Get Updates
Get notified of breaking news, exclusive insights, and must-see stories!

Reservation: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮೀಸಲಾತಿ ಹೆಚ್ಚಳ: ಸಿ.ಎಂ ಸಿದ್ದರಾಮಯ್ಯ ಹೇಳಿದ್ದೇನು

ಕರ್ನಾಟಕ ಸರ್ಕಾರವು ಸಾಮಾಜಿಕ ನ್ಯಾಯದ ಪರವಾಗಿದ್ದು, ಜನಸಂಖ್ಯೆಯ ಅನುಗುಣವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮೀಸಲಾತಿಯ ಹೆಚ್ಚಳಕ್ಕೆ ಕೇಂದ್ರವನ್ನು ಒತ್ತಾಯಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಆಯೋಜಿಸಿದ್ದ "ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ-2026 ಮತ್ತು ಜನ ಜಾಗೃತಿ ಜಾಥಾ ಮಹೋತ್ಸವ"ವನ್ನು ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ.

Reservation Row What CM Siddaramaiah Said on Increasing Quota for Scheduled Castes and Scheduled Tribes

ವಾಲ್ಮೀಕಿ ಸಮುದಾಯವಷ್ಟೇ ಅಲ್ಲದೇ, ಎಲ್ಲ ಶೋಷಿತ ಸಮಾಜಗಳು ಸಹ ತಮ್ಮ ಇತಿಹಾಸ ಮರೆಯಬಾರದು. ಈ ದಿಸೆಯಲ್ಲಿ ಇಂದಿನ ಜಾತ್ರೆ ಅತ್ಯಂತ ಮಹತ್ವವಾಗಿದೆ. ಇತಿಹಾಸ ತಿಳಿಯದಿದ್ದರೆ ಭವಿಷ್ಯ ನಿರ್ಮಾಣ ಸಾಧ್ಯವಿಲ್ಲ. ಶಿಕ್ಷಣ, ಸಂಘಟನೆ ಹಾಗೂ ಹೋರಾಟಗಳಿಂದ ಮಾತ್ರ ಶೋಷಿತರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬಹುದು. ಮೌಢ್ಯ ಕಂದಾಚಾರಗಳಿಂದ ದೂರವಾಗಲು ಶಿಕ್ಷಣ ಅಗತ್ಯ. ಹಿಂದಿನಿಂದಲೂ ಶೋಷಿತ ಸಮುದಾಯ ಶಿಕ್ಷಣದಿಂದ ವಂಚಿತವಾಗಿತ್ತು. ಮಹರ್ಷಿ ವಾಲ್ಮೀಕಿಯವರು ಶಿಕ್ಷಣ ಪಡೆದು ರಾಮಾಯಣದಂತಹ ಗ್ರಂಥವನ್ನು ರಚನೆ ಮಾಡಿದರು. ಮಹಾಭಾರತ ರಚಿಸಿದ ವ್ಯಾಸ ಮುನಿಗಳು ಬೆಸ್ತರ ಸಮುದಾಯಕ್ಕೆ ಸೇರಿದವರು ಎಂದು ಹೇಳಿದ್ದಾರೆ.

ಚತುರ್ವರ್ಣ ವ್ಯವಸ್ಥೆಯಲ್ಲಿ ಶೂದ್ರರನ್ನು ಶಿಕ್ಷಣದಿಂದ ಹೊರಗಿಡಲಾಯಿತು. ಆದರೆ, ಸಂವಿಧಾನ ಜಾರಿಗೆ ಬಂದ ನಂತರ ಸಮಾನ ಅವಕಾಶಗಳು ದೊರೆಯತೊಡಗಿತು. ಶೋಷಿತರು ಶಿಕ್ಷಣದಿಂದ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಆದ್ದರಿಂದ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ತಳಸಮುದಾಯದವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಶಕ್ತಿ ತುಂಬಲಾಗುತ್ತಿದೆ.

