ಗುರುವಾರ ರಾಜ್ಯಾದ್ಯಂತ ಗುಡುಗು ಸಹಿತ ಮಳೆ ಸಂಭವ
ಬೆಂಗಳೂರು, ಜೂ. 11: ಮುಂಗಾರು ಮಾರುತಗಳು ಕೊಂಚ ಬಲಿಷ್ಠವಾಗಿದ್ದು ರಾಜ್ಯದ ಬಹುತೇಕ ಕಡೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡು ಭಾಗಗಳು ಗುರುವಾರ ಹೆಚ್ಚು ಮಳೆ ಪಡೆದುಕೊಳ್ಳಲಿವೆ. ಚಂಡ ಮಾರುತ 'ಅಶೋಬಾ' ದಿಕ್ಕು ಬದಲಾವಣೆ ಮಾಡಿದ್ದು ಓಮನ್ ಕಡೆ ಚಲಿಸುತ್ತಿದೆ.
ಹಾಗಾಗಿ ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ಮಳೆ ಬೀಳುತ್ತಿಲ್ಲ. ಮಳೆಯಾದರೆ ಅದು ಮುಂಗಾರಿನ ಪ್ರಭಾವ ಎಂದು ಹವಾಮಾನ ಇಲಾಖೆ ತಿಳಿಸಿದೆ. ನೈರುತ್ಯ ಮಾನ್ಸೂನ್ ಮಾರುತಗಳು ಪ್ರಭಾವಶಾಲಿ ಆಗುತ್ತಿದ್ದು ಕರಾವಳಿ ಮತ್ತು ದಕ್ಷಿಣ ಒಳನಾಡಿಗೆ ಮಳೆ ಸುರಿಸಲಿವೆ. ಅಲ್ಲದೇ ಒಳನಾಡು ಭಾಗದಲ್ಲೂ ಮಳೆಯಾಗಲಿದೆ. ['ಅಶೋಬಾ' ಪರಿಣಾಮ ಕರಾವಳಿಯಲ್ಲಿ ಭಾರೀ ಮಳೆ]

ಬುಧವಾರ ಮಂಗಳೂರು, ಕಾರವಾರದಲ್ಲಿ ಭಾರೀ ಮಳೆಯಾಗಿದೆ. ಬೆಂಗಳೂರಿನಲ್ಲಿ ಬುಧವಾರ ಸಂಜೆ 3.7 ಮೀ ಮೀ ಮಳೆಯಾಗಿದೆ. ರಾತ್ರಿ ಏಳು ಗಂಟೆಗೆ ಆರಂಭವಾದ ಮಳೆ ನಿರಂತರ ಒಂದು ಗಂಟೆ ಕಾಲ ಸುರಿದಿದೆ.
ಉಳಿದಂತೆ ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ಶಿರಸಿ, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಮಳೆ ಬಿದ್ದಿದೆ. ಮುಂದಿನ ಎರಡು ಮೂರು ದಿನ ಮಳೆ ಹೆಚ್ಚಾಗಲಿದ್ದು ಕೃಷಿ ಕಾರ್ಯ ಚಟುವಟಿಕೆಗೆ ಪೂರಕವಾಗಲಿದೆ ಎಂದು ಹೇಳಲಾಗಿದೆ.












Click it and Unblock the Notifications