Ration Card: ಪಡಿತರ ಚೀಟಿ ಪಡೆದ ಅನರ್ಹರಿಂದ ₹1.89 ಕೋಟಿ ದಂಡ ವಸೂಲಿ, ರದ್ದಾದ ಕಾರ್ಡುಗಳೆಷ್ಟು?
ಬೆಳಗಾವಿ, ಆಗಸ್ಟ್ 23: ರಾಜ್ಯಾದ್ಯಂತ ಅಕ್ರಮವಾಗಿ ರೇಷನ್ ಕಾರ್ಡ್ ಪಡೆಯುತ್ತಿರುವವರ ಪತ್ತೆ ಮಾಡುವ ಅಭಿಯಾನವನ್ನು ಸರ್ಕಾರ ಮುಂದುವರೆಸಿದೆ. ಇದರ ಭಾಗವಾಗಿ ರಾಜ್ಯದ ದೊಡ್ಡ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾಡಳಿತವು ಅರ್ಹತೆ ಇಲ್ಲದಿದ್ದರೂ ನಕಲಿ ದಾಖಲಾತಿ ಮುಖೇನ ಪಡಿತರ ಚೀಟಿ ಹೊಂದಿದವರ ವಿರುದ್ಧ ಸಮರ ಸಾರಿದೆ. ಅಲ್ಲದೇ ಆರು ತಿಂಗಳಿಂದ ಪಡಿತರ ಪಡೆಯದವರ ಕಾರ್ಡ್ ರದ್ದುಗೊಳಿಸುವ ಮೂಲಕ ಶಿಸ್ತು ಕ್ರಮ ಜರುಗಿಸಿದೆ.
ಹೌದು, ನಕಲಿ ದಾಖಲೆ ನೀಡಿ ಆದ್ಯತಾ ಪಡಿತರ ಚೀಟಿ ಪಡೆದವರಿಂದ ಜಿಲ್ಲಾಡಳಿತ ಬರೋಬ್ಬರಿ 1.89 ಕೋಟಿ ರೂಪಾಯಿ ಹಣವನ್ನು ದಂಡವಾಗಿ ಪಡೆದುಕೊಂಡಿದೆ. ಈ ಮೂಲಕ ನಕಲಿ ದಾಖಲಿ, ಅರ್ಹತೆ ಇಲ್ಲದಿದ್ದರೂ ರೇಷನ್ ಕಾರ್ಡ್ ಪಡೆದವರಿಗೆ ಸೂಕ್ತ ಎಚ್ಚರಿಕೆ ಸಂದೇಶ ರವಾನಿಸಿದೆ.

ಇನ್ನೂ ಕಳೆದ ಆರು ತಿಂಗಳಿನಿಂದ ಕಾರ್ಡ್ ಹೊಂದಿದ್ದು, ಪಡಿತರ ಅಕ್ಕಿ, ಗೋಧಿ ಪಡೆಯದೇ ಇದ್ದ ಸುಮಾರು 20000 ಕಾರ್ಡ್‌ಗಳನ್ನು ಜಿಲ್ಲಾಡಳಿತ ರದ್ದುಗೊಳಿಸಿದೆ. ಈ ಕುರಿತು ಸ್ವತಃ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ.
45000ಕ್ಕೂ ಹೆಚ್ಚು ಕಾರ್ಡ್ ಪರಿವರ್ತನೆ
ಈ ರೇಷನ್ ಪಡೆಯದೇ ಕಾರ್ಡ್ ರದ್ದಗೊಳಿಸಿದ ಪೈಕಿ 19000ಕ್ಕೂ ಹೆಚ್ಚು ನಕಲಿ ದಾಖಲೆ ಸೃಷ್ಟಿಸಿ ಆದ್ಯತಾ ಪಡಿತರ ಚೀಟಿ ಪಡೆದು ವಂಚಿಸಿದ್ದವರಿದ್ದಾರೆ. ಅವರಿಂದ 1,89 ರೂ.ದಂಡ ವಸೂಲಿ ಮಾಡಲಾಗಿದೆ. ಇನ್ನೂ ರದ್ದಾಗಿದ್ದರಲ್ಲಿ ರೇಷನ್ ಪಡೆಯದ 558 ಅಂತ್ಯೋದಯ ಕಾರ್ಡುಗಳು ಇವೆ ಎಂದು ಜಿಲ್ಲಾಡಳಿತ ಅಂಕಿ ಅಂಶ ನೀಡಿದೆ. ಇನ್ನೂ ಸರ್ಕಾರಿ ನೌಕರರು ಮತ್ತು ಅರ್ಹತೆ ಇಲ್ಲದ ಒಟ್ಟು 45000ಕ್ಕೂ ಹೆಚ್ಚು ಆದ್ಯತಾ ರೇಷನ್ ಕಾರ್ಡ್‌ಗಳನ್ನು 'ಆದ್ಯತೇತರ' ಎಂದು ಪರಿವರ್ತನೆ ಮಾಡಲಾಗಿದೆ ಎಂದರು.

