Rain Alert: ಕರಾವಳಿ ಸೇರಿದಂತೆ ಕರ್ನಾಟಕದ ಈ ಪ್ರದೇಶಗಳಲ್ಲಿ ಸುರಿಯಲಿದೆ ಮಳೆ- ವರದಿ, ವಿವರ
ಬೆಂಗಳೂರು, ಆಗಸ್ಟ್ 25: ಕರಾವಳಿ ಸೇರಿದಂತೆ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಮಳೆಯಾಗಲಿದೆ. ಮುಂದಿನ 24 ಗಂಟೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕರಾವಳಿ ಜಿಲ್ಲೆಗಳಲ್ಲಿ ವಿಶೇಷವಾಗಿ ಉಡುಪಿ ಮತ್ತು ಉತ್ತರ ಕನ್ನಡ ಇಂದು ಬೆಳಗ್ಗಿನಿಂದಲೇ ಪ್ರತ್ಯೇಕವಾದ ಹಗುರದಿಂದ ಸಾಧಾರಣ ಮಳೆಯಾಗಿದೆ. ಮುಂದಿನ 24 ಗಂಟೆಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಸ್ವಲ್ಪ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಮುನ್ಸೂಚನೆ ಇದೆ.

ಕರ್ನಾಟಕದ ಉತ್ತರ ಒಳನಾಡಿನಲ್ಲಿ ಬರುವ ಜಿಲ್ಲೆಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಧಾರವಾಡ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಗದಗ, ಯಾದಗಿರಿ, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳು ಹೆಚ್ಚುವೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕರಾವಳಿ ಕರ್ನಾಟಕ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಚದುರಿದ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ.
ಈ ಆಗಸ್ಟ್‌ನಲ್ಲಿ ಇಡೀ ರಾಜ್ಯದಲ್ಲಿ ಮಳೆಯ ಕೊರತೆಯಾಗಿದೆ. ಸೆಪ್ಟೆಂಬರ್ ಮುನ್ಸೂಚನೆಯು ಉತ್ತಮವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಆಗಸ್ಟ್‌ನಲ್ಲಿ ಉತ್ತಮ ಮಳೆ ಬೀಳದ ಕಾರಣ ರಾಜ್ಯದ ಕೆಲ ತಾಲ್ಲೂಕು ಹಾಗೂ ಜಿಲ್ಲೆಗಳನ್ನು ಬರಗಾಲ ಪೀಡಿತವೆಂದು ಘೋಷಿಸಲು ವಿಪಕ್ಷಗಳ ನಾಯಕರು ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು, 'ರಾಜ್ಯದ 120ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, ಬಹುತೇಕ ಅಣೆಕಟ್ಟುಗಳು ಬರಿದಾಗಿ ನಮ್ಮ ರೈತ ಸಮುದಾಯ ಒಣ ಬೇಸಾಯವನ್ನೂ ಮಾಡಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಇನ್ನು ಕಾಲಹರಣ ಮಾಡದೆ, ಕೂಡಲೇ ಬರಪೀಡಿತ ಪ್ರದೇಶಗಳನ್ನು ಘೋಷಿಸಿ, ರೈತರಿಗೆ ಪರಿಹಾರ ನೀಡಬೇಕು, ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ' ಎಂದು ಹೇಳಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ರೆಡ್ ಅಲರ್ಟ್
ಹಿಮಾಚಲ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಇದು ಭೂಕುಸಿತವನ್ನು ಉಂಟುಮಾಡುತ್ತಿದೆ. ನಿರಂತರ ಮಳೆಯಿಂದಾಗಿ ಕುಲು ಜಿಲ್ಲೆಯ ಅನ್ನಿ ಎಂಬಲ್ಲಿ ಕಟ್ಟಡಗಳು ಕುಸಿದು ನಾಲ್ಕು ಹೆದ್ದಾರಿಗಳು ಬಂದ್ ಆಗಿವೆ.

ಮುಂದಿನ ಕೆಲ ಗಂಟೆಗಳಲ್ಲಿ, ಹಿಮಾಚಲ ಪ್ರದೇಶದ ಆರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಕಂಗ್ರಾ, ಕುಲು, ಮಂಡಿ, ಶಿಮ್ಲಾ, ಸೋಲನ್ ಮತ್ತು ಸಿರ್ಮೌರ್ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ.
'ಹಮೀರ್‌ಪುರ ಮತ್ತು ಬಿಲಾಸ್‌ಪುರ್‌ಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ' ಎಂದು ಹವಾಮಾನ ಇಲಾಖೆಯ ಶಿಮ್ಲಾ ಕೇಂದ್ರದ ನಿರ್ದೇಶಕ ಸುರೇಂದರ್ ಪಾಲ್ ಹೇಳಿದ್ದಾರೆ.
ಬುಧವಾರದಿಂದ ರಾಜ್ಯದಲ್ಲಿ ವ್ಯಾಪಕ ಮಳೆಯಾಗಿದೆ. ಜೋಗಿಂದರ್‌ನಗರದಲ್ಲಿ 150ಮಿಮೀ ಮಳೆ ದಾಖಲಾಗಿದೆ. ಪಾಲಂಪೂರ್‌ನಲ್ಲಿ 136.8 ಮಿಮೀ, ನಹಾನ್ 92.7 ಮಿಮೀ, ಶಿಮ್ಲಾ 79 ಮಿಮೀ, ಧರ್ಮಶಾಲಾ 70.2 ಮಿಮೀ, ಪಾಂಡೋಹ್ 70 ಮಿಮೀ, ಸೋಲನ್ 60.4 ಮಿಮೀ, ಮಂಡಿ 57.6 ಮಿಮೀ, 57.5 ಮಿಮೀ, 57.5 ಮಿಮೀ, 40.4 ಮಿಮೀ ಮಳೆಯಾಗಿದೆ.
ಶಿಮ್ಲಾದ ಶಿವ ಮಂದಿರದಲ್ಲಿ ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಇಲ್ಲಿಯವರೆಗೆ, ಶಿಮ್ಲಾದ ಮೂರು ಪ್ರಮುಖ ಭೂಕುಸಿತಗಳಿಂದ 25 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಮ್ಮರ್ ಹಿಲ್‌ನಲ್ಲಿ 18, ಫಾಗ್ಲಿಯಲ್ಲಿ 5 ಮತ್ತು ಕೃಷ್ಣನಗರದಲ್ಲಿ 2 ಶವಗಳನ್ನು ಹೊರತೆಗೆಯಲಾಗಿದೆ ಎಂದು ಶಿಮ್ಲಾ ಪೊಲೀಸ್ ಅಧಿಕಾರಿಗ ಸಂಜೀವ್ ಕುಮಾರ್ ಗಾಂಧಿ ಮಾಹಿತಿ ನೀಡಿದ್ದಾರೆ.












Click it and Unblock the Notifications