Rain Alert: ರಾಜ್ಯದ ಈ 15 ಜಿಲ್ಲೆಗಳಲ್ಲಿ ಇನ್ನೆರಡು ದಿನ ವ್ಯಾಪಕ ಮಳೆ
ರಾಜ್ಯದಲ್ಲಿ ಹಿಂಗಾರು ಚುರುಕಾಗಿದ್ದು ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಗುರುವಾರ ಮತ್ತು ಶುಕ್ರವಾರ ಕೂಡ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುಡುಗು- ಮಿಂಚು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.
ಸೋಮವಾರದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಬುಧವಾರ ಕೂಡ ಬೆಂಗಳೂರು ಸೇರಿದಂತೆ ವ್ಯಾಪಕ ಮಳೆಯಾಗಿದೆ. ಹಲವು ಕಡೆಗಳಲ್ಲಿ ಭಾರಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.

ಗುರುವಾರ ಮತ್ತು ಶುಕ್ರವಾರ ರಾಜ್ಯ 15ಕ್ಕೂ ಹೆಚ್ಚು ಜಿಲ್ಲೆಗಳಿಗೆ ಭಾರಿ ಮಳೆ ಮುನ್ಸೂಚನೆ ಇದೆ. ಉತ್ತರ ಕನ್ನಡ ಜಿಲ್ಲೆ, ಹಾಸನ, ಕೊಡಗು, ಕೋಲಾರ, ಚಿಕ್ಕಮಗಳೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಶಿವಮೊಗ್ಗ, ಉತ್ತರ ಒಳನಾಡಿನ ಧಾರವಾಡ, ಹಾವೇರಿ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು ರಸ್ತೆಗಳು ಜಲಾವೃತವಾಗಿದ್ದವು, ಬುಧವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಜಿಲ್ಲೆಯ ಕಡೂರು ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನೀರು ತುಂಬಿಕೊಂಡ ಪರಿಣಾಮ ಶಿವಮೊಗ್ಗ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಪರದಾಡುವಂತಾಯಿತು. ಚಿಕ್ಕಮಗಳೂರು ನಗರ, ಕಡೂರು, ಮೂಡಿಗೆರೆ, ಶೃಂಗೇರಿ ಭಾಗದಲ್ಲಿ ವ್ಯಾಪಕ ಮಳೆ ಸುರಿದಿದೆ.
ಬೆಂಗಳೂರಿನಲ್ಲಿ ಕೂಡ ಭಾರಿ ಮಳೆ
ಬೆಂಗಳೂರು ನಗರದಲ್ಲಿ ಕೂಡ ಬುಧವಾರ ಸಂಜೆ ವ್ಯಾಪಕ ಮಳೆಯಾಗಿದೆ. ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿರುವ ಕಾರಣ, ಹಲವು ರಸ್ತೆಗಳು ಜಲಾವೃತವಾಗಿದ್ದು, ಬಡಾವಣೆಗಳಿಗೆ ನೀರು ನುಗ್ಗಿದೆ. ಹೆಬ್ಬಾಳ ಫ್ಲೈ ಓವರ್ ಬಳಿ ರಸ್ತೆಯಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡಿದರು.
ಸಹಕಾರ ನಗರದ ಸಿಟಿ ಮಾರ್ಕೆಟ್ ಹಿಂಭಾಗ ಇರುವ ಜೆ ಬ್ಲಾಕ್ ರಸ್ತೆ ಮೇಲೆ ಸುಮಾರು ನಾಲ್ಕು ಅಡಿ ನೀರು ನಿಂತು ಭಾರಿ ಸಮಸ್ಯೆ ಉಂಟಾಗಿತ್ತು. ಮನೆಗಳು, ಅಂಗಡಿಗಳಿಗೆ ನೀರು ನುಗ್ಗಿದ್ದು ಸಾಕಷ್ಟು ನಷ್ಟ ಸಂಭವಿಸಿದೆ.
ಗುರುವಾರ ಕೂಡ ನಗರದಲ್ಲಿ ಬೆಳಗ್ಗೆಯೇ ಮೋಡ ಕವಿದ ವಾತಾವರಣ ಇದ್ದು ಸಂಜೆ ವೇಳೆಗ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ತುಮಕೂರು, ಕೋಲಾರ, ಉಡುಪಿ, ಮೈಸೂರು, ಮಡಿಕೇರಿ, ದಾವಣಗೆರೆ, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ, ಹಾಸನ, ವಿಜಯಪುರ, ಬೆಳಗಾವಿ, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬುಧವಾರ ಚದುರಿದಂತೆ ಉತ್ತಮ ಮಳೆಯಾಗಿದೆ.












Click it and Unblock the Notifications