ಪ್ರಯಾಣ ದರ ಕಡಿಮೆ ಮಾಡಿ, ಬಿಜೆಪಿ ಪ್ರತಿಭಟನೆ
ಬೆಂಗಳೂರು, ನ.10 : ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಪ್ರಯಾಣ ದರವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು. ತಕ್ಷಣ ಸರ್ಕಾರ ಪ್ರಯಾಣದರವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಶಾಸಕ ಅಶ್ವಥ್ ನಾರಾಯಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಾರ್ಪೊರೇಟರ್ ಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಉಡುಪಿ ಮತ್ತು ಪುತ್ತೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ಗಳನ್ನು ತಡೆದು ಟಿಕೆಟ್ ದರ ಇಳಿಸುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿ ಪ್ರತಿಭಟಿಸಿದರು. ಹಾವೇರಿ, ಗಂಗಾವತಿ, ಯಾದಗಿರಿ, ಮೈಸೂರಿನಲ್ಲಿಯೂ ಪ್ರತಿಭಟನೆ ನಡೆಯಿತು. [ಬಸ್ ದರ ಇಳಿಸಿ ಲೋಕಸತ್ತಾ ಒತ್ತಾಯ]
ಡೀಸೆಲ್ ದರ ಹೆಚ್ಚಾದಾಗ ಪ್ರಯಾಣದೆ ಹೆಚ್ಚಳ ಮಾಡಿದ್ದೀರಿ, ಈಗ ಡೀಸೆಲ್ ಬೆಲೆ ಇಳಿಕೆಯಾಗಿದ್ದು ಪ್ರಯಾಣ ದರವನ್ನು ಕಡಿಮೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸರ್ಕಾರ ಸಬ್ಸಿಡಿ ನೀಡಿದರೆ ದರ ಇಳಿಕೆ : ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ತೆರಿಗೆ ವಿನಾಯಿತಿ ನೀಡಿದರೆ ಬಸ್ ದರ ಇಳಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬೆಂಗಳೂರಿನಲ್ಲಿ ಹೇಳಿದ್ದಾರೆ. [ಬಸ್ ದರ ಇಳಿಕೆ ಅಸಾಧ್ಯ, ಸಚಿವರು ನೀಡಿದ ಕಾರಣಗಳು]
ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ತೆರಿಗೆ ವಿನಾಯಿತಿ ನೀಡುವುದು ಹಾಗೂ ವಿದ್ಯಾರ್ಥಿ, ಅಂಗವಿಕಲರು, ವಯೋವೃದ್ಧರ ಪಾಸ್‍ಗಳಿಗೆ ಸರ್ಕಾರದಿಂದ ನೀಡುವ ಸಬ್ಸಿಡಿ ಹಣ ಭರಿಸಿದರೆ ದರ ಇಳಿಕೆ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ಡೀಸೆಲ್ ಬೆಲೆ ಇಳಿಕೆ ಹಿನ್ನೆಲೆಯಲ್ಲಿ ಯಾವುದೇ ರಾಜ್ಯಗಳು ಬಸ್ ಪ್ರಯಾಣ ದರವನ್ನು ಇಳಿಸಿಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾದ ಕಾರಣ ಡೀಸೆಲ್ ಬೆಲೆ ಇಳಿದಿದೆ. ಆದರೆ, ಈ ಬೆಲೆ ಹೀಗೆ ಇರುತ್ತದೆ ಎಂದು ಹೇಳಲು ಬರುವುದಿಲ್ಲ. ಆದ್ದರಿಂದ ದರ ಇಳಿಸಿಲ್ಲ ಎಂದು ಸಚಿವರು ತಿಳಿಸಿದರು.













Click it and Unblock the Notifications