ರಮೇಶ್ ಜಾರಕಿಹೊಳಿ ಶಪಥ, ಮೈತ್ರಿ ಸರ್ಕಾರಕ್ಕೆ ಆತಂಕ!
ಬೆಂಗಳೂರು, ಜುಲೈ 12 : ಸುಪ್ರೀಂಕೋರ್ಟ್ ಶುಕ್ರವಾರ ನೀಡಿದ ಆದೇಶದ ಬಳಿಕ ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮಂಗಳವಾರದ ತನಕ ಸೇಫ್ ಆಗಿದೆ. ಆದರೆ, ಸರ್ಕಾರವನ್ನು ಉರುಳಿಸಲೇಬೇಕು ಎಂದು ಶಾಸಕರೊಬ್ಬರು ಪಣತೊಟ್ಟಿದ್ದಾರೆ.
ಹೌದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ದೂರದ ಮುಂಬೈನಲ್ಲಿ ಕುಳಿತಿರುವ ಬೆಳಗಾವಿಯ ಸಾಹುಕಾರ ರಮೇಶ್ ಜಾರಕಿಹೊಳಿ ಆಪ್ತರ ಬಳಿಕ ಸರ್ಕಾರ ಕಡೆವುತ್ತೇನೆ ಎಂದು ತಪಥ ಮಾಡಿದ್ದಾರೆ. ಅದಕ್ಕಾಗಿ ಮತ್ತಷ್ಟು ಶಾಸಕರನ್ನು ಸೆಳೆಯಲು ಮಾತುಕತೆ ನಡೆಸುತ್ತಿದ್ದಾರೆ.
ಶಾಸಕ ಸ್ಥಾನದಿಂದ ಅನರ್ಹಗೊಂಡರೂ ಚಿಂತೆಯಿಲ್ಲ. ಈ ಬಾರಿ ಸರ್ಕಾರ ಉಳಿಯಬಾರದು ಎಂಬುದು ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಅವರ ಧೃಡ ನಿಲುವಾಗಿದೆ. ಇದರಿಂದಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಆತಂಕ ಎದುರಾಗಿದೆ.

'ನಾನು ಸ್ವಯಂ ಪ್ರೇರಣೆಯಿಂದ ಬಹುಮತ ಸಾಬೀತು ಮಾಡಲು ಇಚ್ಚಿಸುತ್ತೇನೆ. ಹೀಗಾಗಿ ಸಭಾಧ್ಯಕ್ಷರು ಇದಕ್ಕೆ ಒಂದು ಸಮಯವನ್ನು ನಿಗದಿಮಾಡಬೇಕು' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ಶುಕ್ರವಾರ ಹೇಳಿದ್ದಾರೆ.
ಆಪ್ತರ ಬಳಿ ರಮೇಶ್ ಜಾರಕಿಹೊಳಿ ಹೇಳಿದ್ದೇನು? : ಮುಂಬೈನಲ್ಲಿರುವ ರಮೇಶ್ ಜಾರಕಿಹೊಳಿ ಅವರು ಶಾಸಕರ ಜೊತೆ ಮಾತಕತೆ ನಡೆಸುವಾಗ ಈ ಸರ್ಕಾರ ಉಳಿಯಬಾರದು ಎಂದು ಹೇಳಿದ್ದಾರೆ. 'ಶಾಸಕ ಸ್ಥಾನದಿಂದ ಅನರ್ಹಗೊಂಡರೆ ಅಳಿಯ ಅಂಬಿರಾವ್ ಪಾಟೀಲ ಅಥವ ಬೇರೆಯವನ್ನು ನಿಲ್ಲಿಸಿ ಗೆಲ್ಲಿಸುವೆ. ಆದರೆ, ಸರ್ಕಾರ ಮಾತ್ರ ಉಳಿಯಬಾರದು' ಎಂದು ಹೇಳಿದ್ದಾರೆ.
'ಅಥಣಿ ಶಾಸಕ ಮಹೇಶ್ ಕಮಟಳ್ಳಿ ಅವರ ನನ್ನ ಜೊತೆ ಇದ್ದಾರೆ. ಅವರು ಅನರ್ಹಗೊಂಡರೆ ಪತ್ನಿ ಅಥವ ಪುತ್ರನನ್ನು ನಿಲ್ಲಿಸಿ ಗೆಲ್ಲಿಸುವರು. ಆದರೆ, ಈ ಬಾರಿ ಮಾತ್ರ ಸರ್ಕಾರ ಉರುಳಿಸುವುದು ಖಂಡಿತ' ಎಂದು ರಮೇಶ್ ಜಾರಕಿಹೊಳಿ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಮತ್ತೊಂದು ಕಡೆ ಮೈತ್ರಿ ಸರ್ಕಾರ ಕೆಡವಲು ಪ್ರಯತ್ನ ಮಾಡುತ್ತಿರುವ ರಮೇಶ್ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯ ಮೂವರು ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸಿದ್ದಾರೆ. ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ, ಕಾಗವಾಡದ ಶ್ರೀಮಂತ್ ಪಾಟೀಲ್ ಮತ್ತು ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ ಸೆಳೆಯಲು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಶಿಷ್ಯ ರಮೇಶ್ ಜಾರಕಿಹೊಳಿ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕಮಟಳ್ಳಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಅವರು ಸ್ಪೀಕರ್‌ಗೆ ಮನವಿ ಮಾಡಿದ್ದಾರೆ.












Click it and Unblock the Notifications