ಕರ್ನಾಟಕ; ನವೆಂಬರ್ 7 ರಿಂದ 9ರ ತನಕ ಭಾರೀ ಮಳೆ ಮುನ್ಸೂಚನೆ
ಬೆಂಗಳೂರು, ನವೆಂಬರ್ 07; ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ನವೆಂಬರ್ 9ರ ತನಕ ಭಾರೀ ಮಳೆಯಾಗಲಿದೆ. ಬಳಿಕ ರಾಜ್ಯದಲ್ಲಿ ಮಳೆಯ ಪ್ರಮಾಣ ತಗ್ಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ನವೆಂಬರ್ 7 ರಿಂದ 9ರ ತನಕ ಭಾರೀ ಮಳೆಯಾಗಲಿದೆ. ಹಲವು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತ ಮತ್ತು ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪ್ರಭಾವದಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ.
ಮುಂದಿನ 2 ದಿನ ರಾಜ್ಯದ 7 ಜಿಲ್ಲೆಗಳಲ್ಲಿ ಭಾರಿ ಮಳೆ
ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಲಾಗಿದ್ದು, ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.
ಮಳೆ ನೀರು ಮನೆಗಳಿಗೆ ನುಗ್ಗದಂತಹ ಕಾಮಗಾರಿಗಳಿಗೆ ಆದ್ಯತೆ: ಸಿಎಂ ಬೊಮ್ಮಾಯಿ
ನವೆಂಬರ್ 7ರಂದು ಕರಾವಳಿ ಭಾಗದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಹೆಚ್ಚು ಮಳೆಯಾಗಬಹುದು ಎಂದು ಮುನ್ಸೂಚನೆ ಕೊಡಲಾಗಿದೆ. ಉತ್ತರ ಒಳನಾಡಿನಲ್ಲಿ ಗುಡುಗು, ಸಿಡಿಲಿನ ಅಬ್ಬರ ಹೆಚ್ಚಿರಲಿದ್ದು, ಸಾಧಾರಣ ಮಳೆಯಾಗಲಿದೆ.
ಬೆಂಗಳೂರಲ್ಲಿ ದೀಪಾವಳಿ ಸಂಭ್ರಮಕ್ಕೆ ಮಳೆ ಅಡ್ಡಿ

ವಿವಿಧ ಜಿಲ್ಲೆಗಳಲ್ಲಿ ಸುರಿದ ಮಳೆ
ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯದಲ್ಲಿ ವಾಯುಭಾರ ಕುಸಿತದ ಪರಿಣಾಮ ಮಳೆಯಾಗಿತ್ತು. ನವೆಂಬರ್ ತಿಂಗಳಿನಲ್ಲಿಯೂ ಮಳೆ ಮುಂದುವರೆಯುತ್ತಿದೆ. ಚಾಮರಾಜನಗರದಲ್ಲಿ ಶನಿವಾರ ಭಾರೀ ಮಳೆಯಾಗಿದೆ, ಮಹದೇಶ್ವರನ ಬೆಟ್ಟದ ಕಲ್ಯಾಣಿ ಭರ್ತಿಯಾಗಿದ್ದು, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ಬಂಡೀಪುರದಲ್ಲಿ ಸಹ ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಶನಿವಾರ ಉತ್ತಮ ಮಳೆಯಾಗಿದೆ. ಕೆರೆಕಟ್ಟೆ, ಕಿಗ್ಗಾ, ಮೆಣಸೆ, ಬೇಗಾರು, ಅಡ್ಡಗದ್ದೆ ಸೇರಿದಂತೆ ವಿವಿಧ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಕಳೆದ ನಾಲ್ಕು ದಿನಗಳಿಂದ ತಾಲೂಕಿನಲ್ಲಿ ಮಳೆಯಾಗುತ್ತಿದೆ.

ಎಲ್ಲಿ, ಎಷ್ಟು ಮಳೆಯಾಗಿದೆ?
ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶನಿವಾರ ಸಹ ಭಾರೀ ಮಳೆಯಾಗಿದೆ. ಉಡುಪಿಯಲ್ಲಿ ಅತಿ ಹೆಚ್ಚು ಎಂದರೆ 9 ಸೆಂ. ಮೀ. ಮಳೆಯಾಗಿದೆ. ಚನ್ನಪಟ್ಟಣದಲ್ಲಿ 7, ಮಧುಗಿರಿಯಲ್ಲಿ 6, ಮಂಗಳೂರು 5, ಅಜ್ಜಂಪುರ 5, ಮದ್ದೂರು 5 ಸೆಂ. ಮೀ. ಮಳೆಯಾಗಿದೆ. ಭಟ್ಕಳ, ಹಾಸನ, ಬಂಗಾರಪೇಟೆ, ಶಿಕಾರಿಪುರ, ಚಿಕ್ಕಬಳ್ಳಾಪುರದಲ್ಲಿ 2 ಸೆಂ. ಮೀ. ಮಳೆಯಾಗಿದೆ. ಅರಸೀಕೆರೆ, ಬಾಗೇಪಲ್ಲಿ, ಭದ್ರಾವತಿ, ಪಾವಗಡ, ಕೊಪ್ಪದಲ್ಲಿ 1 ಸೆಂ. ಮೀ. ಮಳೆಯಾಗಿದೆ. ಕರಾವಳಿ ಭಾಗದಲ್ಲಿ ಮೂರು ದಿನಗಳ ಕಾಲ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಇಂದು ಸಹ ಮಳೆ
ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾನುವಾರ ಮತ್ತು ಸೋಮವಾರ ಗುಡುಗು ಸಹಿತ ಮಳೆ ಮುಂದುವರೆಯಲಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಹೆಚ್ಚು ಮಳೆಯಾಗಲಿದೆ. ಬೆಂಗಳೂರು ನಗರದಲ್ಲಿ ಭಾನುವಾರ ಸಂಜೆ ವೇಳೆಗೆ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕರ್ನಾಟಕ ಭಾಗದಲ್ಲಿ ಮಳೆಯಾದರೆ ಉತ್ತರ ಕರ್ನಾಟಕ ಭಾಗದಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದೆ. ಅರಬ್ಬಿ ಸಮುದ್ರದಲ್ಲಿ ಮತ್ತೊಂದು ವಾಯಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಇದರಿಂದಾಗಿ ನವೆಂಬರ್ 11ರ ಬಳಿಕ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ.

ವಿವಿಧ ರಾಜ್ಯಗಳಲ್ಲಿ ಮಳೆ
ಕರ್ನಾಟಕ ಮಾತ್ರವಲ್ಲ ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಲಕ್ಷದ್ವೀಪ ಸೇರಿದಂತೆ ವಿವಿಧ ರಾಜ್ಯಗಳಲ್ಲಿಯೂ ಗುಡುಗು ಸಹಿತ ಮಳೆಯಾಗಲಿದೆ. ಮಹಾರಾಷ್ಟ್ರದ ಕರಾವಳಿ, ಗೋವಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಚದುರಿದಂತೆ ಮಳೆಯಾಗಲಿದೆ. ತಮಿಳುನಾಡಿನಲ್ಲಿ ಮುಂದಿನ 2 ವಾರಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಲಕ್ಷದ್ವೀಪ, ಮಾಹೆ, ಒಡಿಶಾ ಭಾಗದಲ್ಲಿ ಭಾನುವಾರ ಗಂಟೆಗೆ 50 ರಿಂದ 60 ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದೆ.