ಪುನೀತ್ ರಾಜಕುಮಾರ್ ಒಳ್ಳೆತನ ಇದೇ ಮಣ್ಣಿನಲ್ಲಿ ಉಸಿರಾಡುತ್ತಿದೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನು ಅಗಲಿ ವರ್ಷಗಳೇ ಕಳೆದರೂ ಅವರ ಮೇಲಿನ ಅಭಿಮಾನ ಅಭಿಮಾನಿಗಳಲ್ಲಿ ಕೊಂಚವೂ ಕಡಿಮೆ ಆಗಿಲ್ಲ. ಅಪ್ಪುವಿನ ಹೆಸರಿನಲ್ಲಿ ಮಾಡುವ ಕೆಲಸ ಒಂದಾ ಎರಡಾ ಹೇಳುತ್ತಾ ಹೋದರೆ, ಪ್ರಾಯಶಃ ಕಾದಂಬರಿ ಬರೆಯಬಹುದು. ಅಪ್ಪುಅಭಿಮಾನಿಗಳ ಅಭಿಮಾನವೇ ಹಾಗಿದೆ..
ಭಾಷೆಯ ಪರಿಧಿ ಮೀರಿ ಗಡಿಯ ಎಲ್ಲೆ ದಾಟಿ ಜನರ ನಾಡಿ ಮಿಡಿತವನ್ನು ತಲುಪಿರುವ ನಟ ಅಂದರೆ ಅದು ಪವರ್ ಸ್ಟಾರ್ ಪುನೀತ್ ರಾಜಕುಮಾರ್. ಸದ್ಯ ಮತ್ತೆ ಈಗ ಅಪ್ಪುವಿಗಾಗಿ ಜನ ಮಾಡಿರುವ ಕೆಲಸ ಟ್ರೆಂಡಿಂಗ್ ಅಲ್ಲಿದೆ. ಪುನೀತ್ ರಾಜಕುಮಾರ್ ಗೋಸ್ಕರ ಮಾಡುತ್ತಿರುವ ನೇತ್ರದಾನ ಕೂಡ ಸದ್ಯ ಯಶಸ್ವಿಯಾಗಿ ಸಾಗುತ್ತಿದೆ.
ಸ್ಯಾಂಡಲ್ ವುಡ್ಡಿನ ಪವರ್ ಫುಲ್ ನಟ ಪವರ್ ಸ್ಟಾರ್ ನಮ್ಮನ್ನು ಭೌತಿಕವಾಗಿ ಅಗಲಿ ಒಂದೂವರೆ ವರ್ಷ ಕಳೆದುಹೋಗಿದೆ. ಯಾವುದೇ ವಿವಾದಗಳ ಮೈ ಮೇಲೆ ಎಳೆದು ಕೊಳ್ಳದೇ ಜನಪರ ಕೆಲಸ ಮಾಡುತ್ತಾ ಸಾವಿನಲ್ಲೂ ಸಾರ್ಥಕತೆ ಮೆರೆದವರು ಪವರ್ ಸ್ಟಾರ್ ಪುನೀತ್..

ಮಣ್ಣಾಗುವ ಮುನ್ನ ನೇತ್ರದಾನ ಮಾಡಿ ನಾಲ್ವರ ಬದುಕಿಗೆ ಕಣ್ಣಾದವರು. ಯುವರತ್ನನ ನೇತ್ರದಾನ ಯುವಜನರಿಗೆ ಸ್ಪೂರ್ತಿ ತುಂಬಿದ ಪರಿಣಾಮ ಕಳದೆರಡು ವರ್ಷದಲ್ಲಿ ನೇತ್ರದಾನ ಮಾಡೋರ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಜನ ಈಗ ಸ್ವಯಂ ತಾವೇ ಮುಂದೆ ಬಂದು ನೇತ್ರದಾನ ಮಾಡುತ್ತಾ ಇದ್ದಾರೆ.
ಅಪ್ಪು ನೇತ್ರದಾನ ಮಾಡಿದ ಬಳಿಕ ನೇತ್ರದಾನಕ್ಕೆ ಮುಂದೆ ಬರ್ತಿರುವವರ ಸಂಖ್ಯೆ ದಿಢೀರ್ ಏರಿಕೆ ಆಗಿರುವುದು ಕಾಣಬಹುದು. ತಂದೆಗೆ ತಕ್ಕ ಮಗನಾಗಿದ್ದ ದೊಡ್ಮನೆಯ ಕುಡಿ, ಡಾ.ರಾಜಕುಮಾರ್ ರಂತೆ ನೇತ್ರದಾನ ಮಾಡಿರುವ ವಿಚಾರ ನಿಮಗೆಲ್ಲಾ ಗೊತ್ತೆ ಇರುತ್ತೆ. ಅಪ್ಪು ನೇತ್ರದಾನದ ಮಾಡಿದ ಕೇವಲ ಎರಡು ವರ್ಷದಲ್ಲಿ ಹೊಸ ಚರಿತ್ರೆ ಸೃಷ್ಟಿಯಾಗಿದೆ. ಯುವಕರೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುತ್ತಿದ್ದಾರೆ.
ಯುವಜನರು ಸ್ವಯಂ ಪ್ರೇರಿತರಾಗಿ ಮುಂದೆ
20 ರಿಂದ 30 ವರ್ಷದ ಯುವ ಜನರಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡಿ ಕೊಳ್ಳಲಾಗುತ್ತಿದ್ದು , ಕಳೆದ 28 ವರ್ಷದಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡ್ಕೊಂಡವರ ಸಂಖ್ಯೆ ಖಾಲಿ 75, 000ದಷ್ಟೆ ಇತ್ತು. ಇನ್ನೂ 2021ರ ಅಕ್ಟೋಬರ್ ನಿಂದ 2023ರ ಆಗಸ್ಟ್ ತನಕ ನೋಂದಣಿ ಮಾಡಿಕೊಂಡವರ ಸಂಖ್ಯೆ 1,27,924 ರಷ್ಟಾಗಿದೆ.

ಆನ್ ಲೈನ್ ಮೂಲಕ 1,10,000, ಆಸ್ಪತ್ರೆಗೆ ಭೇಟಿ ಕೊಟ್ಟು 17,924 ಜನರಿಂದ ನೋಂದಣಿ ಮಾಡಿಕೊಳ್ಳಲಾಗಿದೆ. ನಾರಾಯಣ ನೇತ್ರಾಲಯದಲ್ಲಿ 2 ವರ್ಷದಲ್ಲಿ 3,989 ಮಂದಿಯಿಂದ ಈಗಾಗಲೇ ನೇತ್ರದಾನ ಕೂಡ ಮಾಡಲಾಗಿದೆ. ಯುವರತ್ನ ನಡೆಯಿಂದ ನೇತ್ರದಾನ ಮಾಡಲು ಯುವಜನರು ಸ್ವಯಂ ಪ್ರೇರಿತರಾಗಿ ಮುಂದೆ ಬರುತ್ತಿದ್ದಾರೆ.
ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿ ನೇತ್ರದಾನಕ್ಕೆ ನೋಂದಣಿ
20 ರಿಂದ 30 ವರ್ಷದ ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡುತ್ತಿದ್ದಾರೆ.1993 ರಿಂದ 2021ರ ಆಗಸ್ಟ್ ತನಕ ನಾರಾಯಣ ನೇತ್ರಾಲಯದಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡಿಕೊಂಡವರ ಸಂಖ್ಯೆ 75,000. ಆದರೆ ಅಪ್ಪು ಅಗಲಿದ 2021ರ ಅಕ್ಟೋಬರ್ ನಿಂದ 2023ರ ಆಗಸ್ಟ್ ಮೂರನೇ ವಾರದ ತನಕ ನೋಂದಣಿ ಮಾಡ್ಕೊಂಡವರ ಸಂಖ್ಯೆ ಬರೋಬ್ಬರಿ 1,27,924ಕ್ಕೂ ಅಧಿಕವಾಗಿದೆ.
ಅಪ್ಪು ಒಳ್ಳೆಯತನ ಇನ್ನೂ ಇದೇ ಮಣ್ಣಿನಲ್ಲಿ ಉಸಿರಾಡುತ್ತಿದೆ
ಅಪ್ಪು ನಮ್ಮನ್ನಗಲಿದರೂ ಅವರು ಮಾಡಿರುವ ಸಮಾಜಮುಖಿ ಕೆಲಸಗಳು , ಒಳ್ಳೆಯತನ ಇನ್ನೂ ಇದೇ ಮಣ್ಣಿನಲ್ಲಿ ಉಸಿರಾಡುತ್ತಿದೆ ಅನ್ನುವುದಕ್ಕೆ ಇದು ಮತ್ತೊಂದು ಉದಾಹರಣೆ. ಅಪ್ಪುವಿಗಾಗಿ ಯುವ ಮನಸ್ಸುಗಳು ಕೂಡ ತಾ ಮುಂದು ನಾ ಮುಂದು ಅಂತ ನೇತ್ರದಾನ ಮಾಡಲು ನೋಂದಣಿ ಆಗುತ್ತಾ ಇದ್ದಾರೆ.. ಈ ಒಳ್ಳೆ ಟ್ರೆಂಡ್ ಇನ್ನೂ ಜಾಸ್ತಿ ಆಗಲಿ ಅನ್ನೋದೆ ವೈದ್ಯರ ಆಶಯ..












Click it and Unblock the Notifications