ಬಿಪಿಎಲ್ ಕಾರ್ಡ್ ಪಡೆಯಲು ಇರುವ ಅರ್ಹತೆಗಳೇನು?
ಯಾವ ಕುಟುಂಬದ ವರಮಾನ ವಾರ್ಷಿಕವಾಗಿ 1.20ಲಕ್ಷಕ್ಕಿಂತ ಕಡಿಮೆ ವರಮಾನ ಹೊಂದಿರುತ್ತದೆಯೋ ಅಂತಹ ಬಡವರು ಬಿಪಿಎಲ್ ಕಾರ್ಡ್ ಹೊಂದಲು ಅವಕಾಶ ಇರುತ್ತದೆ. ಅಲ್ಲದೇ ಮೂರು ಹೆಕ್ಟರ್‌ಗಿಂತ ಕಡಿಮೆ ಒಣ, ನೀರಾವರಿ ಜಮೀನು ಹೊಂದಿಲ್ಲದವರು ಅರ್ಹರು ಎಂದು ಪರಿಣಿಸಲಾಗುತ್ತದೆ.
ಇದರೊಂದಿಗೆ ವಾಣಿಜ್ಯ ಅಥವಾ ಸ್ವಂತ ಬಳಕೆಯ ನಾಲ್ಕು ಚಕ್ರದ ವಾಹನ ಇರಬಾರದು. ನಗರ ಅಥವಾ ಪಟ್ಟಣಗಳಲ್ಲಿ 1000 ಚದರ ಅಡಿಯಲ್ಲಿ ಸ್ವಂತ ಮನೆ ಇರುವವರಿಗೆ ಕಾರ್ಡ್ ಪಡೆಯಲು ಅನರ್ಹರಾಗುತ್ತಾರೆ. ಇನ್ನೂ ಸರ್ಕಾರಿ, ಅನುದಾನಿ ಸಂಸ್ಥೆಗಳಲ್ಲಿ ಖಾಯಂ ಆಗಿ ಕೆಲಸ ಮಾಡುವ ಕುಟುಂಬಗಳು ಅನರ್ಹವಾಗಿರುತ್ತವೆ ಎಂಬ ನಿಯಮ ಇದೆ. ಅರ್ಹತೆ ಇಲ್ಲದೇ ನಕಲಿ ದಾಖಲಾತಿ ಆಧಾರದಲ್ಲಿ ಪಡಿತರ ಪಡೆದವರ ವಿರುದ್ಧ 'ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ' ನಿರ್ದೇಶನ ಮೇರೆಗೆ ಜಿಲ್ಲಾಡಳಿತ ಅಭಿಯಾನ ನಡೆಸಿತ್ತು.












Click it and Unblock the Notifications