ರೇಪ್ ಕೇಸ್: ಬಂಧನ ಭೀತಿಯಲ್ಲಿ ಶಾಸಕ ಜೀವರಾಜ್

ಮಾಜಿ ಸಚಿವರ ವಿರುದ್ಧ ಶುಕ್ರವಾರ ಬೆಳಗ್ಗೆ ನೊಂದ ಯುವತಿ ನರಸಿಂಹರಾಜಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಜೀವರಾಜ್ ಅವರ ವಿರುದ್ಧ ಐಪಿಸಿ ಸೆಕ್ಷನ್ 366, 354, 376 ಹಾಗೂ 506ರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅತ್ಯಾಚಾರ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದ್ದು, ವಿಚಾರಣೆ ನಡೆಸಲು ಶಾಸಕ ಜೀವರಾಜ್ ಅವರನ್ನು ಬಂಧಿಸುವ ಸಾಧ್ಯತೆಯಿದೆ.
2010ರಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಈ ಸಂಬಂಧ ಮಾಧ್ಯಮಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ಜೀವರಾಜ್ ಅವರು ನಿರಾಕರಿಸಿದ್ದಾರೆ. ಜೀವರಾಜ್ ಅವರ ಬೆಂಬಲಿಗರು ಶೀಘ್ರವೇ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡುವ ಸುಳಿವು ನೀಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಜೀವರಾಜ್, 'ಶೃಂಗೇರಿ ಶಾರದಾಂಬೆ ಮೇಲಾಣೆ ನಾನು ಅತ್ಯಾಚಾರ ಎಸಗಿಲ್ಲ. ಯಾವುದೇ ರೀತಿ ತಪ್ಪು ಮಾಡಿಲ್ಲ. ನನ್ನ ರಾಜಕೀಯ ಏಳಿಗೆ ಸಹಿಸದೆ ಆರೋಪ ಮಾಡಿದ್ದಾರೆ. ಯುವತಿಯ ಸಂಬಂಧಿಕರಿಗೆ ಬಗರ್ ಹುಕಂ ವಿಷಯದಲ್ಲಿ ಅವರಿಗೆ ಸಹಾಯ ಮಾಡಿದ್ದೆ. ಆದರೆ ನನಗೆ ಈಗ ತೊಂದರೆಗೆ ಸಿಲುಕಿಸಿದ್ದಾರೆ. ನಾನು ಎಲ್ಲವನ್ನು ಧೈರ್ಯವಾಗಿ ಎದುರಿಸುತ್ತೇನೆ' ಎಂದಿದ್ದಾರೆ
ಎನ್ ಆರ್ ಪುರದ ಕೆಸಕಿ ಮಡಬೂರು ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣದ ಬಗ್ಗೆ ಇನ್ನಷ್ಟು ವಿವರ ನೀಡಿದ ಜೀವರಾಜ್ ಅವರು " ಅರಣ್ಯ ಅವರ ಮನೆಗೂ ನಮ್ಮ ಮನೆಗೂ 10 ಕಿ.ಮೀ ದೂರ ಇದೆ. ಮನು ನಮ್ಮ ಜತೆ ಹತ್ತಾರು ವರ್ಷದಿಂದ ಜತೆಗಿದ್ದವರು. ಮನು ಅವರ ಹೆಂಡತಿ ಚಿಕ್ಕಮ್ಮನ ಮಗಳು ಅರಣ್ಯ. ಹೀಗಾಗಿ ನನಗೂ ಪರಿಚಯ ಇದ್ದೇ ಇದೆ. ಇವರ ಮೇಲೆ ಈಗಾಗಲೇ ವಿಧಾನಸಭಾ ಠಾಣೆಯಲ್ಲಿ ಆಗಸ್ಟ್ ತಿಂಗಳಿನಲ್ಲೇ ದೂರು ನೀಡಿದ್ದೇನೆ.
ಜುಲೈ 19 ರಿಂದ ಮೂರು ದಿನ ನನ್ನನ್ನು ಪೀಡಿಸಿದ್ದರು. ಹಣ ಕೊಡದಿದ್ದರೆ ಬ್ಲಾಕ್ ಮೇಲ್ ಮಾಡುವುದಾಗಿ ಬೆದರಿಕೆ ನೀಡಿದ್ದರು. ಈ ಬಗ್ಗೆ ಪಕ್ಷದ ವರಿಷ್ಠರಿಗೂ ತಿಳಿಸಿದ್ದೆ. ದೂರು ನೀಡಿದ ಮೇಲೆ ಎಫ್ಐಆರ್ ಹಾಕಿ ಚಾರ್ಚ್ ಶೀಟ್ ಆದರೆ ಸಮಸ್ಯೆ ಎಂದು ಈಗ ರೀತಿ ತಂತ್ರ ಮಾಡಿದ್ದಾರೆ. ನಾನು ಕೈ ಮುಗಿದು ಹೇಳುತ್ತೇನೆ ತನಿಖೆ ನಡೆದು ಸತ್ಯಾಸತ್ಯತೆ ಹೊರ ಬರುವ ತನಕ ಸುಮ್ಮನ್ನೆ ಆರೋಪ ಮಾಡಬೇಡಿ.
ಬಿಜೆಪಿ ಆಡಳಿತ ಅವಧಿಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಜೀವರಾಜ್ ಅವರ ಮೇಲೆ ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಭೂ ಅಕ್ರಮ ಎಸೆಗಿದ ಆರೋಪ ಕೇಳಿ ಬಂದಿತ್ತು.
ನರಸಿಂಹರಾಜಪಪುರ ತಾಲ್ಲೂಕಿನ ವಾಸುದೇವ ಕೋಟ್ಯಾನ್ ಎಂಬುವವರು ಸಚಿವ ಡಿ.ಎನ್.ಜೀವರಾಜ್ ಸೇರಿದಂತೆ 13 ಜನರ ವಿರುದ್ಧ ಖಾಸಗಿ ದೂರು ನೀಡಿದ್ದಾರೆ. ಅಕ್ರಮ ಸಕ್ರಮ ಯೋಜನೆಯಡಿ ತಮಗೆ ಬೇಕಾದವರಿಗೆ ಜಮೀನನ್ನು ಸಚಿವರು ಸಕ್ರಮಗೊಳಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು.
ಡಿ.ಎನ್.ಜೀವರಾಜ್ ಅವರು ಮಾಡಿದ ಲೋಪದಿಂದಾಗಿ 2004ನೆಯ ಸಾಲಿನಿಂದ ಈವರೆಗೆ ನರಸಿಂಹರಾಜಪುರ ತಾಲ್ಲೂಕಿನಲ್ಲಿ ಯಾರಿಗೂ ಸಾಗುವಳಿ ಚೀಟಿ ದೊರೆತಿಲ್ಲ ಎಂದು ವಾಸುದೇವ ಕೋಟ್ಯಾನ್ ಆರೋಪಿಸಿದ್ದಾರೆ. ಆದರೆ, ಸಚಿವ ಜೀವರಾಜ್ ಎಲ್ಲಾ ಆರೋಪಗಳನ್ನು ಅಲ್ಲಗೆಳೆದಿದ್ದರು. ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆದಿತ್ತು.












Click it and Unblock the Notifications