ರಾಜ್ಯ ರಾಜಕೀಯ ; ರಾಜೀನಾಮೆಯಿಂದ ವಿಶ್ವಾಸಮತದ ತನಕ
Recommended Video

ಬೆಂಗಳೂರು, ಜುಲೈ 15 : 9 ಕಾಂಗ್ರೆಸ್ ಮತ್ತು 3 ಜೆಡಿಎಸ್ ಶಾಸಕರ ರಾಜೀನಾಮೆಯಿಂದ ಆರಂಭವಾದ ಕರ್ನಾಟಕದ ರಾಜಕೀಯದ ಬೆಳವಣಿಗೆಗಳು ವಿಶ್ವಾಸಮತದ ತನಕ ಬಂದು ನಿಂತಿದೆ. ಕಾಂಗ್ರೆಸ್-ಜೆಡಿಎಸ್ ಸರ್ಕಾರ ವಿಶ್ವಾಸಮತಗಳಿಸಲಿದೆಯೇ? ಕಾದು ನೋಡಬೇಕು.
ಜುಲೈ 6ರಂದು ಶಾಸಕರು ರಾಜೀನಾಮೆ ನೀಡಿ ಮುಂಬೈಗೆ ಹಾರಿದರು. ಜುಲೈ 15ರ ಸೋಮವಾರ ಸ್ಪೀಕರ್ ರಮೇಶ್ ಕುಮಾರ್ ಸರ್ಕಾರ ವಿಶ್ವಾಸಮತವನ್ನುಯಾಚನೆ ಮಾಡಲು ಜುಲೈ 18ರ ಬೆಳಗ್ಗೆ 11ಗಂಟೆಗೆ ಸಮಯ ನಿಗದಿ ಮಾಡಿದರು.
ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಮಂಗಳವಾರ ನಡೆಯಲಿದೆ. ನ್ಯಾಯಾಲಯದ ತೀರ್ಪು ಏನು ಬರಲಿದೆ? ಎಂಬುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ. ಮೂರು ಪಕ್ಷಗಳ ಶಾಸಕರ ರೆಸಾರ್ಟ್ ವಾಸ್ತವ್ಯ ಮುಂದುವರೆಸಿದ್ದಾರೆ.

