7th Pay Commission: 7ನೇ ವೇತನ ಆಯೋಗದ ಶಿಫಾರಸು ಜಾರಿ ಕುರಿತು ರಾಮಲಿಂಗಾರೆಡ್ಡಿ ಹೇಳಿದ್ದೇನು?
ಬೆಂಗಳೂರು, ಮೇ 30: ನಮ್ಮ ಪಕ್ಷ ಒಪಿಎಸ್, 7ನೇ ವೇತನ ಆಯೋಗದ ವಿಚಾರದಲ್ಲಿ ಸ್ಪಷ್ಟತೆ ಹೊಂದಿದೆ. ಹೀಗಾಗಿ ಪದವೀಧರರು ಹಾಗೂ ಶಿಕ್ಷಕರು ಕಾಂಗ್ರೆಸ್ ಅಭ್ಯರ್ಥಿಗಳಾದ ರಾಮೋಜಿಗೌಡರು, ಮರಿತಿಬ್ಬೇಗೌಡರು, ಶ್ರೀನಿವಾಸ್, ಆಯನೂರು ಮಂಜುನಾಥ್, ಚಂದ್ರಶೇಖರ್ ಪಾಟೀಲ್ ಅವರಿಗೆ ಮತ ಹಾಕಬೇಕು ಎಂದು ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಮನವಿ ಮಾಡಿದರು.
ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸೋಲಿನ ಹತಾಶೆಯಿಂದಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಮೋಜಿ ಗೌಡ ಅವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಜೂನ್ 3ರಂದು ನಡೆಯಲಿರುವ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಿ ರಾಮೋಜಿ ಗೌಡರು ಸ್ಪರ್ಧಿಸಿದ್ದಾರೆ. ಈ ಬಾರಿ ಅವರು ಮೊದಲ ಸ್ಥಾನ ಪಡೆಯುವ ವಿಶ್ವಾಸವಿದೆ. ವಿರೋಧ ಪಕ್ಷದವರಿಗೆ ಇದನ್ನು ಅರಗಿಸಿಕೊಳ್ಳಲಾಗದೇ ಅಪಪ್ರಚಾರ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಿರಲಿಲ್ಲ. ಇತ್ತೀಚೆಗೆ ಮಧು ಮಾದೇಗೌಡರು, ಪ್ರಕಾಶ್ ಹುಕ್ಕೇರಿ ಗೆದ್ದಿದ್ದಾರೆ. ಈಗ ಮೂರು ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದ್ದು, ಆರಕ್ಕೆ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಪ್ರಜ್ಞಾವಂತ ಪದವೀಧರರು ಹಾಗೂ ಶಿಕ್ಷಕರು ಈಗ ಕಾಂಗ್ರೆಸ್ ಪರವಾಗಿ ನಿಲ್ಲುತ್ತಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಶಿಕ್ಷಕರು ಹಾಗೂ ಪದವೀಧರರ ಸಮಸ್ಯೆಗೆ ಸ್ಪಂದಿಸದ ಕಾರಣ ಅವರು ಬಿಜೆಪಿಯಿಂದ ಬೇಸತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅವರ ಸಮಸ್ಯೆಗಳನ್ನು ಬಗೆಹರಿಸುವ ಇಚ್ಛಾಶಕ್ತಿ ಹೊಂದಿದ್ದು ಪ್ರಣಾಳಿಕೆಯಲ್ಲಿ ಈ ವಿಚಾರ ಸೇರಿಸಿದ್ದೇವೆ. ಬಿಜೆಪಿ ಬುರುಡೆ ಪಕ್ಷ, ಸುಳ್ಳು ಹೇಳುತ್ತಾರೆ. ವಚನಭ್ರಷ್ಟರು ಎಂದು ಅವರಿಗೆ ಅರಿವಾಗಿದೆ. 2018ರಲ್ಲಿ ಬಿಜೆಪಿ 600 ಆಶ್ವಾಸನೆ ಕೊಟ್ಟು ಈಡೇರಿಸಿದ್ದು ಕೇವಲ 50 ಮಾತ್ರ.
