KSRTC: ರಾಜ್ಯದ ಈ ಜಿಲ್ಲೆಯ ವ್ಯಾಪ್ತಿಯಲ್ಲಿ ಹೊಸ ಬಸ್ ಘಟಕ ಲೋಕಾರ್ಪಣೆ: ರಾಮಲಿಂಗಾ ರೆಡ್ಡಿ
ದಾವಣಗೆರೆ, ಅಕ್ಟೋಬರ್ 11: ದಾವಣಗೆರೆ ಜಿಲ್ಲೆಯ ಚನ್ನಗಿರಿ ಭಾಗದ ಜನರ ಬಹು ದಿನಗಳ ಬೇಡಿಕೆಯು ಈಡೇರಿದೆ. ಇಲ್ಲಿನ ಹೊಸ ತಾಲೂಕು ಬಸ್ ಘಟಕವನ್ನು ಉದ್ಘಾಟನೆ ಮಾಡಬೇಕೆಂಬ ಕನಸು ನನಸಾಗಿದೆ. ಬಹುಕೋಟಿ ವೆಚ್ಚದಲ್ಲಿ ವಿಶಾಲ ಪ್ರದೇಶದಲ್ಲಿ ನಿರ್ಮಾಣವಾದ ಹೊಸ ಕಟ್ಟಡವನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಉದ್ಘಾಟಿಸಿದ್ದಾರೆ.
ಚನ್ನಗಿರಿಯಲ್ಲಿ ತಾಲೂಕು ಬಸ್ ಘಟಕವು 4 ಎಕರೆ ಜಮೀನಿನಲ್ಲಿ ಒಟ್ಟು 8 ಕೋಟಿ ರೂ ವೆಚ್ಚದಲ್ಲಿ ತಲೆಎತ್ತಿದೆ. ನೂತನವಾಗಿ ನಿರ್ಮಿಸಲಾದ ಈ ಘಟಕಕ್ಕೆ ಈಗಾಗಲೇ ಸಿಬ್ಬಂದಿ ಮತ್ತು ಬಸ್ಸುಗಳನ್ನು ನಿಯೋಜಿಸಲಾಗಿದೆ ಎಂದು ಉದ್ಘಾಟನೆ ಬಳಿಕ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.

ಚನ್ನಗಿರಿಯಲ್ಲಿ ಬಸ್ ಘಟಕ ಆರಂಭದಿಂದ ಜನರ ಬೇಡಿಕೆ ಈಡೇರಿದ್ದು ಇದರ ಪ್ರಯೋಜನ ಪಡೆದು ಕೊಳ್ಳುವಂತೆ ಮಾನ್ಯ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಶಾಸಕ ಬಸವರಾಜ ವಿ. ಶಿವಗಂಗಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಸ್ ಘಟಕ ನಿರ್ಮಾಣಕ್ಕೆ ನಿವೇಶನ ಸಮಸ್ಯೆ ಇತ್ತು, ಅದನ್ನು ಬಗೆ ಹರಿಸಲಾಗಿದೆ. ಹೊಸ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವರಲ್ಲಿ ಬೇಡಿಕೆ ಇಟ್ಟು, ಎರಡು ಎಕರೆ ನಿವೇಶನ ಗುರುತಿಸಲಾಗಿದೆ ಎಂದು ತಿಳಿಸಿದರು. ಇದಕ್ಕೆ ಸಾರಿಗೆ ಸಚಿವರು ಶೀಘ್ರದಲ್ಲಿಯೇ ಅನುಮತಿ ನೀಡುವುದಾಗಿ ಸ್ಥಳದಲ್ಲೇ ಭರವಸೆ ನೀಡಿದರು.
ಅದೇ ರೀತಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ ಅವರ ಸಹ ಬಸ್ ನಿಲ್ದಾಣಕ್ಕೆ ಬೇಡಿಕೆ ಇಟ್ಟರು. ಸೂಕ್ತ ಜಾಗ ಒದಗಿಸಿದ್ದಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಒಪ್ಪಿಗೆ ನೀಡುವುದಾಗಿ ಸಚಿವರು ಭರವಸೆ ಕೊಟ್ಟರು. ಇದೇ ವೇಳೆ ಹೊಳಲ್ಕೆರೆ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು, ತರಬೇತಿ ಕೇಂದ್ರವನ್ನು ಸರ್ಕಾರದ ಕೌಶಲ್ಯಅಭಿವೃದ್ಧಿ ಇಲಾಖೆಯೊಡನೆ ಮಾತುಕತೆ ನಡೆಸಿ ಮತ್ತಷ್ಟು ಸಾರ್ವಜನಿಕರಿಗೆ ಸದುಪಯೋಗವಾಗುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಭೆ ನಡೆಸುವ ಬಗ್ಗೆ ಮಾತುಕತೆ ನಡೆಸುವಂತೆ ಅಧಿಕಾರಿಗಳು ಸೂಚಿಸಿದರು.
ಬಸ್ ಘಟಕದ ಉದ್ಘಾಟನೆ ಕರ್ನಾಟಕ ಜೀವ ವೈವಿಧ್ಯ ನಿಗಮ ಮಂಡಳಿ ಅಧ್ಯಕ್ಷ ವಡ್ನಾಳ್ ಜಗದೀಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷಶಾಮನೂರು ಟಿ. ಬಸವರಾಜ್ ಮತ್ತಿತರರು ಸಾಕ್ಷಿಯಾದರು.












Click it and Unblock the Notifications