ವಿಶ್ವಾಸಮತಯಾಚನೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆ ರಾಜೀನಾಮೆ ನೀಡಿರುವ ಶಾಸಕರ ಮನವೊಲಿಕೆಗೆ ಪ್ರಯತ್ನ ಮುಂದುವರೆದಿದೆ. ತಮ್ಮ ಹಠ ಮುಂದುವರೆಸಿರುವ ಶಾಸಕರು ಯಾವುದೇ ಕಾರಣಕ್ಕೂ ತೀರ್ಮಾನ ಬದಲಿಸುವುದಿಲ್ಲ ಎಂದು ಪಟ್ಟು ಹಿಡಿದು ಕುತಿದ್ದಾರೆ.
ಸೋಮವಾರ ನಡೆದಿದ್ದೇನು?
* ಇಂದು ಬೆಳಗ್ಗೆ ತಾಜ್ ವಿವಾಂತ ಹೋಟೆಲ್‌ನಲ್ಲಿ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಅವರು ಶಾಸಕರ ಜೊತೆ ಸಭೆ ನಡೆಸಿದರು. 12 ಗಂಟೆ ಸುಮಾರಿಗೆ ರೆಸಾರ್ಟ್‌ನಿಂದ ಎಲ್ಲಾ ಪಕ್ಷದ ನಾಯಕರು ವಿಧಾನಸೌಧಕ್ಕೆ ಆಗಮಿಸಿದರು. ವಿಧಾನಸೌಧದಲ್ಲಿ ಬಿ. ಎಸ್. ಯಡಿಯೂರಪ್ಪ ಅವರು ಶಾಸಕಾಂಗ ಪಕ್ಷದ ಸಭೆ ನಡೆಸಿದರು.
* ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಎಚ್. ಡಿ. ರೇವಣ್ಣ ಪದ್ಮನಾಭನಗರದಲ್ಲಿನ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.
* ವಿಧಾನ ಪರಿಷತ್ ಕಲಾಪ ಆರಂಭವಾಯಿತು. ಪ್ರತಿಪಕ್ಷ ಬಿಜೆಪಿ ಸದಸ್ಯರು ಸರ್ಕಾರಕ್ಕೆ ಬಹುಮತವಿಲ್ಲ ಎಂದು ಗದ್ದಲ ಎಬ್ಬಿಸಿದರು. ಕೆಲವು ಹೊತ್ತಿನ ಕಾಲ ಕಲಾಪ ಮುಂದೂಡಲಾಯಿತು. ಬಳಿಕ ಕಲಾಪ ಆರಂಭವಾದಾಗ ಗದ್ದಲ ನಡೆದಿದ್ದರಿಂದ ಕಲಾಪವನ್ನು ಮುಂದೂಡಲಾಯಿತು.
* ಸ್ಪೀಕರ್ ರಮೇಶ್ ಕುಮಾರ್ ಆಗಮಿಸುತ್ತಿದ್ದಂತೆ ವಿಧಾನಸೌಧದಲ್ಲಿ ಕಲಾಪ ಸಲಹಾ ಸಮಿತಿ ಸಭೆ ಆರಂಭವಾಯಿತು. ಇಂದೇ ವಿಶ್ವಾಸಮತಯಾಚನೆ ಮಾಡಬೇಕು ಎಂದು ಬಿಜೆಪಿ ಸ್ಪೀಕರ್‌ಗೆ ಮನವಿ ಮಾಡಿತು. ಶುಕ್ರವಾರ ವಿಶ್ವಾಸಮತಯಾಚನೆ ಮಾಡಲು ಸಮಯ ನೀಡುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
* ಸುಮಾರು ಒಂದೂವರೆಗಂಟೆಗಳ ಕಾಲ ಸಭೆ ನಡೆಯಿತು. ಬಿಜೆಪಿ ಇಂದು ವಿಶ್ವಾಸಮತಯಾಚನೆ ಆಗಲೇಬೇಕು ಎಂದು ಪಟ್ಟು ಹಿಡಿಯಿತು. ಅಂತಿಮವಾಗಿ ಜುಲೈ 18ರ ಗುರುವಾರ ಬೆಳಗ್ಗೆ 11ಗಂಟೆಗೆ ವಿಶ್ವಾಸಮತಯಾಚನೆಗೆ ಸ್ಪೀಕರ್ ಸಮಯ ನಿಗದಿ ಮಾಡಿದರು.
* ಗುರುವಾರದ ತನಕ ವಿಧಾನಸಭೆ ಕಾರ್ಯಕಲಾಪವನ್ನು ನಡೆಸದಂತೆ ಪ್ರತಿಪಕ್ಷ ಬಿಜೆಪಿ ಸ್ಪೀಕರ್ ರಮೇಶ್ ಕುಮಾರ್‌ಗೆ ಮನವಿ ಸಲ್ಲಿಸಿತು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸ್ಪೀಕರ್ ಹೇಳಿದರು. ಕಲಾಪ ನಡೆಸಿದರೆ ಬಹಿಷ್ಕಾರ ಮಾಡುವುದಾಗಿ ಬಿಜೆಪಿ ಹೇಳಿತು.
* ವಿಧಾನಸಭೆ ಕಾರ್ಯಕಲಾಪ ಆರಂಭವಾಯಿತು. ಸ್ಪೀಕರ್ ರಮೇಶ್ ಕುಮಾರ್ ಅವರು ಪ್ರತಿಪಕ್ಷ ಇಲ್ಲದೆ ಕಲಾಪ ನಡೆಸುವುದು ಸಂವಿಧಾನಕ್ಕೆ ವಿರುದ್ಧವಾದದ್ದು. ಆದ್ದರಿಂದ, ಕಲಾಪವನ್ನು ಗುರುವಾರಕ್ಕೆ ಮುಂದೂಡುವುದಾಗಿ ಘೋಷಣೆ ಮಾಡಿದರು.
* ವಿಧಾನಸಭೆ ಕಲಾಪಕ್ಕೆ ಆಗಮಿಸಿದ್ದ ಶಾಸಕರು ವಿಧಾನಸೌಧದಿಂದ ರೆಸಾರ್ಟ್‌ಗೆ ವಾಪಸ್ ಆದರು. ಗುರುವಾರದ ತನಕ ಶಾಸಕರು ರೆಸಾರ್ಟ್‌ನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.












Click it and Unblock the Notifications