Karnataka Rain: ಕರ್ನಾಟಕ; ಮಾರ್ಚ್ 28ರಂದು ಗುಡುಗು ಸಹಿತ ಮಳೆ
ಬೆಂಗಳೂರು, ಮಾರ್ಚ್ 28; ಉತ್ತರ ಮತ್ತು ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಭಾನುವಾರವೂ ಮಳೆಯಾಗಿದೆ. ಮಹಾರಾಷ್ಟ್ರ ಕರಾವಳಿಯಲ್ಲಿನ ವಾಯುಭಾರ ಕುಸಿತದ ಪರಿಣಾಮ ಸೋಮವಾರವೂ ಮಳೆಯ ಮುನ್ಸೂಚನೆ ನೀಡಲಾಗಿದೆ.
ಬೆಂಗಳೂರು ನಗರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಕೊಡಗು, ಹಾಸನ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಮಾರ್ಚ್ 28ರಂದು ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಮಹಾರಾಷ್ಟ್ರ ಕರಾವಳಿಯಲ್ಲಿನ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಮಳೆಯ ಜೊತೆ ಗುಡು ಮತ್ತು ಸಿಡಿಲಿನ ಅಬ್ಬರವು ಜೋರಾಗಿ ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಸಾಮಾನ್ಯ ಬೇಸಿಗೆಗೆ ಹೋಲಿಕೆ ಮಾಡಿದರೆ ಈ ಬಾರಿ ಮಾರ್ಚ್ ತಿಂಗಳ ಅಂತ್ಯದಲ್ಲಿಯೇ ತಾಪಮಾನದಲ್ಲಿ ಭಾರೀ ಏರಿಕೆಯಾಗಿದೆ. ಆದ್ದರಿಂದ ಉತ್ತರ ಒಳನಾಡಿನ ಬೆಳಗಾವಿ, ಗದಗ, ಹಾವೇರಿ ಮತ್ತು ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿಯೂ ಸೋಮವಾರ ಮಳೆ ಮುನ್ಸೂಚನೆ ನೀಡಲಾಗಿದೆ.
ವಿವಿಧ ಜಿಲ್ಲೆಗಳಲ್ಲಿ ಮಳೆ; ಭಾನುವಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ. ಮಳೆಯ ಜೊತೆಗಿನ ಗಾಳಿ ಅಬ್ಬರಕ್ಕೆ ಚಾಮರಾಜನಗರ, ವಿಜಯಪುರ, ಬಳ್ಳಾರಿ ಜಿಲ್ಲೆಗಳಲ್ಲಿ ಬೆಳೆಗಳಿಗೆ ಹಾನಿಯಾಗಿದೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವಟ್ಟಮ್ಮನಹಳ್ಳಿ ಗ್ರಾಮದಲ್ಲಿ ಭಾನುವಾರ ಆಲಿಕಲ್ಲು ಸಹಿತ ಮಳೆಯಾಗಿದೆ. ದೊಡ್ಡ ದೊಡ್ಡ ಆಲಿಕಲ್ಲು ಬಿದ್ದಿದ್ದು ಪಪ್ಪಾಯಿ, ದಾಳಿಂಬೆ, ಟೊಮೇಟೊ, ಬದನೆ ಬೆಳೆಗೆ ಹಾನಿಯಾಗಿದೆ ಎಂದು ರೈತರು ಹೇಳಿದ್ದಾರೆ.
ವಿಜಯಪುರ ತಾಲೂಕಿನ ಯತ್ನಾಳ ಗ್ರಾಮದಲ್ಲಿ ಭಾನುವಾರ ಭಾರೀ ಗಾಳಿಯೊಂದಿಗೆ ಕೂಡಿದ ಮಳೆಯಾಗಿದೆ. ಗಾಳಿಯ ಅಬ್ಬರಕ್ಕೆ ಕಟಾವಿಗೆ ಬಂದಿದ್ದ 30 ಟನ್‌ಗಳಷ್ಟು ದ್ರಾಕ್ಷಿ ಬೆಳೆ ನೆಲಕ್ಕುರುಳಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ, ಭದ್ರಾವತಿ, ಹೊಸನಗರ, ಕಾರ್ಗಲ್ ಮುಂತಾದ ಪ್ರದೇಶದಲ್ಲಿ ಮಳೆಯಾಗಿದೆ. ಹುಬ್ಬಳ್ಳಿಯಲ್ಲಿಯೂ ಮಳೆಯಾಗಿದ್ದು, ನವಲಗುಂದದಲ್ಲಿ ವಿದ್ಯುತ್ ಪೂರೈಕೆಗೆ ಸಮಸ್ಯೆಯಾಗಿತ್ತು.
ಚಾಮರಾಜನಗರ ಜಿಲ್ಲೆಯಲ್ಲಿಯೂ ಉತ್ತಮ ಮಳೆಯಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿಯೂ ಮಳೆ ಸುರಿದಿದೆ. ಕುಂದುಕೆರೆ, ಮೂಲನ ಹೊಳೆ ಮುಂತಾದ ಕಡೆ ಉತ್ತಮ ಮಳೆಯಾಗಿದೆ.
ಕರ್ನಾಟಕ ಮಾತ್ರವಲ್ಲ ಕೇರಳ, ತಮಿಳುನಾಡು ರಾಜ್ಯಗಳ ಕೆಲವು ಭಾಗಗಳಲ್ಲಿಯೂ ಸೋಮವಾರ ಗುಡುಗು ಸಹಿತ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
Recommended Video
ಆಂಧ್ರ ಪ್ರದೇಶದ ಕರಾವಳಿ ಭಾಗ, ರಾಯಲಸೀಮಾ ಭಾಗದಲ್ಲಿ ಸೋಮವಾರ ಮಳೆಯ ಅಬ್ಬರ ಹೆಚ್ಚಿರಲಿದೆ. ಮುಂದಿನ ನಾಲ್ಕು ದಿನಗಳ ಕಾಲ ಕೇರಳ, ತಮಿಳುನಾಡು, ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.












Click it and Unblock the Notifications