ಡಾ. ಬಿ.ಆರ್. ಅಂಬೇಡ್ಕರ್ ಅವರು ತಿಳಿಸಿದಂತೆ, ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ನಿಜಾರ್ಥದಲ್ಲಿ ಸ್ವಾತಂತ್ರ್ಯ ದೊರೆತಂತಾಗುತ್ತದೆ. ಪಟ್ಟಭದ್ರ ಹಿತಾಸಕ್ತಿಗಳು ಜಾತಿವ್ಯವಸ್ಥೆಯನ್ನು ಹುಟ್ಟುಹಾಕಿದ್ದು, ಸಮಾಜದಲ್ಲಿ ಅಸಮಾನತೆಗೆ ಕಾರಣವಾಗಿದೆ. ಆರ್ಥಿಕ ಮತ್ತು ಸಾಮಾಜಿಕ ಶಕ್ತಿಯಿಂದ ಮಾತ್ರ ಸಮಾಜದಲ್ಲಿನ ಅಸಮಾನತೆ ತೊಲಗಲು ಸಾಧ್ಯ. ತಮ್ಮ ಹಕ್ಕುಗಳ ಬಗ್ಗೆ ಜಾಗೃತಿಯಿದ್ದರೆ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ .ಬಸವಣ್ಣನವರು ಜಾತಿವರ್ಗಗಳ ವ್ಯವಸ್ಥೆ ನಿರ್ಮೂಲನೆಗೆ ಒತ್ತು ನೀಡಿದ್ದರು. ಆದರೆ ಇಂದಿಗೂ ಚಲನೆಯಿಲ್ಲದ ಜಾತಿವ್ಯವಸ್ಥೆ ನಮ್ಮಲ್ಲಿ ಪ್ರಚಲಿತವಾಗಿದೆ. ಪಟ್ಟಭದ್ರ ಹಿತಾಸಕ್ತಿಗಳು ಮೌಢ್ಯಗಳನ್ನು, ಕಂದಾಚಾರಗಳನ್ನು ಪ್ರೋತ್ಸಾಹಿಸಿದ್ದರು. ಈ ಪಿತೂರಿಯಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಶಿಕ್ಷಣ ಅತ್ಯಗತ್ಯ.

ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯನ್ನು ಜಾರಿಗೆ ತಂದಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ದೊರೆಯಬೇಕೆಂದು 2013 ರಲ್ಲಿ ಜಾರಿಗೆ ತರಲಾಯಿತು. 2025-26 ಕ್ಕೆ ಈ ಯೋಜನೆಯಡಿ 42,018 ಕೋಟಿ ರೂ.ಗಳನ್ನು ನೀಡಲಾಗಿದೆ. ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ, ಈ ಅವಧಿಯಲ್ಲಿ 1.10 ಲಕ್ಷ ಕೋಟಿ ವೆಚ್ಚ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಮೂರು ವರ್ಷದಲ್ಲಿ 1.17 ಲಕ್ಷ ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಇಂತಹ ಜನಪರ ಕಾನೂನನ್ನು ಜಾರಿಗೆ ತಂದ ಕೇವಲ ಮೂರು ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂಬ ಹೆಮ್ಮೆ ನಮಗಿದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯನ್ನು ಎತ್ತಿಹಿಡಿಯಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಗುತ್ತಿಗೆದಾರರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಹಾಗೂ ಸರ್ಕಾರಿ ನೌಕರರಿಗೆ ಪದೋನ್ನತಿಯಲ್ಲಿಯೂ ಮೀಸಲಾತಿಯನ್ನು ತರಲಾಯಿತು. ರಾಜ್ಯದಲ್ಲಿನ ಹಲವು ಮಠಗಳಿಗೆ ಸರ್ಕಾರ ಸುಮಾರು 50 ಎಕರೆ ಜಾಗವನ್ನು ನೀಡಿದ್ದು, ವಾಲ್ಮೀಕಿ ಮಠಕ್ಕೆ 4.18 ಎಕರೆ ಜಾಗವನ್ನು ನೀಡಿದೆ. ಶೋಷಿತ ಸಮುದಾಯಗಳ ಪರವಾಗಿ ಯಾವ ಸರ್ಕಾರವಿದೆ ಎಂಬ ಬಗ್ಗೆ ಜನರು ಚಿಂತನೆ ನಡೆಸಬೇಕು.

ಎಸ್‌ಸಿ ಎಸ್‌ಟಿ ಸಮುದಾಯವರು ರಾಜ್ಯದಲ್ಲಿ ಶೇ. 24.1ರಷ್ಟಿದ್ದು, ಈ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕೆಂದರೆ ನಮ್ಮ ಶಿಫಾರಸ್ಸಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಇದನ್ನು 9ನೇ ಶೆಡ್ಯೂಲ್‌ಗೆ ಸೇರಿಸಬೇಕೆಂದು, ಈ ಮೀಸಲಾತಿಯನ್ನು ಜಾರಿಮಾಡಲೇಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಉದ್ಯೋಗ, ಶಿಕ್ಷಣ, ಆರ್ಥಿಕ ಸಾಮಾಜಿಕ ಸಮಾನತೆ ದೊರೆಯದ ಹೊರತು ಸಮಾನತೆ ಸ್ಥಾಪಿಸಲು ಸಾಧ್ಯವಿಲ್ಲ. ಸಮುದಾಯದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು. ಸಂವಿಧಾನ ವಿರೋಧಿಗಳು ಅಧಿಕಾರದಲ್ಲಿದ್ದರೆ, ಸಂವಿಧಾನದಲ್ಲಿರುವುದು ಜಾರಿಯಾಗುವುದಿಲ್ಲ ಎಂಬ ಸತ್ಯವನ್ನು ಎಲ್ಲರೂ ಅರಿಯಬೇಕಿದೆ. ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+