ಬಿಜೆಪಿ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಆಯ್ಕೆ ಬಹುತೇಕ ಖಚಿತ?: ಅಧಿಕೃತ ಘೋಷಣೆ ಬಾಕಿ
ಬೆಂಗಳೂರು, ಜೂ 10: ರಾಜ್ಯಸಭಾ ಚುನಾವಣೆಯ ಬಿಜೆಪಿ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಸಿರೋಯಾ ಅವರ ಗೆಲುವುದು ಬಹುತೇಕ ಖಚಿತವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಚಾಕೊಲೆಟ್ ಕೊಟ್ಟು ಅಭಿನಂದಿಸಿದ ಪ್ರಸಂಗ ನಡೆಯಿತು
ವಿಧಾನಸೌಧದ ಆವರಣದಲ್ಲಿ ಇಂತಹದ್ದೊಂದು ಪ್ರಸಂಗ ನಡೆಯಿತು. ಸದ್ಯ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಸಂಜೆಯ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ. ಈ ಸಂದರ್ಭದಲ್ಲಿಯೇ ಲೆಹರ್ ಸಿಂಗ್ ಅವರ ಗೆಲುವು ಸಹ ಆಗಿದೆ. ಅಧಿಕೃತ ಪ್ರಕಟಣೆಯೊಂದೇ ಬಾಕಿ ಇದೆ ಎಂದು ಕಟೀಲ್ ಅವರು ಅಭಿನಂದಿಸಿದರು.
ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಎಲ್ಲಾ ಶಾಸಕರು ಮಧ್ಯಾಹ್ನದ ಊಟಕ್ಕೆ ವಿಧಾನಸೌಧದಿಂದ ಹೊರಗಡೆ ಹೋಗಲು ಅಣಿಯಾಗುತ್ತಿದ್ದರು. ಆಗ ಲೆಹರ್ ಸಿಂಗ್ ಅವರು ಕಟೀಲು ಜೊತೆ ಕಾರಿನವರೆಗೂ ಬೀಳ್ಕೊಡಲು ಬಂದಿದ್ದರು. ಅಲ್ಲಿ ಶಾಸಕ ಸಚಿವ ಬೈರತಿ ಬಸವರಾಜ, ಶಾಸಕ ಎ.ವೈ. ನಾರಾಯಣಸ್ವಾಮಿ, ಅರವಿಂದ ಲಿಂಬಾವಳಿ ಸಹಿತ ಹಲವರು ಇದ್ದರು.
ಕಟೀಲು ಅವರು ಕಾರಿನೊಳಗೆ ಕೂಡುತ್ತಿದ್ದಂತೆ ನಾರಾಯಣಸ್ವಾಮಿ ಅವರು, "ಲೆಹರ್ ಸಿಂಗ್‌ಜಿ ಅಧ್ಯಕ್ಷರು ನಿಮಗಾಗಿ ಬೆಳಗ್ಗೆ 8 ಗಂಟೆಯಿಂದ ಇಲ್ಲಿಯೇ ಕುಳಿತಿದ್ದಾರೆ," ಎಂದು ಹೇಳಿದರು. ಕಾರಿನಿಳಗೆ ಚಾಕೊಲೆಟ್ ಎತ್ತಿಕೊಂಡ ಕಟೀಲ್ ಅವರು ಲೆಹರ್ ಸಿಂಗ್ ಕೈಗೆ ಕೊಟ್ಟು ಅಭಿನಂದಿಸಿದರು. ಪಕ್ಕದಲ್ಲಿಯೇ ಇದ್ದ ನಾರಾಯಣಸ್ವಾಮಿ, ಭೈರತಿ ಬಸವರಾಜು, ಅರವಿಂದ ಲಿಂಬಾವಳಿ ಅವರಿಗೂ ಚಾಕೊಲೆಟ್ ಕೊಟ್ಟು ನಗೆ ಬೀರಿದರು. ಮತ್ತೆ ಕಾರಿನಿಂದ ಇಳಿದು ಲೆಹರ್ ಸಿಂಗ್ ಕೈ ಕುಲುಕಿದರು. ಅಲ್ಲಿ ನೆರೆದಿದ್ದವರೆಲ್ಲಾ ಚಾಕೊಲೆಟ್ ತಿನ್ನಿಸಿ, ಎಂದು ಕೇಳಿದರೂ ಸಹ ಅಭಿನಂದಿಸಿ ಕಾರು ಹತ್ತಿ ಹೊರಟರು.

