ರಾಮನ ಪ್ರತಿಷ್ಠಾಪನೆ; ಜ.22ರಂದು ರಾಜ್ಯದ ದೇವಾಲಯಗಳಲ್ಲಿ ವಿಶೇಷ ಪೂಜೆ
ಬೆಂಗಳೂರು, ಜನವರಿ 07: ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22ರಂದು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ದೇಶವೇ ಈ ಕ್ಷಣಕ್ಕಾಗಿ ಕಾದು ಕುಳಿತಿದೆ. ಅಂದು ಮನೆಗಳಲ್ಲಿ ದೀಪ ಬೆಳಗಿಸಿ ಎಂದು ಸಹ ಕರೆ ನೀಡಲಾಗಿದೆ.
ರಾಮ ಮಂದಿರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಕರ್ನಾಟಕದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ಜನವರಿ 22ರಂದು ನಡೆಸಲಾಗುತ್ತದೆ. ಈ ಕುರಿತು ಶೀಘ್ರವೇ ಸುತ್ತೋಲೆ ಪ್ರಕಟವಾಗಲಿದೆ.

ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾ ರೆಡ್ಡಿ ಈಗಾಗಲೇ ಈ ಕುರಿತು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೂರ್ತಿ ಪ್ರತಿಷ್ಠಾಪನೆ ದಿನ ಇಲಾಖೆ ವ್ಯಾಪ್ತಿಯ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಬೇಕು ಎಂದು ಸಚಿವರು ಸೂಚನೆ ಕೊಟ್ಟಿದ್ದಾರೆ.
ಶೀಘ್ರವೇ ಬರಲಿದೆ ಸುತ್ತೋಲೆ; ಜನವರಿ 22ರಂದು ನಡೆಯುವ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರ್ನಾಟಕದ ಅನೇಕರಿಗೆ ಈಗಾಗಲೇ ಆಹ್ವಾನವನ್ನು ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
ಜನವರಿ 22ರ ಸೋಮವಾರ ನಡೆಯುವ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ರಾಜ್ಯದಲ್ಲಿರುವ ಶ್ರೀ ರಾಮನ ದೇವಾಲಯ ಮಾತ್ರವಲ್ಲ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ನಡೆಸಲಾಗುತ್ತದೆ. ಯಾವ ನಿಧಿಯಿಂದ ಹಣ ಬಳಕೆ ಮಾಡಿಕೊಂಡು ಪೂಜೆ ಸಲ್ಲಿಸಬೇಕು ಎಂದು ಮುಜರಾಯಿ ಇಲಾಖೆ ಸುತ್ತೋಲೆಯನ್ನು ಹೊರಡಿಸಲಿದೆ.
ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, "ಅಯೋಧ್ಯೆ ರಾಮ ಮಂದಿರದಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡುವ ವೇಳೆ ರಾಜ್ಯದಲ್ಲೂ ಎಲ್ಲಾ ಮುಜರಾಯಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ತಿಳಿಸಿದ್ದೇನೆ" ಎಂದು ಹೇಳಿದ್ದಾರೆ.
"ಕೇವಲ ರಾಮನ ದೇವಾಲಯ ಮಾತ್ರವಲ್ಲ. ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆ ಸಲ್ಲಿಸಬೇಕು. ಈ ಬಗ್ಗೆ ಪ್ರತ್ಯೇಕ ಆದೇಶ ಹೊರಡಿಸುವಂತೆ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ" ಎಂದು ಸಚಿವರು ಹೇಳಿದ್ದಾರೆ.
ಕರ್ನಾಟಕದ ಮುಜರಾಯಿ ಇಲಾಖೆ ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ವಿವಿಧ ಸಂದರ್ಭದಲ್ಲಿಯೂ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಲು ಸುತ್ತೋಲೆ ಹೊರಡಿಸಿತ್ತು. ಈಗ ರಾಮ ಮಂದಿರ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ವಿಶೇಷ ಪೂಜೆಯನ್ನು ಮಾಡಲಾಗುತ್ತಿದೆ. ಈ ಕುರಿತು ವಿವರವಾದ ಸುತ್ತೋಲೆ ಶೀಘ್ರವೇ ಹೊರಬೀಳಲಿದೆ.
ಕಲಾತ್ಮಕವಾಗಿ ವಿನ್ಯಾಸಗೊಳಿಸಿದ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಗಣ್ಯರಿಗೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ. ಜನವರಿ 22ರಂದು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದ್ದು, ಅಂದು ಜನರು ಅಯೋಧ್ಯೆಗೆ ಆಗಮಿಸಬೇಡಿ. ಮರುದಿನದಿಂದ ಬನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಕರೆ ನೀಡಿದ್ದಾರೆ.
ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಇಂಗ್ಲಿಶ್ ಮತ್ತು ಹಿಂದಿಯಲ್ಲಿ ಮುದ್ರಿಸಲಾಗಿದೆ. ಒಟ್ಟು ಎರಡು ಪತ್ರಿಕೆಗಳಿವೆ. ಮೊದಲ ಪತ್ರಿಕೆಗೆ 'ಕಾರ್ಯಕ್ರಮ ವಿಶೇಷ' ಎಂದು ಹೆಸರಿಡಲಾಗಿದೆ. ಇದರಲ್ಲಿ ರಾಮ ಮಂದಿರದ ಚಿತ್ರವನ್ನು ಮುದ್ರಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಗಣ್ಯರ ವಿವರ ಮತ್ತು ಕಾರ್ಯಕ್ರಮದ ವಿವರಗಳಿವೆ.
2ನೇ ಆಹ್ವಾನ ಪತ್ರಿಕೆಗೆ 'ಅಪೂರ್ವ ಅನಾಧಿಕ್ ನಿಮಂತ್ರಣ್' ಎಂಬ ಶೀರ್ಷಿಕೆ ನೀಡಲಾಗಿದೆ. ಇದರಲ್ಲಿ ಬಾಲರಾಮನ ಚಿತ್ರ ಮತ್ತು ಮಂದಿರದ ಛಾಯೂರೂಪದ ಚಿತ್ರವಿದೆ. ಇದರಲ್ಲಿ ಸಮಾರಂಭದ ದಿನಾಂಕ, ಸ್ಥಳ, ಸಮಯ ಮುಂತಾದ ವಿವರಗಳಿವೆ.
ಯಾರನ್ನೂ ಸಮಾರಂಭಕ್ಕೆ ಕರೆಯಬೇಕು ಎಂದು ಶ್ರೀ ರಾಮ ಮಂದಿರ ಟ್ರಸ್ಟ್ ತೀರ್ಮಾನ ಮಾಡಿ ಆಹ್ವಾನ ಕೊಡುತ್ತಿದೆ. ಒಟ್ಟು 7 ಸಾವಿರ ಗಣ್ಯರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುತ್ತದೆ. ಈ ಪಟ್ಟಿಯಲ್ಲಿ ರಾಜಕೀಯ ನಾಯಕರು, ಸಾಧುಗಳು, ಸಂತರು, ವಿದೇಶದ ಗಣ್ಯರು ಸೇರಿದ್ದಾರೆ.












Click it and Unblock the Notifications