ಮತ್ತೆ ಕುಮಾರ್ ಕಣ್ಣೀರ್; ಸಿ.ಬಿ. ಪುರದಿಂದ ಸ್ಪರ್ಧೆ ಖಚಿತ
ರಾಮನಗರ, ಮಾರ್ಚ್ 22: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಕಣ್ಣಾಮುಚ್ಚಾಲೆ ಆಡುತ್ತಿರುವ ರಾಮನಗರ ಶಾಸಕ ಎಚ್ ಡಿ ಕುಮಾರಸ್ವಾಮಿ ಅವರು ಇಂದು ರಾಮನಗರ ಮತದಾರರ ಮುಂದೆ ಕಣ್ಣೀರ ಕೋಡಿ ಹರಿಸಿದ್ದಾರೆ.
ಬಹುಶಃ ಈ ಬಾರಿ ಚುನಾವಣೆಯಲ್ಲಿ ಇದು ಮೊದಲ ಕಣ್ಣೀರು ಇರಬಹುದು. (ಆದರೆ ನಮ್ಮ ಸಹೋದ್ಯೋಗಿ ತಿದ್ದಿರುವ ಪ್ರಕಾರ ಎಚ್ ಡಿ ದೇವೇಗೌಡರು ಮೈಸೂರಿನಲ್ಲಿ ಇತ್ತೀಚೆಗೆ ಅತ್ತಿದ್ದರಂತೆ).
ಚಿಕ್ಕಬಳ್ಳಾಪುರದತ್ತ ಕುಮಾರಣ್ಣ ದಾಪುಗಾಲು ಹಾಕಿದ್ದನ್ನು ಕಂಡು ಸಿಡಿಮಿಡಿಗೊಂಡ ರಾಮನಗರದ ಕಾರ್ಯಕರ್ತರ ಬಗ್ಗೆಯೇ ಕುಮಾರಸ್ವಾಮಿ ಇಂದು ಗರಂ ಆದರು. ಅಕ್ಷರಶಃ ಕಾರ್ಯಕರ್ತರನ್ನು ಎಮೋಶನಲ್ ಆಗಿ ಹಿಡಿದಿಟ್ಟುಕೊಂಡರು.
ಇದೇ ವೇಳೆ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ತಾವು ಸ್ಪರ್ಧಿಸುವುದನ್ನು ಕುಮಾಸ್ವಾಮಿ ಖಚಿತ ಪಡಿಸಿದರು. ಇದರಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೌಡರ ಕುಟುಂಬದಿಂದ ಇಬ್ಬರು ಕಣಕ್ಕಿಳಿದಂತಾಗಿದೆ. (ಚನ್ನಪಟ್ಟಣದಲ್ಲಿ ಗಳಗಳನೆ ಅತ್ತ ದೊಡ್ಡಗೌಡ್ರ ಸೊಸೆ)

ದೇವೇಗೌಡರಾದಿಯಾಗಿ ಪುತ್ರ-ಸೊಸೆ ಕಣ್ಣಿರು ಹಾಕಿದ್ದರು:
'ಕ್ಷೇತ್ರ ಬಿಡುವುದಾದರೆ ಮೊದಲು ಸ್ಥಳೀಯ ಕಾರ್ಯಕರ್ತರಿಗೆ ವಿಷ ಕೊಟ್ಟು ಎಲ್ಲಿಗೆ ಬೇಕಾದರೂ ಹೋಗಲಿ ಎಂದು ಹೇಳಿದರಂತಲ್ಲಾ? ನಾನೇನು ನಿಮ್ಮ ಪಾಲಿಗೆ ಸತ್ತು ಹೋದೆ ಅಂದುಕೊಂಡಿರಾ? ನಿಮ್ಮ ಮಾತುಗಳನ್ನು ಕೇಳಿದ ಮೇಲೆ ನಾನಿಂದು ಬದುಕಿದ್ದೂ ಸತ್ತಂತಾಗಿದೆ' ಎಂದು ಕಾರ್ಯಕರ್ತರೆದುರು ಎಚ್ ಡಿಕೆ ಆಕ್ರೋಶದಿಂದ ನುಡಿದರು.
ಅಂದಹಾಗೆ ಕಳೆದ ವಿಧಾನಸಭಾ ಚುನಾವಣೆ, ಆನಂತರ ಲೋಕಸಭಾ ಉಪಚುನಾವಣೆ ವೇಳೆಯೂ ದೇವೇಗೌಡರಾದಿಯಾಗಿ, ಅನಿತಾ ಕುಮಾರಸ್ವಾಮಿ ಮತ್ತು ಕುಮಾರಸ್ವಾಮಿಯವರೂ ಮತದಾರರ ಮುಂದೆ ಕಣ್ಣಿರು ಹಾಕಿದ್ದರು. ಕುಮಾರಸ್ವಾಮಿ ಅಳು/ಆಕ್ರೋಶಕ್ಕೆ ಕಾರಣವಾಗಿದ್ದು ಮಾತ್ರ ಇದೇ ರಾಮನಗರ ಮತ್ತು ಚನ್ನಪಟ್ಟಣದ ಮತದಾರರು ಎಂಬುದು ವಿಪರ್ಯಾಸದ ಸಂಗತಿ.

