ಕರ್ನಾಟಕ ಹವಾಮಾನ; ಜೂ.19ರ ತನಕ ಮಳೆ ಮುನ್ಸೂಚನೆ
ಬೆಂಗಳೂರು ಜೂ. 15: ನೈಋತ್ಯ ಮುಂಗಾರು ಕರ್ನಾಟಕದಲ್ಲಿ ಅಬ್ಬರಿಸಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. 15 ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿರೀಕ್ಷಿತ ಮಳೆಯಾಗಿಲ್ಲ. ಆದರೆ ಜೂ.19ರವರ ತನಕ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಜೋರು ಮಳೆಯಾಗುವ ನಿರೀಕ್ಷೆ ಇದೆ. ಕೆಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಮಂಗಳವಾರ ಸಂಜೆಯಿಂದಲೇ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗಿದೆ.
ಬೆಳಗ್ಗೆಯಿಂದ ಆಗಾಗ ದರ್ಶನ ಕೊಡುವ ಬಿಸಿಲು ಬಿಸಿಲು ಸಂಜೆಯಾಗುತ್ತಿದ್ದಂತೆ ಮರೆಯಾಗಿ ಒಮ್ಮೆಲೆ ಹಗುರದಿಂದ ಸಾಧಾರಣ ಮಳೆ ಸುರಿಯಲು ಆರಂಭವಾಗುತ್ತದೆ. ಮುಂದಿನ ನಾಲ್ಕು ದಿನ ಇದೇ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಹವಾಮಾನ ಇಲಾಖೆ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ರಾಮನಗರ, ಮಂಡ್ಯ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ ಹಾಗೂ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ನೀಡಿದೆ.
ಉತ್ತರ ಒಳನಾಡಿಗೂ ಸಾಧಾರಣ ಮಳೆ; ಮಳೆಯ ಜೊತೆಗೆ ಗಾಳಿಯು ಸುಮಾರು 30 ರಿಂದ 40 ಕಿ. ಮೀ. ವೇಗದಲ್ಲಿ ಬೀಸಲಿದೆ ಎಂದು ಅಂದಾಜಿಸಲಾಗಿದೆ. ತಾಪಮಾನದಲ್ಲಿ ಒಂದಷ್ಟು ಬದಲಾವಣೆಗಳು ಆಗಲಿದ್ದು, ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದೆ.

ಈ ನಾಲ್ಕು ದಿನದ ಅವಧಿಯಲ್ಲಿ ಬೆಳಗಾವಿ, ಧಾರವಾಡ, ವಿಜಯಪುರ, ಹಾವೇರಿ, ಗದಗ, ದಾವಣಗೆರೆ, ರಾಯಚೂರು, ಕಲಬುರಗಿ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಇಲ್ಲವೇ ಹಗುರ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ವಾರದ ಹಿಂದೆ ಮಳೆ ಅಬ್ಬರಿಸಿದ್ದನ್ನು ಕಂಡ ರೈತರು ಭೂಮಿಯಲ್ಲಿನ ತೇವಾಂಶ ಇರುವಾಗಲೇ ಉಳುಮೆ ಮಾಡಿದ್ದರು. ನಂತರ ಕಳೆದವಾದ ಎಲ್ಲಿಯೂ ಮಳೆ ಬಾರದ ಹಿನ್ನೆಲೆ ರೈತರು ಕಂಗಾಲಾಗಿದ್ದರು. ಇದೀಗ ಪುನಃ ಮಳೆಯ ಸಿಂಚನವಾಗುತ್ತಿದ್ದು, ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ.
ಬೆಂಗಳೂರಿನಲ್ಲೂ ಮಳೆ; ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಆರಂಭವಾದ ಮಳೆ ತಡರಾತ್ರಿವರೆಗೂ ಸುರಿದಿದೆ. ಕೆಲವು ಬಡಾವಣೆಗಳಲ್ಲಿ ಬುಧವಾರ ಬೆಳಗ್ಗೆಯೂ ತುಂತುರು ಮಳೆಯಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ 48 ಗಂಟೆಗಳ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗಲಿದೆ.
ಈ ವೇಳೆ ತಾಪಮಾನ ತುಸು ಇಳಿಕೆಯಾಗಲಿದ್ದು, ಎರಡು ದಿನ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications