸವನ್ನು ಮರಳಿ ಪಡೆಯುವುದಷ್ಟೆ ನನ್ನ ಗುರಿ. ಜನರು ಆರು ದಶಕಗಳ ಕಾಲದ ನನ್ನ ರಾಜಕೀಯ ಜೀವನದುದ್ದಕ್ಕೂ ನನ್ನ ಜೊತೆಗೆ ನಿಂತಿದ್ದಾರೆ. ಅವರಿಗೆ ನಾನು ಸದಾ ಋಣಿ ಮತ್ತು ನಾನು ಬದುಕಿರುವವರೆಗೂ ಅವರ ಹಿತದ ವಿರುದ್ಧ ನಡೆದುಕೊಳ್ಳುವುದಿಲ್ಲ' ಎಂದು ದೇವೇಗೌಡರು ಪತ್ರವನ್ನು ಮಗಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+