ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ವಿಶೇಷ ಪೀಠಕ್ಕೆ ವರ್ಗಾವಣೆ
ಬೆಂಗಳೂರು, ಮಾ.28: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧಿಸಿದಂತೆ ಸಂತ್ರಸ್ತೆ ಸಲ್ಲಿಸಿರುವ ಅರ್ಜಿಗಳನ್ನು ಹೈಕೋರ್ಟ್‌ನಲ್ಲಿ ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ಸ್ಥಾಪನೆಯಾಗಿರುವ ವಿಶೇಷ ನ್ಯಾಯಪೀಠಕ್ಕೆ ವರ್ಗಾಯಿಸಲಾಗಿದೆ. ಹಾಗಾಗಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಜಾರಕಿಹೊಳಿ ಜನಪ್ರತಿನಿಧಿಯಾಗಿರುವುದರಿಂದ ಮತ್ತು ಅವರ ಮೇಲೆಯೇ ನೇರ ಆರೋಪವಿರುವುದರಿಂದ ವಿಶೇಷ ಕೋರ್ಟ್ ವಿಚಾರಣೆ ನಡೆಸುವುದು ಸೂಕ್ತವೆಂದು ಏಕಸದಸ್ಯಪೀಠ ಹೇಳಿದೆ.
ಸಿಡಿ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ ಆದೇಶ ಪ್ರಶ್ನಿಸಿ ಮತ್ತು ರಮೇಶ್ ಜಾರಕಿಹೊಳಿ ಕಬ್ಬನ್ ಪಾರ್ಕ್ ಠಾಣೆಗೆ ನೀಡಿದ್ದ ಬ್ಲಾಕ್‌ಮೇಲ್ ದೂರು ಆಧರಿಸಿ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದು ಕೋರಿ ಸಂತ್ರಸ್ತೆ ಸಲ್ಲಿಸಿರುವ ಪ್ರತ್ಯೇಕ ಎರಡು ಅರ್ಜಿಗಳು, ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದವು.

ಆಗ ಪ್ರಕರಣದ ವಿವರಗಳನ್ನು ಗಮನಿಸಿದ ನ್ಯಾಯಮೂರ್ತಿಗಳು, ಸಿಡಿ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಲಿ ಶಾಸಕರಾಗಿದ್ದಾರೆ. ಹೈಕೋರ್ಟ್‌ನಲ್ಲಿ ಮಾಜಿ-ಹಾಲಿ ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ನ ನಡೆಸಲು ವಿಶೇಷ ನ್ಯಾಯಪೀಠವಿದೆ. ಹಾಗಾಗಿ, ಆ ನ್ಯಾಯಪೀಠದ ಮುಂದೆ ಈ ಅರ್ಜಿಗಳನ್ನು ವಿಚಾರಣೆಗೆ ನಿಗದಿಪಡಿಸಿ ಆದೇಶಿಸಲು ಕಡತವನ್ನು ಸಿಜೆ ಮುಂದೆ ಮಂಡಿಸುವಂತೆ ರಿಜಿಸ್ಟ್ರಾರ್ ಜನರಲ್ ಗೆ ಸೂಚಿಸಿದರು.
ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಎಸ್‌ಐಟಿ ರಚನೆ ಸಿಂಧುತ್ವ ಪ್ರಶ್ನಿಸಿರುವ ಅರ್ಜಿಯಲ್ಲಿ ಪ್ರಮುಖ ಕೋರಿಕೆಗಳಿವೆ. ಆ ಕುರಿತು ನಿಮ್ಮಪೀಠವೇ ವಾದ ಆಲಿಸಬೇಕೆಂದರು.
ಆದರೆ ಜಡ್ಜ್, ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣ ಆಲಿಸಲು ವಿಶೇಷ ಪೀಠ ರಚಿಸಿ ಈ ಹಿಂದೆಯೇ ಮುಖ್ಯ ನ್ಯಾಯಮೂರ್ತಿಗಳ ಆದೇಶ ಮಾಡಿದ್ದಾರೆ. ಹೀಗಾಗಿ, ನಾವು ಆ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತದೆಯೇ ಎಂದು ಪ್ರಶ್ನಿಸಿದರು.
ಪಿಐಎಲ್ ವಿಲೇವಾರಿ:
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹೊರಡಿಸಿದ ಆದೇಶ ರದ್ದು ಕೋರಿ ಸಲ್ಲಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ ಮಾ.10ರಂದು ವಿಲೇವಾರಿ ಮಾಡಿತ್ತು.
ಆದರೆ ಎಸ್ ಐ ಟಿ ರಚನೆ ಪ್ರಶ್ನಿಸಿ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಸಲ್ಲಿಸಿರುವ ಮತ್ತೊಂದು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಏಕಸದಸ್ಯಪೀಠಕ್ಕೆ ವರ್ಗಾಯಿಸಿದೆ. ಇದರಿಂದಾಗಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ನ್ಯಾಯಪೀಠ, ಎಸ್ ಐಟಿ ರಚನೆ ಪ್ರಶ್ನಿಸಿ ಪಿಐಎಲ್ ಹೂಡಲಾಗಿದೆ. ಆದರೆ ಸಂತ್ರಸ್ತೆಯೇ ಅದೇ ಎಸ್ಐಟಿ ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಕಾರಣ ಪಿಐಎಲ್ ಅರ್ಜಿಯನ್ನು ಉಳಿಸಿಕೊಳ್ಳುವ
ಅಗತ್ಯ ಏನೂ ಇಲ್ಲ ಎಂದು ಅಭಿಪ್ರಾಯಪಟ್ಟು ಇತ್ಯರ್ಥಪಡಿಸಿತು. ಜೊತೆಗೆ ಸಂತ್ರಸ್ತೆ ಅರ್ಜಿಯನ್ನು ಏಕಸದಸ್ಯಪೀಠಕ್ಕೆ ವರ್ಗಾಯಿಸಿದ ವಿಭಾಗೀಯ ನ್ಯಾಯಪೀಠ ಅರ್ಜಿಯನ್ನು ರೋಸ್ಟರ್ ಪ್ರಕಾರ ಸಂಬಂಧಪಟ್ಟ ನ್ಯಾಯಪೀಠ ಮುಂದೆಗೆ ವಿಚಾರಣೆಗೆ ನಿಗದಿಪಡಿಸಲು ಆದೇಶಿಸಿತ್ತು.












Click it and Unblock the Notifications