ಮಗುವಿನೊಳಗೊಂದು ಮಗು ಕರ್ನಾಟಕದಲ್ಲಿ ಅಪರೂಪದ ಪ್ರಕರಣ!
ಮಗುವಿನೊಳಗೆ ಮಗು ಜಗತ್ತಿನಲ್ಲಿಯೇ ಅತೀ ವಿರಳ ಪ್ರಕರಣವಾಗಿದ್ದು, ಸರಾಸರಿ 5 ಲಕ್ಷ ಜನ್ಮಗಳಲ್ಲಿ ಒಂದಾಗಿರುತ್ತದೆ. ಅಂತಹ ಅಪರೂಪದ ಪ್ರಕರಣವನ್ನು ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಮಾಡಲಾಗಿದೆ ಎಂದು ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ (ಧಾರವಾಡ) ನಿರ್ದೇಶಕರಾದ ಡಾ.ಈಶ್ವರ ಹೊಸಮನಿ ಅವರು ತಿಳಿಸಿದ್ದಾರೆ.
ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 23 ರಂದು ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಗರ್ಭಿಣಿಯೊಬ್ಬರು ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಹಜ ಹೆರಿಗೆ ಮೂಲಕ 3.5 ಕೆಜಿ ತೂಕದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ದೇಹದಲ್ಲಿ ಎಲುಬಿನ ರೀತಿಯ ಅಂಶಗಳು ಕಂಡು ಬಂದಿವೆ. ಹೃದಯ ಬಡಿತ, ಪುಪ್ಪಸ, ಮೆದುಳು ರೀತಿಯ ಜೀವಂತ ಅಂಶಗಳು ಕಂಡು ಬಂದಿರುವುದಿಲ್ಲ.

ದ್ರವ್ಯ ರಾಶಿಗಳು ರೂಪಾಂತರಗೊಂಡು ಬದಲಾವಣೆ ರೂಪ ಪಡೆದು ಹೀಗಾಗಿತ್ತು. ಹೆರಿಗೆಯಾಗುವವರೆಗೆ ಮಗುವಿನ ಸ್ಕ್ಯಾನ್ ಮಾಡಲಾಗಿದ್ದು, ಮಗುವಿನೊಳಗೆ ಯಾವುದೇ ರೀತಿಯ ಹೆಚ್ಚಿನ ಬೆಳವಣಿಗೆ ಕಂಡು ಬರಲಿಲ್ಲ. ಹೆರಿಗೆ ಬಳಿಕ ಮಗುವಿನ ಸ್ಕ್ಯಾನ್ ಮಾಡಿದಾಗ ಗಡ್ಡೆ ಅದೇ ಜಾಗದಲ್ಲೇ ಇತ್ತು. ಅಕ್ಟೋಬರ್ 7 ರಂದು ಚಿಕ್ಕ ಮಕ್ಕಳ ಶಸ್ತ್ರ ಚಿಕಿತ್ಸಕರಾದ ಡಾ.ರಾಜಶಂಕರ ಅವರು ಮಗುವಿಗೆ ಅತೀ ಸೂಕ್ಷ್ಮ ಶಸ್ತ್ರ ಚಿಕಿತ್ಸೆ ಮಾಡಿದರು. ಪ್ರಸ್ತುತ ಮಗು ಚೇತರಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಮಗುವಿನ ಆರೈಕೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಪೋಷಕರಿಗೆ ತಿಳಿಸಲಾಗಿದೆ. ಕಾಲಕಾಲಕ್ಕೆ ಮಗುವಿನ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದಿದ್ದಾರೆ.
ಕಳೆದ 4 ವರ್ಷಗಳಿಂದ ಸಕ್ಕರೆ ಖಾಯಿಲೆ ಚಿಕಿತ್ಸೆ ಪಡೆಯುತ್ತಿದ್ದ ಹುಬ್ಬಳ್ಳಿಯ ಅನಿತಾ ಜಗದೀಶ ಹೊನ್ನಕೇರಿ ಅವರ ಎಡಗೈಯಲ್ಲಿ ನೋವು ಮತ್ತು ಊತ ಕಾಣಿಸಿಕೊಂಡಿದೆ. ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಂತರ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ತುರ್ತು ಚಿಕಿತ್ಸಾ ಘಟಕಕ್ಕೆ ಅಕ್ಟೋಬರ್ 5 ರಂದು ದಾಖಲಾಗಿದ್ದಾರೆ. ಎಡಗೈಯಲ್ಲಿ ನೋವು ಇದ್ದರೂ ನಾಡಿ ಮಿಡಿತವಿರಲಿಲ್ಲ. ಅಲ್ಲದೇ ರಕ್ತ ಪ್ರವಾಹ ಕೂಡ ಇರಲಿಲ್ಲ.