ಲೆಹರ್ ಸಿಂಗ್ ಆಯ್ಕೆ ಖಚಿತ?
ಬಿಜೆಪಿ ಮೊದಲ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ಮತ್ತು ಎರಡನೇ ಅಭ್ಯರ್ಥಿ ಜಗ್ಗೇಶ್ ಗೆಲುವುದು ಖಚಿತವಾಗಿದೆ. ಈ ಮಧ್ಯೆ ಮೂರನೇ ಅಭ್ಯರ್ಥಿ ಆಗಿರುವ ಲೆಹರ್ ಸಿಂಗ್ ಗೆಲುವು ಸಹ ಖಚಿತವಾಗಿದೆ. ಅಧಿಕೃತವಾಗಿ ಮತ ಎಣಿಕೆ ಕಾರ್ಯ ಮುಗಿದು ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ ಕಾರ್ಯ ಮುಗಿದ ನಂತರ ಅಧಿಕೃತವಾಗಿ ಘೋಷಣೆ ಆಗುವುದೊಂದೇ ಬಾಕಿ ಎನ್ನಲಾಗಿದೆ.

ರಾಜ್ಯಸಭೆಗೆ ಮತದಾನ ಮುಕ್ತಾಯ
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಶುಕ್ರವಾರ ನಡೆದ ಮತದಾನ ಪ್ರಕ್ರಿಯೆ ಬೆಳಗ್ಗೆ 8ರಿಂದ ಆರಂಭವಾಗಿತ್ತು. ಸಂಜೆ 4 ಗಂಟೆಯವರೆಗೆ ಮತದಾನಕ್ಕೆ ಅವಕಾಶ ಇತ್ತಾದರೂ ಮಧ್ಯಾಹ್ನ 2 ಗಂಟೆ ವೇಳೆಗೆ ಎಲ್ಲಾ ಶಾಸಕರು ತಮ್ಮ ಹಕ್ಕುಚಲಾಯಿಸಿದ್ದರಿಂದ ಎರಡು ತಾಸು ಮುಂಚಿತವಾಗಿ ಮತದಾನ ಪ್ರಕ್ರಿಯೆ ಮುಕ್ತಾಯವಾಯಿತು. 224 ಶಾಸಕರು ಮತದಾನ ಮಾಡಿದ್ದರೆ, ಅದರಲ್ಲಿ ಕೋಲಾರ ಶಾಸಕ ಕೆ. ಶ್ರೀನಿವಾಸಗೌಡ ಕಾಂಗ್ರೆಸ್‌ಗೆ ಮತ ಚಲಾಯಿಸುವ ಮೂಲಕ ಅಡ್ಡ ಮತದಾನ ಮಾಡಿದ್ದಾರೆ.

ಸಂಜೆ 5ರಿಂದ ಮತಎಣಿಕೆ
ರಾಜ್ಯಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಸಂಜೆ 5ರಿಂದ ಪ್ರಾರಂಭವಾಗುತ್ತದೆ. ಸಂಜೆ 6 ಗಂಟೆ ವೇಳೆಗೆ ಅಧಿಕೃತವಾಗಿ ಫಲಿತಾಂಶ ಘೋಷಣೆ ಮಾಡಲಾಗುತ್ತದೆ. ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ಪ್ರಕ್ರಿಯೆ ನಡೆದಿದ್ದು, ಅಲ್ಲಿಯೇ ಮತ ಎಣಿಕೆಯನ್ನೂ ಪೂರ್ಣಗೊಳಿಸಿ ಚುನಾವಣಾಧಿಕಾರಿಯೂ ಆಗಿರುವ, ವಿಧಾನಸಭಾ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಫಲಿತಾಂಶ ಘೋಷಣೆ ಮಾಡಲಿದ್ದಾರೆ.

ಹೈಜಾಕ್ ಮಾಡುವ ಅಗತ್ಯವಿಲ್ಲ
"ನಾವು ಯಾರನ್ನೂ ಹೈಜಾಕ್ ಮಾಡಿಲ್ಲ, ಅದರ ಅವಶ್ಯಕತೆಯು ನಮಗಿಲ್ಲ. ಕಾಂಗ್ರೆಸ್ ನ ಎಲ್ಲ 69 ಮಂದಿ ಪಕ್ಷಕ್ಕೇ ಮತ ನೀಡಿದ್ದಾರೆ. ಅದು ಸಮಾಧಾನದ ವಿಷಯ. ಬೇರೆ ಪಕ್ಷದ ವಿಚಾರ ನನಗೆ ಗೊತ್ತಿಲ್ಲ. ತಮ್ಮ ಪಕ್ಷದ ಶಾಸಕರನ್ನು ಕಾಂಗ್ರೆಸ್ಸ್ನವರು ಹೈಜಾಕ್ ಮಾಡಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಸಭೆ ಚುನಾವಣೆ ಮತದಾನ ಮುಗಿದ ನಂತರ ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮಗಳ ಜತೆ ಅವರು ಮಾತನಾಡಿದರು.












Click it and Unblock the Notifications