ಮಳೆ ಅನಾಹುತಗಳ ನಿರ್ವಹಣೆಗೆ ಜಿಲ್ಲೆಯಲ್ಲಿ 2 ತಂಡ ರಚನೆ
ಬೆಂಗಳೂರು, ಮೇ 22 : ಮುಂಗಾರು ಮಳೆ ಆರಂಭವಾಗುವ ಮೊದಲೇ ಕರ್ನಾಟಕ ಸರ್ಕಾರ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜಿಲ್ಲೆಗಳಲ್ಲಿ ಮಳೆಯಿಂದ ಆಗುವ ಅನಾಹುತಗಳ ನಿರ್ವಹಣೆಗೆ 2 ತಂಡಗಳನ್ನು ರಚನೆ ಮಾಡಲಾಗುತ್ತದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಈ ಕುರಿತು ತೀರ್ಮಾನವನ್ನು ಕೈಗೊಳ್ಳಲಾಗಿದೆ. ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 25ರಿಂದಲೇ ತಂಡಗಳು ಕಾರ್ಯ ನಿರ್ವಹಣೆ ಮಾಡಲಿವೆ.
ಮಳೆಗಾಲ ಮಾತ್ರದಲ್ಲ ರಾಜ್ಯದಲ್ಲಿನ ಬರ ಪರಿಸ್ಥಿತಿ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ. ಕುಡಿಯುವ ನೀರಿನ ಕೊರತೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಹೊಣೆಯನ್ನು ತಹಶೀಲ್ದಾರ್ ಅವರಿಗೆ ವಹಿಸಲಾಗಿದೆ.

156 ತಾಲೂಕು : ಕರ್ನಾಟಕದ 30 ಜಿಲ್ಲೆಗಳ 156 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈ ಪೈಕಿ 107 ತಾಲೂಕುಗಳಲ್ಲಿ ಬರಪರಿಸ್ಥಿತಿ ತೀವ್ರವಾಗಿದ್ದು ಜನ, ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.
20.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಭೂಮಿ ಮಳೆ ಕೊರತೆಯನ್ನು ಎದುರಿಸಿದ್ದು, 19.46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆನಾಶವಾಗಿದೆ. ರೈತರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ 2064 ಕೋಟಿ ಆರ್ಥಿಕ ನೆರವನ್ನು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಿದೆ.
ರಾಜ್ಯದಲ್ಲಿನ ಬರ ಪರಿಸ್ಥಿತಿ ಅಧ್ಯಯನ ಮಾಡಲು ಬಂದಿದ್ದ ಕೇಂದ್ರ ತಂಡ ಕೃಷಿ ಇಲಾಖೆಗೆ ವರದಿಯನ್ನು ಸಲ್ಲಿಸಿದೆ. ಗೃಹ ಇಲಾಖೆಯಡಿ ಕಾರ್ಯ ನಿರ್ವಹಣೆ ಮಾಡುವ ಉನ್ನತ ಮಟ್ಟದ ಸಮಿತಿ ಪರಿಹಾರದ ಕುರಿತು ತೀರ್ಮಾನವನ್ನು ತೆಗೆದುಕೊಂಡಿಲ್ಲ.












Click it and Unblock the Notifications