ನನಗೂ ಹಾಗೂ ನನ್ನ ಪತ್ನಿಗೂ ಅವಮಾನ ಮಾಡಿದ್ದೀರಿ:
ಶನಿವಾರ ರಾಮನಗರ ಜೆಡಿಎಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಈ ಹಿಂದೆ ನಾನು ಸ್ಪರ್ಧಿಸುತ್ತಿದ್ದಾಗ 30-40 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸುತ್ತಿದ್ದ ಇದೇ ರಾಮನಗರದ ಜನತೆ, ನನ್ನ ಹೆಂಡ್ತಿ ಅನಿತಾ ನಿಂತಾಗ ಯಾಕೆ ಅದೆ ರೀತಿ ಬೆಂಬಲಿಸಲಿಲ್ಲ? ಎಂದು ದುಃಖ ತಪ್ತರಾದರು.
'ಇದರಿಂದ ನನಗೂ ಹಾಗೂ ನನ್ನ ಪತ್ನಿಗೂ ಅವಮಾನವಾಯಿತು. ಸೋಲಿನ ನೈತಿಕ ಹೊಣೆಹೊತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು' ಎಂದು ಕುಮಾರಸ್ವಾಮಿ ಕೆಲಕ್ಷಣ ಗದ್ಗದಿತರಾದರು.

ಡಿಕೆಶಿ vs ಎಚ್ಡಿಕೆ
'ಉಪಚುನಾವಣೆಯಲ್ಲಿ ಕಳ್ಳರಿಗೆ, ಕಲ್ಲು ಹೊಡೆಯುವವರಿಗೆ ಮಣೆ ಹಾಕಿದಿರಿ. ಕೊಲೆಗಾರರನ್ನೇ ಗೆಲ್ಲಿಸಿದ್ದೀರಿ, ನಾವು ಮಾಡಿದ ತಪ್ಪೇನು?' ಎಂದು ಕನಕಪುರ ಸೋದರರ ಹೆಸರೆತ್ತದೆ ಕುಮಾರಸ್ವಾಮಿ ಅವರು ನೇರ ಗುರಿಯಿಟ್ಟು ಅವರತ್ತ ಕಲ್ಲು ಹೊಡೆದರು.

ರಾಮನಗರ ನನ್ನ ಕರ್ಮಭೂಮಿ:
'ರಾಮನಗರ ಅಂದರೆ ನನ್ನ ರಾಜಕೀಯ ಜೀವನದ ಕಣ್ಣು ಎಂದು ಭಾವಿಸಿದ್ದೇನೆ. ಆ ಕಣ್ಣು ಇಂದು ಮಬ್ಬಾಗುತ್ತಿದೆ' ಎಂದು ಕುಮಾರಸ್ವಾಮಿ ಕಣ್ಣೊರೆಸಿಕೊಂಡರು. ನೋವು ತೋಡಿಕೊಳ್ಳುತ್ತಲೇ ಮಾತನಾಡಿದ ಅವರು 'ನಾನು ಬದುಕಿದ್ದೂ ಸತ್ತಂತಾಗಿದೆ' ಎಂದೂ ಬೇಸರಗೊಂಡರು.

ಸಿಬಿ ಪುರ ಸ್ಪರ್ಧೆ ಖಚಿತ; ಪತ್ನಿ ಅನಿತಾ ಆರೋಗ್ಯ ಸರಿಯಿಲ್ಲ
ಇದೇ ವೇಳೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುತ್ತಿರುವುದನ್ನು ಖಚಿತ ಪಡಿಸಿದ ಕುಮಾರಸ್ವಾಮಿ, ತಾವು ಹಾಗೆ ಮಾಡುವುದರಿಂದ ರಾಮನಗರದ ಜನರಿಂದ ದೂರವಾಗುತ್ತಿದ್ದೇನೆ ಎಂದರ್ಥವಲ್ಲ ಎಂದು ನೆರೆದಿದ್ದ ಕಾರ್ಯಕರ್ತರನ್ನು ಭಾವನಾತ್ಮಕವಾಗಿ ಹಿಡಿದರು.
'ಚಿಕ್ಕಬಳ್ಳಾಪುರದ ಜನತೆ ನಾನು ಅಥವಾ ನನ್ನ ಪತ್ನಿ ಅನಿತಾ ಕುಮಾರ ಸ್ವಾಮಿ ಅವರೇ ಕಣಕ್ಕಿಳಿಯಬೇಕೆಂದು ಬಯಸಿದ್ದಾರೆ. ಆದರೆ, ಅನಿತಾ ಕುಮಾರ ಸ್ವಾಮಿ ಅವರ ಆರೋಗ್ಯ ಸರಿಯಿಲ್ಲದ ಕಾರಣ ವಿಧಿಯಿಲ್ಲದೆ ತಾನೇ ಚಿಕ್ಕಬಳ್ಳಾಪುರದಿಂದ ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ' ಎಂದೂ ಸಮಜಾಯಿಷಿ ನೀಡಿದರು.












Click it and Unblock the Notifications