ಹೃದಯ ತಜ್ಞರು, ತೆರೆದ ಹೃದಯಶಸ್ತ್ರ ಮತ್ತು ರಕ್ತನಾಳಗಳ ಚಿಕಿತ್ಸಕರ ತಂಡ ರೋಗಿಗೆ ತುರ್ತು ಶಸ್ತ್ರ ಚಿಕಿತ್ಸೆ ಮಾಡಲು ನಿರ್ಧಾರ ಮಾಡಿದರು. ಶಸ್ತ್ರ ಚಿಕಿತ್ಸೆಗೆ ಅವಶ್ಯಕವಿದ್ದ ಫೋಗಾರ್ಟಿ ಕ್ಯಾಥೆಟರ್ ಸಂಸ್ಥೆಯಲ್ಲಿ ಲಭ್ಯವಿರಲಿಲ್ಲ. ನಂತರ ಸ್ಥಳೀಯ ಅನುದಾನದಲ್ಲಿ ಫೋಗಾರ್ಟಿ ಕ್ಯಾಥೆಟರ್ ಖರೀದಿಸಿ, ಅಕ್ಟೋಬರ್ 7 ರಂದು ಡಾ.ಕೋಬಣ್ಣ ಕಟ್ಟಿಮನಿ ಅವರು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿದರು. ಪ್ರಸ್ತುತ ರೋಗಿಯು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಲು ಸಿದ್ದರಾಗಿದ್ದಾರೆ ಎಂದರು.
ಪ್ರಸಕ್ತ ಸಾಲಿನಲ್ಲಿ 15,382 ಮೇಜರ್ ಓಟಿ, 59,845 ಡೇ ಕೇರ್ ಓಟಿ ಸೇರಿದಂತೆ ಒಟ್ಟಾರೆಯಾಗಿ 75,227 ಓಟಿ ಮಾಡಲಾಗಿದೆ. ಪ್ರತಿದಿನ ಸರಾಸರಿ 252 ಓಟಿ ನಡೆಸಲಾಗುತ್ತಿದೆ. 3,791 ಸಾಮಾನ್ಯ ಶಸ್ತ್ರಚಿಕಿತ್ಸೆ, 3,810 ಇಎನ್‌ಟಿ, 1,637 ಆರ್ಥೋ, 1,633 ಒಬಿಜಿ, 540 ಆಪ್ತಾಲಮಾಲೋಜಿ, 694 ನ್ಯೂರೋ ಸರ್ಜರಿ, 9,553 ಯುರೋಲಾಜಿ, 459 ಪ್ಲಾಸ್ಟಿಕ್ ಸರ್ಜರಿ, 332 ಸುರ್ ಗ್ಯಾಸ್ಟ್ರೋ, 779 ಪೀಡ್ ಸರ್ಜರಿ, 538 ಸುರ್ ಆಂಕೋ ಮಾಡಲಾಗಿದೆ. ಐವಿಎಫ್ ಬ್ಲಾಕ್, ಕ್ರಿಟಿಕಲ್ ಕೇರ್ ಬ್ಲಾಕ್ ಕಾಮಗಾರಿಗಳು ನಡೆಯುತ್ತಿವೆ. ಹೊಸ ಒಪಿಡಿ ಕೌಂಟರ್ ಪ್ರಾರಂಭಿಸಲಾಗಿದೆ. ಆದ್ಯತೆಯ ಮೇರೆಗೆ ಹೊರಗುತ್ತಿಗೆ ಸೇರಿದಂತೆ ವಿವಿಧ ನೇಮಕಾತಿಗಳನ್ನು ಮಾಡಿಕೊಳ್ಳಲಾಗುವುದು. ಸರ್ಕಾರದ ಅನುದಾನ ಸದ್ಬಳಕೆಯಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.












Click it and Unblock the Notifications