ಬಿಜೆಪಿಯವರಿಗೆ ಸೋಲಿನ ಭೀತಿ ಎದುರಾಗಿದ್ದು, ಏನಾದರೂ ಮಾಡಿ ಕೆಟ್ಟಹೆಸರು ತರಬೇಕು ಎಂಬ ಪ್ರಯತ್ನ ಮಾಡುತ್ತಿದ್ದಾರೆ. ರಾಮೋಜಿಗೌಡರ ಕುಟುಂಬ ಹಾಗೂ ಪೂರ್ವಜರು ನೂರಾರು ವರ್ಷಗಳಿಂದ ಕೋಲಾರದಲ್ಲೇ ಇದ್ದಾರೆ. ಕೈಲಾಗದವರ ಕೊನೆ ಅಸ್ತ್ರ ಅಪಪ್ರಚಾರ ಮಾಡುವುದು. ಅದನ್ನೇ ಬಿಜೆಪಿಯವರು ಮಾಡುತ್ತಿದ್ದಾರೆ.
ಕಾರ್ಯಾಧ್ಯಕ್ಷರಾದ ಜಿ.ಸಿ ಚಂದ್ರಶೇಖರ್ ಅವರು ಮಾತನಾಡಿ, ಈ ಬಾರಿಯ ವಿಧಾನ ಪರಿಷತ್ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಬಹಳ ಗಂಭೀರವಾಗಿ ಪರಿಗಣಿಸಿದೆ. ಬಿಜೆಪಿ ಹಾಗೂ ಜೆಡಿಎಸ್ ಜತೆಯಾಗಿ ಚುನಾವಣೆ ಮಾಡುತ್ತಿದ್ದು, ಹೀಗಾಗಿ ಹಿಂದೆಂದೂ ನೀಡದ ಪ್ರಾಮುಖ್ಯತೆ ನೀಡಿದ್ದೇವೆ. ಈಗ ಮೇಲ್ಮನೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 29 ಶಾಸಕರಿದ್ದು, ಐದು ಕ್ಷೇತ್ರಗಳಲ್ಲಿ ಚುನಾವಮೆ ಎದುರಿಸುತ್ತಿದ್ದೇವೆ. ಮೇಲ್ಮನೆಯಲ್ಲಿ ಬಹುಮತ ಪಡೆಯಲು ಇನ್ನು 14 ಸದಸ್ಯರ ಅಗತ್ಯವಿದ್ದು, ಮುಂಬರುವ ಚುನಾವಣೆಯಲ್ಲಿ 7 ಸದಸ್ಯರು, ಶೆಟ್ಟರ್ ಅವರು ರಾಜೀನಾಮೆ ಕೊಟ್ಟಿರುವ ಕ್ಷೇತ್ರವೂ ಕಾಂಗ್ರೆಸ್ ಪರವಾಗಿದ್ದು, ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರ ಚುನಾವಣೆಯಲ್ಲಿ ಆರು ಕ್ಷೇತ್ರಗಳನ್ನು ಗೆಲ್ಲಬೇಕಿದೆ. ಆಗ ಮಾತ್ರ ನಾವು ಬಹುಮತ ಪಡೆಯಲು ಸಾಧ್ಯ. ಇಲ್ಲದಿದ್ದರೆ ಬಹುಮತ ಪಡೆಯಲು 2 ವರ್ಷ ಕಾಯಬೇಕಾಗುತ್ತದೆ.
ಈ ಕಾರಣಗಳಿಂದ ಈ ಚುನಾವಣೆಯನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ವಿಧಾನಸಭೆಯಲ್ಲಿ 135 ಸ್ಥಾನಗಳನ್ನು ಗೆದ್ದಿರುವುದನ್ನು ಸಹಿಸಲಾಗದೇ ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿದ್ದಾರೆ. ಕಾರಣ ಅವರು ಏಕಾಂಗಿಯಾಗಿ ಹೋರಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಈ ಕಾರಣದಿಂದಾಗಿ ಬಿಜೆಪಿಯು ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರ ಆಯ್ಕೆಗೆ ಹೆಚ್ಚಿನ ಕಾಲಾವಕಾಶ ಪಡೆಯಿತು ಎಂದರು.












Click it and Unblock the Notifications