BJP-JDS Coalition: ಬಿಜೆಪಿ- ಜೆಡಿಎಸ್ ಮೈತ್ರಿಗೆ ಅಡ್ಡ ಆಗಿದ್ದೇನು? ಗೌಡರ ಬಳಿ ಶಾಸಕರು ಹೇಳಿದ್ದೇನು? ಇನ್ ಸೈಡ್ ಸ್ಟೋರಿ
ಬೆಂಗಳೂರು, ಜುಲೈ 21: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ಗುರಿ ಹಾಕಿಕೊಂಡಿದ್ದ ದಳಪತಿಗಳು ಚುನಾವಣೆಯಲ್ಲಿ ಸೋಲನುಭವಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಠಕ್ಕರ್ ಕೊಡಲು ಮುಂದಾಗಿದ್ದು, ಸದ್ಯಕ್ಕೆ ಮೈತ್ರಿಗೆ ಬ್ರೇಕ್ ಬಿದ್ದಿದೆ.
ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆಗೆ ಮೈತ್ರಿಯಾಗಿ ಹೋದರೇ ತಪ್ಪೇನೂ ಎಂದು ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದರು. ಆದರೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನೇತೃತ್ವದಲ್ಲಿ ಗುರುವಾರ ತಡರಾತ್ರಿಯವರೆಗೂ ಪಕ್ಷದ ಶಾಸಕರ, ಮುಖಂಡರ ಸಭೆ ನಡೆಸಿದ್ದು, ಸಭೆಯಲ್ಲಿ ಮೈತ್ರಿ ಕುರಿತು ಕೆಲವರು ಬೆಂಬಲ ಸೂಚಿಸಿದರೆ ಇನ್ನು ಹಲವರು ವಿರೋಧವನ್ನ ವ್ಯಕ್ತಪಡಿಸಿದ್ದು, ಮೈತ್ರಿ ಇಲ್ಲ. ಸ್ವಾತಂತ್ರವಾಗಿ ಹೋರಾಡುತ್ತೇವೆ ಎಂದು ದೇವೇಗೌಡರು ತಿಳಿಸಿದ್ದಾರೆ.

ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 19 ಸ್ಥಾನಗಳನ್ನು ಹೊಂದಿದ್ದು, ಪಕ್ಷ ಇದ್ದರೆ ಮಾತ್ರ ಮುಂದೆ ಭವಿಷ್ಯ ಉಳಿಯಲಿದೆ ಎನ್ನುವ ನಿಟ್ಟಿನಲ್ಲಿ ದೇವೇಗೌಡರು ಸಭೆ ನಡೆಸಿದ್ದು, ಶಾಸಕರ ಜೊತೆಗೆ ಚರ್ಚೆ ನಡೆಸಿದ್ದಾರೆ. ಲೋಕಸಭಾ ಚುನಾವಣೆಗೆ ಮೈತ್ರಿಯಾಗಿ ಹೋಗುವುದು ಬೇಡ ಎಂದು ಕೆಲ ಶಾಸಕರು ಸಭೆಯಲ್ಲಿ ದೇವೇಗೌಡರ ಮುಂದೆ ಹೇಳಿದ್ದು, ಹಿಂದೆ ಮೈತ್ರಿ ಸರ್ಕಾರದ ವೇಳೆ ಮೈತ್ರಿಯಾಗಿ ಹೋದಾಗ ಕೇವಲ ಒಂದು ಸ್ಥಾನವನ್ನ ಮಾತ್ರ ಗೆಲ್ಲಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಎನ್‌ಡಿಎ ಜತೆ ಹೋದರೆ ಪಕ್ಷದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಮೈತ್ರಿ ಬೇಡ ಎಂದು ಸೋಲನುಭವಿಸಿದ ನಾಯಕರು ಹಿಂದೇಟು ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಬಿಜೆಪಿ ಜೊತೆಗೆ ಮೈತ್ರಿಯಾಗುವುದರಿಂದ ಪಕ್ಷಕ್ಕೆ ಸಾಕಷ್ಟು ನಷ್ಟವಾಗಲಿದೆ ಎಂದು ಕೆಲ ಶಾಸಕರು ತಮ್ಮ ಅಭಿಪ್ರಾಯವನ್ನ ದೇವೇಗೌಡರಿಗೆ ತಿಳಿಸಿದ್ದಾರೆ.
ಮೈತ್ರಿಗೆ ಹಿಂದೇಟು ಹಾಕುತ್ತಿರುವುದು ಯಾಕೆ?
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನ ಹೊರತು ಪಡಿಸಿದರೇ ಮುಸ್ಲಿಂ ಸಮುದಾಯದ ಮತಗಳು ಜೆಡಿಎಸ್ ಪಕ್ಷಕ್ಕೂ ಇದೆ. ಆದರೆ, ನಾವು ಲೋಕಸಭಾ ಚುನಾವನೆ ಹಿನ್ನೆಲೆ ಬಿಜೆಪಿ ಜೊತೆಗೆ ಮೈತ್ರಿಯಾದರೇ ಶಾಶ್ವತವಾಗಿ ಮುಸ್ಲಿಂ ಮತಗಳು ಕೈ ತಪ್ಪಿ ಹೋಗಲಿದೆ. ಇನ್ನೂ ಮೊದಲಿನಿಂದಲೂ ಬಿಜೆಪಿಯ ಬಿ ಟೀಮ್ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದ್ದು, ಈ ವೇಳೆ ನಾವು ಮೈತ್ರಿಯಾಗುವುದರಿಂದ ಕಾಂಗ್ರೆಸ್ ಆರೋಪ ನಿಜವಾಗಲಿದೆ ಎಂದು ಕೆಲ ಶಾಸಕರು ಹೇಳಿದ್ದಾರೆ ಎನ್ನಲಾಗಿದೆ.
ಇನ್ನೂ ಹಳೇ ಮೈಸೂರು ಭಾಗ ಜೆಡಿಎಸ್ ನ ಭದ್ರ ಕೋಟೆ, ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ ತನ್ನದೇ ಆದ ವರ್ಚಸ್ಸಿದೆ. ಲೋಕಸಭಾ ಚುನಾವಣೆಗೆ ನಾವು ಬಿಜೆಪಿ ಜೊತೆಗೆ ಮೈತ್ರಿಯಾದರೇ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತ್ತಷ್ಟು ಬಲಗೊಳ್ಳಲಿದೆ ಎಂದು ಸಭೆಯಲ್ಲಿ ದೇವೇಗೌಡರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ಕೋಮುವದವನ್ನು ನಾವು ಬಹಿರಂಗವಾಗಿ ಒಪ್ಪಿಕೊಳ್ಳುವಂತಾಗುತ್ತದೆ. ಅದು ಅಲ್ಲದೇ ಪಕ್ಷದ ಸ್ವಂತ ನಿಲುವಿಗೆ ಇನ್ಮುಂದೆ ಬಿಜೆಪಿ ನಡೆಗೆ ನಾವು ಕಾಯಬೇಕಾಗುತ್ತದೆ. ಇತ್ತ 135 ಸ್ಥಾನಗಳನ್ನ ಗೆದ್ದು ಸರ್ಕಾರ ರಚಿಸಿರುವ ಕಾಂಗ್ರೆಸ್ ನಾಯಕರು ಈಗಾಗಲೇ ಆಪರೇಷನ್ ಹಸ್ತಕ್ಕೆ ಮುಂದಾಗಿದ್ದು, ಬಿಜೆಪಿ ಜೊತೆಗೆ ಮೈತ್ರಿಯಾದರೆ ಕೆಲ ಶಾಸಕರು ಕಾಂಗ್ರೆಸ್ ಕಡೆ ಹೋಗುತ್ತಾರೆ ಎನ್ನುವ ಮಾತನ್ನ ಸಭೆಯಲ್ಲಿ ಜೆಡಿಎಸ್ ಶಾಸಕರು ಹೇಳಿದ್ದಾರೆ ಎನ್ನಲಾಗಿದೆ.
ದೇವೇಗೌಡರು ಹೇಳಿದ್ದೇನು?
ಇನ್ನೂ ಜೆಡಿಎಸ್ ಶಾಸಕ ಜೊತೆಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಎನ್ ಡಿ ಎ ನೂ ಇಲ್ಲ, ಯುಪಿಎ ನೂ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಸ್ವಾತಂತ್ರ್ಯ ಹೋರಾಟ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉಳಿಸುವುದು ರಾಜ್ಯದ ಜನರ ಹಿತದೃಷ್ಟಿಯಿಂದ ಅಗತ್ಯ, ನಮ್ಮ ಪಕ್ಷಕ್ಕಾಗಿರೋ ಅನ್ಯಾಯ ಅದೆಲ್ಲವನ್ನ ಜನರೆ ಮುಂದೆ ಇಟ್ಟು ಹೋರಾಡುತ್ತೇವೆ. ಕರ್ನಾಟಕದಲ್ಲಿ ಸಾಮರ್ಥ್ಯ ಇದೆ ಅನ್ನೋದನ್ನ ಸಾಬೀತು ಮಾಡುತ್ತೇವೆ, ರಾಜಕೀಯ ಲಾಭ ಮತ್ತು ತೋರಿಕೆಗಾಗಿ ಹೇಳುತ್ತಿಲ್ಲ. ಜೀವನದ್ದುಕ್ಕೂ ಹೋರಾಟ ಮಾಡುತ್ತೇವೆ ಎಂದು ಹೆಚ್ ಡಿ ದೇವೇಗೌಡರು ಹೇಳಿದ್ದಾರೆ.












Click it and Unblock the Notifications