Ration card: 'ಅಕ್ಕಿ ವಿತರಣೆಯಲ್ಲೂ ದಿನಕ್ಕೊಂದು ನಿಯಮ'
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗಳ ರದ್ದು ಹಾಗೂ ಬಿಪಿಎಲ್ ನಿಂದ ಎಪಿಎಲ್‌ಗೆ ಕಾರ್ಡ್‌ಗಳ ವರ್ಗಾವಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಗೊಂದಲ ಸೃಷ್ಟಿಯಾಗಿದೆ. ಇದರಿಂದ ಜನ ಮತ್ತೆ ಸರ್ಕಾರಿ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಇದೀಗ ಅಕ್ಕಿ ವಿತರಣೆಯಲ್ಲೂ ಬಯೋ ಮೆಟ್ರಿಕ್ ಪದ್ಧತಿ ಅಳವಡಿಸಿಕೊಳ್ಳಲಾಗಿದ್ದು, ಇದರಿಂದ ಫಲಾನುಭವಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಅನರ್ಹ ಕಾರ್ಡ್‌ಗಳನ್ನು ರದ್ದು ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದರೆ ರಾಜ್ಯದ ಜನ ಹಾಗೂ ವಿರೋಧ ಪಕ್ಷಗಳಿಂದ ಇದಕ್ಕೆ ಭಾರೀ ವಿರೋಧ ವ್ಯಕ್ತವಾದ ಮೇಲೆ ಪರಿಷ್ಕರಣೆಯನ್ನು ರದ್ದು ಮಾಡಿರುವುದಾಗಿ ಹೇಳಿತ್ತು. ಆದರೆ..
ರೇಷನ್ ಕಾರ್ಡ್‌ಗಳ ಪರಿಷ್ಕರಣೆ ಹಾಗೂ ಅಕ್ಕಿ ವಿತರಣೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಗೊಂದಲ ಮುಂದುವರಿದಿದೆ. ರೇಷನ್ ಪಡೆದುಕೊಳ್ಳುವುದಕ್ಕೆ ಪಡಿತರ ಚೀಟಿದಾರರು ಸಂಕಷ್ಟ ಅನುಭವಿಸುತ್ತಿರುವುದು ವರದಿಯಾಗುತ್ತಿದೆ. ಅಲ್ಲದೇ ರೇಷನ್ ಕಾರ್ಡ್‌ನ ತಿದ್ದುಪಡಿಗಾಗಿ ಜನ ಸರ್ಕಾರಿ ಕಚೇರಿಗಳಿಗೆ ಅಲೆಯುವುದು ಮುಂದುವರಿದಿದೆ.

ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಬಿಪಿಎಲ್ ಕಾರ್ಡ್ ರದ್ದುಗೊಳಿಸಿ ಬಡವರ ಹೊಟ್ಟೆಗೆ ಹೊಡೆದಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಅಕ್ಕಿ ವಿತರಣೆಯಲ್ಲೂ ದಿನಕ್ಕೊಂದು ನಿಯಮ ಜಾರಿಗೊಳಿಸುತ್ತಿದೆ. ಈ ಮೂಲಕ ಹಸಿದವರ ಬಾಯಿಗೆ ಮಣ್ಣು ಹಾಕಲು ಹೊರಟಿದೆ ಎಂದು ಹೇಳಿದೆ. ಅಲ್ಲದೇ, ಮೋದಿ ಸರ್ಕಾರದ 5 ಕೆಜಿ ಅಕ್ಕಿ ಕೊಡಲು ಓಟಿಪಿ ಪದ್ಧತಿ ಅನುಸರಿಸುತ್ತಿದ್ದ ಸಿದ್ದರಾಮಯ್ಯ ಅವರ ಸರ್ಕಾರ ಈಗ ಏಕಾಏಕಿ ಬಯೋ ಮೆಟ್ರಿಕ್ ಪದ್ಧತಿ ಜಾರಿಗೊಳಿಸಿ ಅರ್ಹ ಫಲಾನುಭವಿಗಳಿಗೆ ದ್ರೋಹ ಬಗೆದಿದೆ ಎಂದು ದೂರಿದೆ.
ಕೆ.ಎಚ್ ಮುನಿಯಪ್ಪ ಅವರೇ, ನಿಮ್ಮ ಗೊಂದಲಮಯ ನೀತಿ ಹಾಗೂ ನಿರ್ಧಾರಗಳು ಬಡವರ ಬದುಕಿಗೆ ಮಾರಕವಾಗಿವೆ. ಕೂಡಲೇ, ಜನರಿಗೆ ಪೂರಕವಾಗಿರುವ ಮತ್ತು ಜನರೇ ಬಯಸುತ್ತಿರುವ ಓಟಿಪಿ ಪದ್ಧತಿಯನ್ನೇ ಮುಂದುವರಿಸಿ ಎಂದು ಬಿಜೆಪಿ ಆಗ್ರಹಿಸಿದೆ.
ಇನ್ನು ರೇಷನ್ ಕಾರ್ಡ್ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಜೆಡಿಎಸ್ ಸಹ ತರಾಟೆಗೆ ತೆಗೆದುಕೊಂಡಿದೆ. ರಾಜ್ಯದಲ್ಲಿ ವಚನ ಭ್ರಷ್ಟ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ತೊಘಲಕ್ ಆಡಳಿತದ ಹುಚ್ಚಾಟ ಮಿತಿಮೀರಿದೆ ಎಂದು ಆರೋಪಿಸಿದೆ. ಯಾವುದೇ ಸೂಕ್ತ ದಾಖಲೆಗಳನ್ನು ಪರಿಶೀಲನೆ ಮಾಡದೆಯೇ ಏಕಾಏಕಿ 22 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿರುವುದು ಕಾಂಗ್ರೆಸ್ ಸರ್ಕಾರದ ಜನವಿರೋಧಿ ನಡೆಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದೆ.
22 ಲಕ್ಷ ಕಾರ್ಡ್ ರದ್ದು ಮಾಡುವ ಮೊದಲು ಅನರ್ಹರ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತೇ ಇಲ್ಲ, ಅನರ್ಹರು ಎಂದು ಯಾವ ಮಾನದಂಡಗಳ ಆಧಾರದ ಮೇಲೆ ಮೇಲೆ ಪರಿಗಣಿಸಲಾಗಿದೆ ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ. ದಿನಕ್ಕೊಂದು ಆದೇಶಗಳು, ಗಂಟೆಗೆ ಒಬ್ಬರಂತೆ ಸಚಿವರಿಂದ ಸಮರ್ಥನೆ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.
ಅಲ್ಲದೇ ಸರ್ಕಾರಿ ನೌಕರರು ಹಾಗೂ ತೆರಿಗೆದಾರರ ಬಿಪಿಎಲ್ ಕಾರ್ಡ್‌ಗಳನ್ನಷ್ಟೇ ರದ್ದು ಮಾಡಿದ್ದೇವೆ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನುಳಿದ ಬಡವರ ಕಾರ್ಡ್‌ಗಳನ್ನು ಯಾವ ಕಾರಣಕ್ಕೆ ಹಾಗೂ ಏಕಾಏಕಿ ರದ್ದು ಮಾಡುವ ಅನಿವಾರ್ಯತೆ ಏನಿತ್ತು ಎಂದು ಜೆಡಿಎಸ್ ಪ್ರಶ್ನೆ ಮಾಡಿದೆ.












Click it and Unblock the Notifications