ಚಿಕ್ಕಬಳ್ಳಾಪುರ ಕ್ಷೇತ್ರದಿಂದ ರಕ್ಷಾ ರಾಮಯ್ಯ ಸ್ಪರ್ಧೆ ಫಿಕ್ಸ್?
ಚಿಕ್ಕಬಳ್ಳಾಪುರ, ಜನವರಿ 12: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಗೆದ್ದು ಸರ್ಕಾರ ರಚಿಸುವ ಕಾಂಗ್ರೆಸ್‌ನಿಂದ ಮುಂದಿನ ಲೋಕಸಭಾ ಚುನಾವಣೆ ಸ್ಪರ್ಧಿಸಲು ಹಲವು ಯುವ ನಾಯಕರು ಸ್ಪರ್ಧೆಗೆ ರೆಡಿಯಾಗುತ್ತಿದ್ದಾರೆ.
ಹೌದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ನ ಸಂಭವನೀಯ ಅಭ್ಯರ್ಥಿಗಳ ಕುರಿತು ಅಭಿಪ್ರಾಯ ಸಂಗ್ರಹಿಸಲು ವಸತಿ ಸಚಿವ ಜಮೀರ್ ಅಹಮದ್ ಖಾನ್ ಅಧ್ಯಕ್ಷತೆಯಲ್ಲಿ ಚರ್ಚೆ ನಡೆದಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಯುವ ಮುಖಂಡ ರಕ್ಷಾ ರಾಮಯ್ಯ ಮತ್ತು ಮಾಜಿ ಸಂಸದ ಎಂ. ವೀರಪ್ಪ ಮೊಯಿಲಿಮಧ್ಯೆ ಜಟಾಪಟಿ ನಡೆದಿದ್ದು, ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಬಹುತೇಕ ರಕ್ಷಾ ರಾಮಯ್ಯ ಅವರಿಗೆ ಸಿಗುವ ಸಾಧ್ಯತೆ ಇದೆ.

ಚಿಕ್ಕಬಳ್ಳಾಪುರದಲ್ಲಿ ಸಚಿವ ಜಮೀರ್ ಅಹಮದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕಾಂಗ್ರೆಸ್ ಶಾಸಕರು, ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿಗಳು, ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಪ್ರಮುಖ ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ಕೊಟ್ಟರೇ ಸೂಕ್ತ ಎಂಬ ಬಗ್ಗೆಯೂ ಚರ್ಚೆಯಾಗಿದೆ.
ಇನ್ನೂ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಯುವ ಮುಖಂಡ ರಕ್ಷಾ ರಾಮಯ್ಯ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸೋದು ಖಚಿತ ಎಂದು ಹೇಳಿದ್ದಾರೆ. ಮಾಜಿ ಸಚಿವರಾದ ಡಾ ಕೆ ಸುಧಾಕರ್ ನನ್ನ ವಿರುದ್ದ ಸ್ಪರ್ಧಿಸಿದರು ಪರವಾಗಿಲ್ಲ. ಸುಧಾಕರ್ ಬಂದರೂ ನಮಗೆ ಒಳ್ಳೆಯದೇ ಯಾರೇ ಬಂದರೂ ಒಳ್ಳೆಯದೇ. ಹತ್ತು ವರ್ಷ ಕಾಂಗ್ರೆಸ್ ನಲ್ಲಿ ಎಲ್ಲವನ್ನು ಕಳೆದುಕೊಂಡಿದೆ. ಇನ್ನು ಮುಂದೆ ಎಲ್ಲವನ್ನೂ ಪಡೆದುಕೊಳ್ಳೋದ್ದರಲ್ಲಿ ಎರಡು ಮಾತಿಲ್ಲ ಎಂದು ರಕ್ಷಾ ರಾಮಯ್ಯ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಂಸದ ವೀರಪ್ಪಮೊಯ್ಲಿ ವಿರುದ್ಧ ಮಾಜಿ ಸಚಿವ ಎಂ ಆರ್ ಸೀತಾರಾಂ ಗುಡುಗಿದ್ದಾರೆ. 2009 ರಲ್ಲಿ ನಾನು ಅಧಿಕೃತ ಅಭ್ಯರ್ಥಿ ಆಗಿ ಪ್ರಚಾರ ಪ್ರಾರಂಭ ಮಾಡಿದ್ದೆ. ಆಗ ವೀರಪ್ಪ ಮೊಯ್ಲಿ ಬಂದರೂ ಅಂತ ನನಗೆ ಟಿಕೆಟ್ ಕೈ ತಪ್ಪಿತು. 2014 ರಲ್ಲಿಯೂ ಅನಿವಾರ್ಯ ಕಾರಣಗಳಿಂದ ಮೊಯ್ಲಿಗೆ ಬೆಂಬಲ ಕೊಟ್ಟಿದ್ದೇವೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಆದಂತಯೇ ಲೋಕಸಭೆ ಕ್ಷೇತ್ರವೂ ಆಗುತ್ತೆ. ಅವಕಾಶ ಕೊಟ್ಟರೆ ನನ್ನ ಮಗ ಲೋಕಸಭೆ ಕ್ಷೇತ್ರಕ್ಕೆ ಅಭ್ಯರ್ಥಿಯಾಗುತ್ತಾರೆ. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ನನ್ನ ಮಗ ಸೇವೆ ಮಾಡಲಿ ಎಂದು ಸ್ವಪಕ್ಷದ ನಾಯಕ ಹಾಗೂ ಮಾಜಿ ಸಂಸದ ವೀರಪ್ಪ ಮೊಯ್ಲಿ ವಿರುದ್ದ ಮಾಜಿ ಸಚಿವ ಎಂ.ಆರ್ ಸೀತಾರಾಂ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಪುತ್ರನಿಗೆ ಟಿಕೆಟ್ ಕೊಡಿಸುವ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರ ಜೊತೆಗೆ ಎಂ ಆರ್ ಸೀತಾರಾಂ ಅವರು ಮಾತುಕತೆಯನ್ನ ನಡೆಸಿದ್ದಾರೆ ಎನ್ನಲಾಗಿದೆ. ಇತ್ತ ವೀರಪ್ಪ ಮೊಯ್ಲಿ ಅವರು ಸಹ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದು, ಈ ಬಾರಿ ರಕ್ಷಾ ರಾಮಯ್ಯ ಅವರಿಗೆ ಟಿಕೆಟ್ ಸಿಗುವುದು ಫಿಕ್ಸ್ ಎನ್ನಲಾಗಿದೆ. ಇತ್ತ ಟಿಕೆಟ್ ಗಾಗಿ ಈ ಇಬ್ಬರು ನಾಯಕರು ಮಾತ್ರವಲ್ಲದೇ ಹಲವು ನಾಯಕರು ಲಾಬಿ ನಡೆಸಿದ್ದು, ಅಂತಿಮವಾಗಿ ಹೈಕಮಾಂಡ್ ಯಾರನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಲಿದೆ ಎಂಬುದನ್ನ ಕಾದುನೋಡ್ಬೇಕಾಗಿದೆ.












Click it and Unblock the Notifications