ವರಿಷ್ಠರು ಒಪ್ಪಿದರೆ ಈಶ್ವರಪ್ಪಗೆ , ಜಾರಕಿಹೊಳಿಗೆ ಶೀಘ್ರ ಸಚಿವ ಸ್ಥಾನ: ಸಿಎಂ ಭರವಸೆ
ಬೆಳಗಾವಿ,ಡಿಸೆಂಬರ್ : 2023 ವಿಧಾನಸಭಾ ಚುನಾವಣೆಗೆ ಈಗಾಗಲೇ ಮೂರು ಪಕ್ಷಗಳು ತಯಾರಿಯನ್ನ ನಡೆಸಿದ್ದು, ಇತ್ತ ಸಚಿವ ಸ್ಥಾನಕ್ಕಾಗಿ ಸರ್ಕಾರದ ವಿರುದ್ದ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಮಾಜಿ ಸಚಿವ ಈಶ್ವರಪ್ಪಪ ಹಾಗೂ ರಮೇಶ್ ಜಾರಕಿಹೊಳಿ ಅವರ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಮಾತುಕತೆ ನಡೆಸಿದ್ದು, ಸಂಧಾನ ಯಶಸ್ವಿಯಾಗಿದೆ.
ಉಭಯ ನಾಯಕರ ಸಮ್ಮುಖದಲ್ಲೇ ಮುಖ್ಯಮಂತ್ರಿ ಬೊಮ್ಮಾಯಿ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಮುಂದಿನ ವಾರ ಸಂಪುಟದ ಆಕಾಂಕ್ಷಿಗಳ ಪಟ್ಟಿಯೊಂದಿಗೆ ದೆಹಲಿಗೆ ಬರುವಂತೆ ಸೂಚಿಸಿದ್ದಾರೆ. ಅಧಿವೇಶನದ ಕಾರ್ಯಕಲಾಪ ನೋಡಿಕೊಂಡು ಬರುವ ಸೋಮವಾರವೇ ದೆಹಲಿಗೆ ತೆರಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಇನ್ನೂ ಮುಖ್ಯಂತ್ರಿಗಳ ಜೊತೆಗೆ ಈ ಕುರಿತು ಚರ್ಚಿಸಿದ್ದು, ವರಿಷ್ಠರು ಒಪ್ಪಿದರೆ ಜನವರಿ ಮೊದಲ ವಾರದಲ್ಲೇ ಇಬ್ಬರಿಗೂ ಸಚಿವ ಸ್ಥಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಅವರು ಸದನಕ್ಕೆ ಹಾಜರಾಗಲು ಒಪ್ಪಿಕೊಂಡಿದ್ದಾರೆ. ಸಂಧಾನ ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಈಶ್ವರಪ್ಪ, ಮಂಗಳವಾರ ಮುಖ್ಯಮಂತ್ರಿ ಬೊಮ್ಮಾಯಿ ಅವರು ನನಗೆ ಕರೆ ಮಾಡಿ ರಮೇಶ ಜಾರಕಿಹೊಳಿ ಜೊತೆ ಆಗಮಿಸುವಂತೆ ತಿಳಿಸಿದ್ದರು. ಅದರಂತೆ ಬುಧವಾರ ರಾತ್ರಿ ಬೆಂಗಳೂರಿನಿಂದ ಬೆಳಗಾವಿಗೆ ರಮೇಶ ಜಾರಕಿಹೊಳಿ ಜೊತೆ ಆಗಮಿಸಿ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದಿದ್ದಾರೆ.

ಇನ್ನೂ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಇಬ್ಬರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಹೈಕಮಾಂಡ್ ಜೊತೆ ಮಾತನಾಡಿದ್ದೇನೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಈಗಾಗಲೇ ದೊರೆತಿದೆ. ಆದರೂ, ಮತ್ತೊಮ್ಮೆ ಇದನ್ನು ದೃಢಪಡಿಸಿಕೊಳ್ಳುವ ಸಲುವಾಗಿ ಈ ಸದನ ಮುಗಿಯುವುದರೊಳಗೆ, ಬಹುಶಃ ಸೋಮವಾರ ಮತ್ತೊಮ್ಮೆ ದೆಹಲಿಗೆ ತೆರಳಿ ವರಿಷ್ಠರ ಜೊತೆ ಮಾತುಕತೆ ನಡೆಸುತ್ತೇನೆ. ವರಿಷ್ಠರು ಹಸಿರು ನಿಶಾನೆ ತೋರಿಸಿದರೆ ಸಂಪುಟ ವಿಸ್ತರಣೆಗೆ ಜನವರಿಯಲ್ಲಿ ಚಾಲನೆ ಸಿಗಬಹುದು' ಎಂದು ಬೊಮ್ಮಾಯಿ ತಿಳಿಸಿದ್ದಾರೆ ಎಂದು ಹೇಳಿದರು. ಹೀಗಾಗಿ, ನನಗೆ ಹಾಗೂ ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತ. ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರದಿಂದ ನಾವು ಸದನಕ್ಕೆ ಹಾಜರಾಗುತ್ತಿದ್ದೇವೆ ಎಂದು ಹೇಳಿದ್ದಾರೆ.

ನಮ್ಮ ಮಂತ್ರಿಗಿರಿ ಖಾತ್ರಿಯಾಗಿದೆ, ಇಂದಿನಿಂದ ಕಲಾಪಕ್ಕೆ
ಸಚಿವ ಸಂಪುಟದಲ್ಲಿ ಮತ್ತೆ ಸ್ಥಾನ ಸಿಗದಿದ್ದಕ್ಕೆ ತೀವ್ರ ಬೇಸರಗೊಂಡಿದ್ದ ಕೆ.ಎಸ್.ಈಶ್ವರಪ್ಪ ಮತ್ತು ಗೋಕಾಕ ಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಮಾತುಕತೆ ನಡೆಸಿದ್ದು, ಸಂಧಾನ ಫಲಪ್ರದವಾಗಿದೆ. ವರಿಷ್ಠರು ಒಪ್ಪಿದರೆ ಜನವರಿಯಲ್ಲಿ ಇಬ್ಬರಿಗೂ ಸಚಿವ ಸ್ಥಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರದಿಂದ ಸದನಕ್ಕೆ ಹಾಜರಾಗುವುದಾಗಿ ಈಶ್ವರಪ್ಪ ತಿಳಿಸಿದ್ದಾರೆ.












Click it and Unblock the Notifications