ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೌಡಗೆ ನಿಂದನೆ: ಕೇರಳ ಗಡಿಯಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬಂಧನ

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಏಕವಚನದಲ್ಲಿ ಅವಾಚ್ಯ ಪದ ಬಳಸಿ ನಿಂದನೆ ಮಾಡಿ, ಕಚೇರಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ಚಿಕ್ಕಬಳ್ಳಾಪುರ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಅಕ್ರಮವಾಗಿ ಅಳವಡಿಸಲಾಗಿದ್ದ ಬ್ಯಾನರ್‌ಗಳನ್ನು ತೆರವುಗೊಳಿಸಿದ್ದಕ್ಕೆ ಆಕ್ರೋಶಗೊಂಡ ರಾಜೀವ್ ಗೌಡ, ಜನವರಿ 12ರಂದು ಪೌರಾಯುಕ್ತೆ ಅಮೃತಾಗೌಡ ಅವರಿಗೆ ಕರೆ ಮಾಡಿ ಧಮ್ಕಿ ಹಾಕಿದ್ದ. ಈ ಕುರಿತು ಜನವರಿ 14ರಂದು ಅಧಿಕೃತ ದೂರು ದಾಖಲಾಗುತ್ತಿದ್ದಂತೆಯೇ ಆರೋಪಿ ರಾಜೀವ್ ಗೌಡ ತಲೆಮರೆಸಿಕೊಂಡಿದ್ದ.

ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ರಾಜ್ಯದಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹಲವು ದಿನಗಳಿಂದ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದ ರಾಜೀವ್ ಗೌಡನನ್ನು ಇಂದು ಕೇರಳ ಗಡಿ ಭಾಗದಲ್ಲಿ ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಇಂದು ಬೆಳಿಗ್ಗೆ ರಾಜೀವ್ ಗೌಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಅಲರ್ಟ್ ಆಗಿದ್ದರು. ಆದರೆ ಬಂಧನದ ಮಾಹಿತಿ ತಿಳಿಯುತ್ತಿದ್ದಂತೆಯೇ ಮಂಗಳೂರಿನಿಂದ ಪರಾರಿಯಾಗಲು ಯತ್ನಿಸಿದ್ದ ರಾಜೀವ್ ಗೌಡ, ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Rajeev Gowda arrest

ಏನಿದು ಪ್ರಕರಣ?

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ಅಕ್ರಮ ಬ್ಯಾನರ್‌ಗಳನ್ನು ತೆರವುಗೊಳಿಸಿದ್ದ ಕಾರಣಕ್ಕೆ ಪೌರಾಯುಕ್ತೆ ಅಮೃತಾಗೌಡ ವಿರುದ್ಧ ರಾಜೀವ್ ಗೌಡ ಅಶ್ಲೀಲ ಭಾಷೆ ಬಳಸಿ ನಿಂದನೆ ಮಾಡಿದ್ದಲ್ಲದೆ, ಕಚೇರಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿರುವ ಆಡಿಯೋ ವೈರಲ್ ಆಗಿದ್ದು, ಈ ಘಟನೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ಈ ಪ್ರಕರಣದಿಂದ ಕಾಂಗ್ರೆಸ್ ಪಕ್ಷಕ್ಕೂ ತೀವ್ರ ಮುಜುಗರ ಉಂಟಾಗಿ ಕೂಡಲೇ ಆತನನ್ನು ಪಕ್ಷದಿಂದ ವಜಾ ಮಾಡುವಂತೆ ಆಗ್ರಹ ಕೇಳಿಬಂದಿತ್ತು. ಈ ಹಿನ್ನೆಲೆ ಕಾಂಗ್ರೆಸ್‌ ಪಕ್ಷವು ರಾಜೀವ್ ಗೌಡನನ್ನು ಅಮಾನತುಗೊಳಿಸಿ ಶಿಸ್ತು ಸಮಿತಿಗೆ ವಿಚಾರಣೆ ವಹಿಸಿತ್ತು.

ಪೌರಾಯುಕ್ತೆ ಅಮೃತಾಗೌಡ ನೀಡಿದ ದೂರಿನ ಆಧಾರದಲ್ಲಿ ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ಕೇಸ್‌ ದಾಖಲಾಗಿತ್ತು. ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ ಗಂಭೀರ ಆರೋಪದ ನಡುವೆಯೂ ರಾಜೀವ್ ಗೌಡನ ಬಂಧನ ವಿಳಂಬವಾಗಿರುವ ಬಗ್ಗೆ ಕಾಂಗ್ರೆಸ್ ಪಕ್ಷದೊಳಗೆಯೇ ಅಸಮಾಧಾನ ಭುಗಿಲೆದ್ದಿತ್ತು. ಇದೇ ವೇಳೆ ಎಫ್‌ಐಆರ್‌ ರದ್ದುಪಡಿಸುವಂತೆ ರಾಜೀವ್ ಗೌಡ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠವು ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಇದೀಗ ಬಂಧನದೊಂದಿಗೆ ಪ್ರಕರಣ ಹೊಸ ತಿರುವು ಪಡೆದಿದ್ದು, ಮುಂದಿನ ತನಿಖೆಯತ್ತ ಎಲ್ಲರ ಗಮನ ನೆಟ್ಟಿದೆ.

ದೂರಿನಲ್ಲೇನಿತ್ತು?

ಬ್ಯಾನರ್‌ ತೆರವು ಮಾಡಿಸಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ರಾಜೀವ್ ಗೌಡ ಅವಾಚ್ಯವಾಗಿ, ಅಶ್ಲೀಲ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದರು. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಯಾರೇ ಆದರೂ ಕಾನೂನಿನ ಪ್ರಕಾರ ಕ್ರಮ ಜರುಗಲಿದೆ ಎಂದು ಹೇಳಿದ್ದರು.

ಪೌರಾಯುಕ್ತೆ ಅಮೃತಾ ಗೌಡ ದೂರಿನ ಮೇರೆಗೆ ರಾಜೀವ್ ಗೌಡ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬೆದರಿಕೆ, ಅವಾಚ್ಯವಾಗಿ ನಿಂದನೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಕುರಿತು ಪೊಲೀಸರು ಪರಿಶೀಲನೆ ನಡೆಸಿದ್ದರು. ಅಲ್ಲದೆ ಘಟನೆ ಬೆಳಕಿಗೆ ಬಂದ ನಂತರ ಸಾರ್ವಜನಿಕರು ಕೂಡ ಅಧಿಕಾರಿಯ ಪರ ನಿಂತು, ಸಾರ್ವಜನಿಕ ಸೇವೆಯಲ್ಲಿರುವ ಮಹಿಳಾ ಅಧಿಕಾರಿಗಳಿಗೆ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದ್ದರು. ಈ ವಿಚಾರವಾಗಿ ವಿಪಕ್ಷಗಳು ಕೂಡ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+