ಕೊಡಗಿನ ಹಾರಂಗಿ, ಚಿಕ್ಲಿಹೊಳೆ ಜಲಾಶಯಗಳಲ್ಲಿ ಜೀವಕಳೆ!

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಡಿಕೇರಿ, ಜುಲೈ 01 : ಮಡಿಕೇರಿ ವ್ಯಾಪ್ತಿಯಲ್ಲಿ ಮಳೆ ಸುರಿಯುತ್ತಿರುವುದರಿಂದ ಹಾರಂಗಿ ಮತ್ತು ಚಿಕ್ಲಿಹೊಳೆ ಜಲಾಶಯದಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದರಿಂದ ಬೇಸಿಗೆಯಲ್ಲಿ ನೀರಿಲ್ಲದೆ ಬರಿದಾಗಿದ್ದ ಜಲಾಶಯಕ್ಕೆ ಜೀವ ಕಳೆ ಬಂದಂತಾಗಿದೆ.

ಮಡಿಕೇರಿ ನಗರ ಸೇರಿದಂತೆ ಗಾಳಿಬೀಡಿನ ಕೂಟುಹೊಳೆ, ಅಬ್ಬಿಜಲಪಾತದ ನೀರು ಸೇರಿದಂತೆ ಸಣ್ಣಪುಟ್ಟ ತೋಡು, ಹೊಳೆಯ ನೀರು ಮಾತ್ರ ಇದಕ್ಕೆ ಹರಿದು ಬರುತ್ತಿದ್ದು ಈಗಾಗಲೇ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಏರಿಕೆಯಾಗಿದೆ. [ಕೊಡಗಿನಲ್ಲಿ ಆರಿದ್ರಾ ಮಳೆಗೆ ಮಲ್ಲಳ್ಳಿಯಲ್ಲಿ ಜಲನರ್ತನ]

harangi

ಮಳೆಗಾಲ ಆರಂಭವಾದ ಒಂದು ತಿಂಗಳಲ್ಲಿ ಜಲಾಶಯಕ್ಕೆ ಸುಮಾರು 2.7 ಟಿಎಂಸಿಯಷ್ಟು ನೀರು ಹರಿದು ಬಂದಿದೆ. ಕಳೆದ ನಾಲ್ಕು ದಿನಗಳಿಂದ ಮಳೆಯ ಅಬ್ಬರ ಹೆಚ್ಚಿದ್ದರಿಂದ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. 4177ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. [ಚಿತ್ರಗಳು : ಕೊಡಗಿನಲ್ಲಿ ತೀವ್ರತೆಗೊಂಡ ಆರಿದ್ರ ಮಳೆಯ ಆರ್ಭಟ]

ಕಳೆದ ವರ್ಷ ಜೂನ್ ತಿಂಗಳಲ್ಲಿ ಮಳೆ ಅಬ್ಬರ ಜಾಸ್ತಿಯಾಗಿ ಬಳಿಕ ಕ್ಷೀಣಿಸಿದ ಪರಿಣಾಮ ಬೇಸಿಗೆಯಲ್ಲಿ ನೀರು ತಳ ಸೇರಿತ್ತು. ಇದೀಗ ಒಳಹರಿವಿನ ಪ್ರಮಾಣ ಹೆಚ್ಚಾಗಿರುವ ಕಾರಣ 2,859 ಅಡಿ ನೀರಿನ ಮಟ್ಟದ ಜಲಾಶಯದಲ್ಲಿ ಇದೀಗ 2,831.60 ಅಡಿಗಳಷ್ಟು ನೀರು ಸಂಗ್ರಹವಾಗಿದೆ.

ರೈತರಲ್ಲಿ ಮಂದಹಾಸ : ಹಾರಂಗಿ ಜಲಾಶಯದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಮಳೆಯ ಇನ್ನಷ್ಟು ಬಿರುಸುಗೊಳ್ಳುವ ಸಾಧ್ಯತೆಯಿರುವುದರಿಂದಾಗಿ ಜಲಾಶಯ ಕೆಲವೇ ದಿನಗಳಲ್ಲಿ ಭರ್ತಿಯಾಗಬಹುದು ಎಂಬ ನಿರೀಕ್ಷೆ ರೈತರದ್ದಾಗಿದೆ.

chiklihole

ಜಿಲ್ಲಾಡಳಿತ ತಗ್ಗು ಪ್ರದೇಶದಲ್ಲಿರುವ ಜನರಿಗೆ ಸೂಕ್ತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಕೆ ನೀಡಿದೆ. ಮಳೆಯ ರಭಸ ಹೆಚ್ಚಾಗಿ ಒಳಹರಿವಿನ ಪ್ರಮಾಣ ಹೆಚ್ಚಾದರೆ ಜಲಾಶಯದಿಂದ ನೀರನ್ನು ನದಿಗೆ ಬಿಡಲಾಗುತ್ತದೆ. ಆದ್ದರಿಂದ, ತಗ್ಗು ಪ್ರದೇಶದಲ್ಲಿ ಪ್ರವಾಹ ಸ್ಥಿತಿ ಎದುರಾಗುವ ಸಾಧ್ಯತೆ ಇದೆ.

ಚಿಕ್ಲಿಹೊಳೆ ಜಲಾಶಯ : ಪುಟ್ಟ ಜಲಾಶಯ ಚಿಕ್ಲಿಹೊಳೆಯೂ ಭರ್ತಿಯಾಗುವ ಹಂತ ತಲುಪಿದೆ. ಈ ಜಲಾಶಯಕ್ಕೆ ಚಿಕ್ಕಪುಟ್ಟ ತೋಡು ಮತ್ತು ಮಳೆನೀರು ಹರಿದು ಬರುತ್ತಿದ್ದು, ಹೆಚ್ಚುವರಿ ನೀರು ಕಾಲುವೆಯಲ್ಲಿ ಹರಿಯುತ್ತಿದೆ. ಈ ಜಲಾಶಯದ ವಿಶೇಷತೆ ಏನೆಂದರೆ ಜಲಾಶಯ ತುಂಬಿದ ತಕ್ಷಣವೇ ಹೆಚ್ಚಿನ ನೀರು ಅದಾಗಿಯೇ ಹರಿದು ಹೊರಹೋಗುತ್ತದೆ.

ಗರಿಷ್ಠ ಮಟ್ಟ 872.6 ಅಡಿಯಷ್ಟು ಇರುವ ಜಲಾಶಯಕ್ಕೆ 30ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, 0.18 ಟಿಎಂಸಿ ನೀರಿನ ಸಂಗ್ರಹವಿದೆ. ಕೊಡಗಿನಲ್ಲಿ ಮಳೆಗಾಲದ ವಾತಾವರಣ ನಿರ್ಮಾಣವಾಗಿದ್ದು ಮಳೆ ಹೀಗೆಯೇ ಮುಂದುವರೆದರೆ ಅಂತರ್ಜಲ ಹೆಚ್ಚಾಗಿ ಜಲಹುಟ್ಟಿ ನೀರಿನ ಪ್ರಮಾಣ ಏರಿಕೆಯಾದರೆ ಕೆಆರ್‍ಎಸ್‍ಗೆ ಹರಿದು ಬರುವ ಪ್ರಮಾಣ ಹೆಚ್ಚಾಗಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Inflow at Harangi and Chiklihole dam in Kodagu district has increased due to heavy rain.
Please Wait while comments are loading...