ಮುಂದಿನ 5 ದಿನಗಳಲ್ಲಿ ಬೆಂಗಳೂರು ಸೇರಿ ಕರ್ನಾಟಕ ಹಲವೆಡೆ ಮಳೆ ಸಾಧ್ಯತೆ
ಬೆಂಗಳೂರು, ಏಪ್ರಿಲ್ 7: ಕರ್ನಾಟಕ ಮಹಾರಾಷ್ಟ್ರ ಹಾಗೂ ಒಡಿಶಾ ಸೇರಿದಂತೆ ಭಾರತದ ವಿವಿಧೆಡೆ ಮುಂದಿನ ಐದು ದಿನಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆ ದೇಶದ ಇತರ ಯಾವುದೇ ಭಾಗದಲ್ಲಿ ಯಾವುದೇ ಶಾಖದ ಪರಿಸ್ಥಿತಿಯನ್ನು ಮುನ್ಸೂಚಿಸಿಲ್ಲ. ಮುಂದಿನ ಮೂರು ದಿನಗಳಲ್ಲಿ ಒಡಿಶಾದಲ್ಲಿ ಗುಡುಗು, ಮಿಂಚು, ಗಾಳಿ ಸಹಿತ ಸಾಧಾರಣ ಮಳೆಯನ್ನು ಹೊರತುಪಡಿಸಿ ಮುಂದಿನ ಐದು ದಿನಗಳಲ್ಲಿ ಪೂರ್ವ ಭಾರತದಲ್ಲಿ ಹವಾಮಾನದಲ್ಲಿ ಯಾವುದೇ ಮಹತ್ವದ ಬದಲಾವಣೆಗಳಿಲ್ಲ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

ಶುಕ್ರವಾರ ಹಾಗೂ ಶನಿವಾರ ಒಡಿಶಾ ಮತ್ತು ಛತ್ತೀಸ್‌ಗಢದಲ್ಲಿ ಪ್ರತ್ಯೇಕ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಪಶ್ಚಿಮ ಭಾರತದಲ್ಲಿ ಮುಂದಿನ ಐದು ದಿನಗಳಲ್ಲಿ ಮಹಾರಾಷ್ಟ್ರದ ಮೇಲೆ ಪ್ರತ್ಯೇಕವಾದ ಗುಡುಗು, ಮಿಂಚು ಸಹಿತ ಮಳೆಯಾಗಬಹುದು ಎಂದು ಐಎಂಡಿ ಊಹಿಸಿದೆ. ಇಂದು ಏಪ್ರಿಲ್ 7 ರಂದು ಸಂಜೆ ಮಧ್ಯ ಮಹಾರಾಷ್ಟ್ರ ಮತ್ತು ಮರಾಠವಾಡದಲ್ಲಿ ಪ್ರತ್ಯೇಕವಾದ ಆಲಿಕಲ್ಲು ಮಳೆ ಬೀಳಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಕರ್ನಾಟಕದ ಐದು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಬಿರುಗಾಳಿ ಬೀಸುತ್ತಿರುವ ಜಿಲ್ಲೆಗಳಲ್ಲಿ ಬಿರುಗಾಳಿ, ಮಿಂಚು, ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಒಂದು ವಾರದಿಂದ ಸಂಜೆಯ ವೇಳೆಗೆ ಸಾಧಾರಣ ಮಳೆ ಅಲ್ಲಲ್ಲಿ ಆಗುತ್ತಿದೆ. ಏತನ್ಮಧ್ಯೆ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ಏಪ್ರಿಲ್ 12 ಮತ್ತು 20 ರ ನಡುವೆ ರಾಜ್ಯದಲ್ಲಿ ಸರಾಸರಿ ಮಳೆಯ ಮುನ್ಸೂಚನೆ ನೀಡಿದೆ. ಕರ್ನಾಟಕದಲ್ಲಿ ದಕ್ಷಿಣ ಕನ್ನಡ, ರಾಮನಗರ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ಕಲಬುರ್ಗಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ಶುರುವಿಟ್ಟುಕೊಂಡಿರುವ ಪೂರ್ವ ಮುಂಗಾರು ಮಳೆ ಏಪ್ರಿಲ್ 10ರವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಈ ಪೈಕಿ ಒಂದು ಅಧಿಕ ಮಳೆ ಬರುವ ನಿರೀಕ್ಷೆ ಇದೆ ಎಂದು ವರದಿಗಳು ತಿಳಿಸಿವೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಮತ್ತು ಮಿಂಚು ಜೋರು ಮಳೆ ದಾಖಲಾಗಿದೆ. ಐದು ದಿನಗಳ ಪೈಕಿ ಏಪ್ರಿಲ್ 8ರವರೆಗೆ ಕರಾವಳಿ ಭಾಗದಲ್ಲಿ ಮಳೆ ತುಸು ಬಿರುಸುಕೊಳ್ಳಲಿದೆ. ಇದನ್ನು ಬಿಟ್ಟರೆ ದಕ್ಷಿಣ ಒಳನಾಡಿನ ಭಾಗದಲ್ಲಿ ಹಗುರ ಇಲ್ಲವೇ ಸಾಧಾರಣವಾಗಿ ಮಳೆ ಬರಬಹುದು.
ಆದರೆ ಉತ್ತರ ಒಳನಾಡಿನ ಭಾಗದ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ತುಂತುರು ಮಳೆ ಬರುವ ಸಾಧ್ಯತೆ ಇದೆ. ಇನ್ನೂ ಏಪ್ರಿಲ್ 8 ರಂದು ಕರ್ನಾಟಕ ರಾಜ್ಯದ ಬಹತೇಕ ಎಲ್ಲ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸಂಭವ ಇದೆ ಎಂದು ಮುನ್ಸೂಚನೆ ವರದಿ ತಿಳಿಸಿದೆ. ಶನಿವಾರ (ಏಪ್ರಿಲ್ 8) ಮಳೆ ಸುರಿಸುವ ಮಾರುತಗಳು ಹೆಚ್ಚು ಚುರುಕಾಗಿರಲಿವೆ. ಹೀಗಾಗಿ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ, ಉತ್ತರ ಒಳನಾಡಿನ ಜಿಲ್ಲೆಗಳಾದ ವಿಜಯಪುರ, ಕಲಬುರಗಿ, ಹಾವೇರಿ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೊಡಗು, ಕೋಲಾರ, ಮೈಸೂರು, ರಾಮನಗರ ಜಿಲ್ಲೆಗಳ ಹಲವು ಕಡೆಗಳಲ್ಲಿ ಗುಡುಗು ಸಹಿತ ಅಧಿಕ ಮಳೆ ಆಗಲಿದೆ.












Click it and Unblock the Notifications