ಗುಡ್ ನ್ಯೂಸ್; 85,000 ಕ್ಕೂ ಅಧಿಕ ಹುದ್ದೆಗಳ ನೇಮಕಾತಿ: ಮಹತ್ವ ಮಾಹಿತಿ ಇಲ್ಲಿದೆ
ಬೆಂಗಳೂರು, ಆಗಸ್ಟ್ 25: ದಲಿತ ಸಮುದಾಯದ ಬಹುಕಾಲದ ಬೇಡಿಕೆಯಾದ ಒಳಮೀಸಲಾತಿಗೆ ಸಿದ್ದರಾಮಯ್ಯ ಸರ್ಕಾರ ಅನುಮೋದನೆ ನೀಡಿದೆ. ಪರಿಶಿಷ್ಟ ಜಾತಿಗಳನ್ನು ಮೂರು ಭಾಗಗಳಾಗಿ ವಿಂಗಡಿಸಿ, ಶೇ.17ರ ಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ. ಇನ್ನೂ ಸರ್ಕಾರಿ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಒಳ ಮೀಸಲಾತಿಯ ಕುರಿತಂತೆ ಆದೇಶ ಹೊರಡಿಸಿದ ಕೂಡಲೇ ನೇಮಕಾತಿ ಪ್ರಕ್ರಿಯೆಗಳನ್ನು ಆರಂಭಿಸಲಾಗುವುದು, ಅಲ್ಲದೆ ಒಂದು ಬಾರಿಗೆ ವಯೋಮಿತಿ ಸಡಿಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇನ್ನೂ ರಾಜ್ಯದಲ್ಲಿ ಒಳ ಮೀಸಲಾತಿ ಕಾರಣಕ್ಕೆ 2024ರ ನವೆಂಬರ್ ನಿಂದ ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದ್ದು, ಸೆಪ್ಟೆಂಬರ್ ಮುಗಿಯುತ್ತಿದ್ದಂತೆ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಒಳ ಮೀಸಲಾತಿ ವರದಿ ಜಾರಿಯಾದ ಬೆನ್ನಲ್ಲೇ ಖಾಲಿ ಇರುವ ಬರೋಬ್ಬರಿ 85,000ಕ್ಕೂ ಅಧಿಕ ಹುದ್ದೆಗಳ ಭರ್ತಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬಹುದಿನಗಳಿಂದ ಸರ್ಕಾರಿ ಹುದ್ದೆಗಳ ನೇಮಕಾತಿಯಾಗಿಲ್ಲ. ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದ್ದು, 85,000ಕ್ಕೂ ಅಧಿಕ ಹುದ್ದೆಗಳ ಭರ್ತಿ ಪ್ರಕ್ರಿಯೆ ಶೀಘ್ರದಲ್ಲಿಯೇ ಶುರುವಾಗಲಿ ಎಂದು ತಿಳಿದು ಬಂದಿದೆ. ಸುಮಾರು 85,000 ಹುದ್ದೆಗಳ ನೇಮಕಾತಿಗಳಿಗಾಗಿ ಎಲ್ಲಾ ಇಲಾಖೆಗಳ ಬೇಡಿಕೆ ಪ್ರಕ್ರಿಯೆ ವಿವಿಧ ಹಂತದಲ್ಲಿವೆ. ಕೆಲವು ಆರ್ಥಿಕ ಇಲಾಖೆ ಕೋರುವ ಹಂತದಲ್ಲಿದ್ದು, ಶೀಘ್ರವೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಎಲ್ಲ ಜಾತಿಗಳಿಗೆ ಶಿಕ್ಷಣ, ಉದ್ಯೋಗ ಮತ್ತು ಇತರೆ ವಿಷಯಗಳಲ್ಲಿ ಅವಕಾಶಗಳನ್ನು ಒದಗಿಸುವಾಗ ಸಮಾನತೆ ಮತ್ತು ನ್ಯಾಯ ಸಮ್ಮತಿಯನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ ಈ ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಮರ್ಥನೆ ನೀಡಿದರು. ಇದೀಗ ರಾಜ್ಯದಲ್ಲಿ ಮಂಜೂರಾದ 7,76,414 ಹುದ್ದೆಗಳಿದ್ದು, 4,91,533 ಹುದ್ದೆಗಳು ಭರ್ತಿಯಾಗಿವೆ. 2,84,881 ಖಾಲಿ ಹುದ್ದೆಗಳಿವೆ.ಮೀಸಲಾತಿ ಅನ್ವಯವಾಗುವ ಹುದ್ದೆಗಳ ನೇರ ನೇಮಕಾತಿಗೆ ಹೊಸದಾಗಿ ಯಾವುದೇ ಅಧಿಸೂಚನೆ ಹೊರಡಿಸದಂತೆ 2024ರ ನವೆಂಬರ್ 25 ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿತ್ತು. ಇದೀಗ ಒಳ ಮೀಸಲಾತಿ ಜಾರಿಯಾಗಲಿರುವುದರಿಂದ ನೇಮಕಾತಿಗೆ ಮತ್ತು ಬಡ್ತಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.
ವಾಯುವ್ಯ ಕರ್ನಾಟಕ ಸಾರಿಗೆಯ 1000 ಚಾಲಕರ ಹುದ್ದೆ ಭರ್ತಿಗೆ ಪ್ರಕ್ರಿಯೆ ಆರಂಭವಾಗಿದ್ದು, ಒಟ್ಟು 4500 ಹುದ್ದೆಗಳನ್ನು ಭರ್ತಿ ಮಾಡಲು ಹಣಕಾಸು ಇಲಾಖೆಗೆ ಅನುಮತಿ ಕೋರಲಾಗಿದೆ. ಪರಿಶಿಷ್ಟ ಮೀಸಲು ಹಂಚಿಕೆ ಸರ್ಕಾರದ ಆದೇಶ ಪ್ರಕಟವಾಗುತ್ತಿದ್ದಂತೆ ಶೇಕಡ 17ರ ಮೀಸಲಾತಿ 6:6:5ರಂತೆ ಹಂಚಿಕೆಯಾಗಲಿದೆ.












Click it and Unblock the Notifications