ರಾಜ್ಯಸಭೆಗೆ 5ನೇ ಅಭ್ಯರ್ಥಿ; ಕಾಂಗ್ರೆಸ್‌ಗೆ ಅಡ್ಡಮತದಾನದ ಆತಂಕ!
ಬೆಂಗಳೂರು, ಫೆಬ್ರವರಿ 15: ರಾಜ್ಯಸಭೆ ಚುನಾವಣೆಗೆ ನಾಮಮತ್ರ ಸಲ್ಲಿಕೆ ಮಾಡಲು ಗುರುವಾರ ಕೊನೆಯ ದಿನವಾಗಿದೆ. ಕರ್ನಾಟಕದಲ್ಲಿ ವಿಧಾನಸಭೆಯಿಂದ ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ನಡೆಯುವ ಚುನಾವಣೆ ಕುತೂಹಲ ಮೂಡಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದ್ದರೂ ಸಹ ಈಗ ಅಡ್ಡ ಮತದಾನದ ಆತಂಕ ಎದುರಾಗಿದೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ರಾಜ್ಯಸಭೆ ಚುನಾವಣೆಗೆ 5ನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಹೊಸ ದಾಳ ಪ್ರಯೋಗ ಮಾಡಿದೆ. ಫೆಬ್ರವರಿ 27ರಂದು ರಾಜ್ಯಸಭೆ ಚುನಾವಣೆ ನಡೆಯಲಿದ್ದು, ಈಗ ಶಾಸಕರು ಅಡ್ಡ ಮತದಾನ ಮಾಡಲಿದ್ದಾರೆಯೇ? ಎಂಬುದು ಪ್ರಶ್ನೆ.

ಕಾಂಗ್ರೆಸ್‌ಗೆ ತಿರುಗೇಟು ನೀಡಲು ಕೊನೆಯ ಕ್ಷಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ 5ನೇ ಅಭ್ಯರ್ಥಿಯಾಗಿ ರಾಜ್ಯಸಭೆಯ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಈ ತಂತ್ರ ರಾಜಕೀಯ ಲೆಕ್ಕಾಚಾರವನ್ನು ಬದಲಾವಣೆ ಮಾಡಿದೆ.
ಅಭ್ಯರ್ಥಿಗಳ ವಿವರ; ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭಾ ಸದಸ್ಯರ ಆಯ್ಕೆಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್‌ನಿಂದ ಅಜಯ್ ಮಾಕೇನ್, ಡಾ.ಸೈಯದ್ ನಾಸೀರ್ ಹುಸೇನ್, ಜಿ. ಸಿ. ಚಂದ್ರಶೇಖರ್ ಅಭ್ಯರ್ಥಿಗಳು. ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ 134. ಇದರಿಂದಾಗಿ ಮೂರು ಸ್ಥಾನಗಳು ಸುಲಭವಾಗಿ ಗೆಲ್ಲಬಹುದು.
ಬಿಜೆಪಿ ವಿಧಾನಸಭೆಯಲ್ಲಿ 66 ಸದಸ್ಯ ಬಲ ಹೊಂದಿದೆ. ಪಕ್ಷ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದು. ನಾರಾಯಣ ಕೃಷ್ಣಸಾ ಭಾಂಡಗೆ ಪಕ್ಷದ ಅಭ್ಯರ್ಥಿ. ಬಿಜೆಪಿ-ಜೆಡಿಎಸ್ ಮೈತ್ರಿ ಆಗಿರುವ ಕಾರಣ ಮೈತ್ರಿಕೂಟ ಕುಪೇಂದ್ರ ರೆಡ್ಡಿ ಅವರನ್ನು 5ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ.
ಬಿಜೆಪಿಗೆ ತನ್ನ ಅಭ್ಯರ್ಥಿ ಗೆಲ್ಲಿಸಿ 20 ಮತಗಳು ಉಳಿಯುತ್ತವೆ. ಜೆಡಿಎಸ್‌ನ 19 ಶಾಸಕರು ಇದ್ದಾರೆ. ನಾಲ್ವರು ಪಕ್ಷೇತರರು ಕುಪೇಂದ್ರ ರೆಡ್ಡಿ ಬೆಂಬಲಿಸಿದರೆ, ಕಾಂಗ್ರೆಸ್‌ನ 5 ಶಾಸಕರು ಅಡ್ಡಮತದಾನ ಮಾಡಿದರೆ ಮೈತ್ರಿಕೂಟದ ಅಭ್ಯರ್ಥಿ ಗೆಲುವು ಖಚಿತ. ಇದೇ ಕಾರಣಕ್ಕೆ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.
2013ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ನ 7 ಶಾಸಕರು ಕಾಂಗ್ರೆಸ್ ಪರವಾಗಿ ಅಡ್ಡಮತದಾನ ಮಾಡಿದ್ದರು. ಎಚ್. ಡಿ. ಕುಮಾರಸ್ವಾಮಿಗೆ ಭಾರೀ ಮುಖಭಂಗವಾಗಿತ್ತು. ಈಗ ಕಾಂಗ್ರೆಸ್‌ಗೆ ತಿರುಗೇಟು ನೀಡಲು ಬಿಜೆಪಿ & ಜೆಡಿಎಸ್ ಮೈತ್ರಿಕೂಟ 5ನೇ ಅಭ್ಯರ್ಥಿ ಕಣಕ್ಕಿಳಿಸುವ ದಾಳ ಪ್ರಯೋಗ ಮಾಡಲಾಗಿದೆ ಎಂಬುದು ಚರ್ಚೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ರಾತ್ರಿ ನಡೆಯಿತು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ 5ನೇ ಅಭ್ಯರ್ಥಿ, ಅಡ್ಡ ಮತದಾನದ ವಿಷಯವನ್ನು ಪ್ರಸ್ತಾಪಿಸಿದರು.
ಅಡ್ಡ ಮತದಾನವನ್ನು ತಡೆಯಲು ಕಾಂಗ್ರೆಸ್ ಅಗತ್ಯಬಿದ್ದರೆ ಶಾಸಕರಿಗೆ ವಿಪ್ ಜಾರಿಗೊಳಿಸುವ ಸಾಧ್ಯತೆ ಇದೆ. ಅಲ್ಲದೇ ಶಾಸಕರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗಲು ಸಹ ಚಿಂತನೆ ನಡೆಸಲಾಗುತ್ತಿದೆ. ಈ ಕುರಿತು ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರಿಗೆ ಸೂಚನೆಯನ್ನು ಸಹ ನೀಡಲಾಗಿದೆ.
ಐದರಿಂದ ಆರು ಶಾಸಕರ ವಿಶ್ವಾಸವನ್ನುಗಳಿಸಿ 5ನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲ್ಲಿಸಲು ಪ್ರಯತ್ನ ನಡೆಸುವಂತೆ ಎಚ್. ಡಿ. ಕುಮಾರಸ್ವಾಮಿಗೆ ಬಿಜೆಪಿ ರಾಷ್ಟ್ರೀಯ ನಾಯಕರು ಟಾಸ್ಕ್ ನೀಡಿದ್ದಾರೆ ಎಂಬ ಮಾಹಿತಿ ಇದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಈ ಲೆಕ್ಕಾಚಾರ ಹೇಗೆ ಫಲ ಕೊಡಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications