ರಮೇಶ್ ಅಸಹಜ ಸಾವು; ಸರ್ಕಾರಕ್ಕೆ ಪರಮೇಶ್ವರ ಮನವಿ ಏನು?
ಬೆಂಗಳೂರು, ಅಕ್ಟೋಬರ್ 15 : "ರಮೇಶ್ ಸಾವಿನ ಕುರಿತು ಹಲವು ಗೊಂದಲಗಳು ಉಂಟಾಗಿವೆ. ಯಾವುದಾದರೂ ತನಿಖಾ ಸಂಸ್ಥೆ ಮೂಲಕ ಈ ಕುರಿತು ಸಮಗ್ರವಾದ ತನಿಖೆ ನಡೆಸಬೇಕು" ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದರು.
Recommended Video
ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಪರಮೇಶ್ವರ, "ರಮೇಶ್ ಸಾವಿನ ಬಗ್ಗೆ ಹಲವು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ನಾನೇ ಕೊಲ್ಲಿಸಿದ್ದೇನೆ ಎಂದು ಕೆಲವು ನಾಯಕರು ಹೇಳಿಕೆ ನೀಡಿದ್ದಾರೆ" ಎಂದರು.
"ರಮೇಶ್ ಸಾವಿನ ಕುರಿತು ಹಲವು ಗೊಂದಲಗಳು ಉಂಟಾಗಿವೆ. ಆದ್ದರಿಂದ, ಸರ್ಕಾರ ಮತ್ತು ಗೃಹ ಸಚಿವರಿಗೆ ಮನವಿ ಮಾಡುವೆ. ಯಾವುದಾದರೂ ಸಂಸ್ಥೆ ಮೂಲಕ ತನಿಖೆ ಮಾಡಿಸಿ" ಎಂದು ಪರಮೇಶ್ವರ ಒತ್ತಾಯಿಸಿದರು.

ಶನಿವಾರ ರಮೇಶ್ ಶವ ಬೆಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ರಾಮನಗರದ ಮೆಳೇಹಳ್ಳಿಯಲ್ಲಿ ಮೂಲದ ರಮೇಶ್ ಸಾವು ಅಸಹಜ ಎಂದು ಬೆಂಗಳೂರಿನ ಜ್ಞಾನ ಭಾರತಿ ಠಾಣೆ ಪೊಲೀಸರು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ.
ರಮೇಶ್ ನಿಗೂಢ ಸಾವಿನ ಕುರಿತು ತನಿಖೆ ನಡೆಸಲು ವಿಜಯನಗರ ಎಸಿಪಿ ಧರ್ಮೇಂದ್ರ ಮತ್ತು ಕೆಂಗೇರಿ ಗೇಟ್ ಎಸಿಪಿ ಮಂಜುನಾಥ್ ನೇತೃತ್ವದಲ್ಲಿ ಎರಡು ತಂಡಗಳನ್ನು ರಚನೆ ಮಾಡಲಾಗಿದೆ. ರಮೇಶ್ ಫೋನ್ ಕರೆಗಳ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಣೆ ಮಾಡುತ್ತಿದ್ದಾರೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಮತ್ತು ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ, "ರಮೇಶ್ ಸಾವು ಸಹಜವಲ್ಲ. ಆತನನ್ನು ಮುಗಿಸಲಾಗಿದೆ. ಆತನ ಸಾವಿಗೆ ಬೇರೆ-ಬೇರೆ ಕಾರಣಗಳು ಇವೆ" ಎಂದು ಆರೋಪ ಮಾಡಿದ್ದರು.












Click it and Unblock the Notifications