Karnataka Rain: ರಾಜ್ಯಕ್ಕೆ ವರುಣನ ಕೃಪೆ; ಹಲವೆಡೆ ಮಿಂಚು-ಗುಡುಗು ಸಹಿತ ಮಳೆ
ಈ ಬಾರಿ ಯುಗಾದಿ ರಾಜ್ಯಕ್ಕೆ ಉತ್ತಮ ಮಳೆ ತಂದಿದೆ. ಹಬ್ಬದ ದಿನದಿಂದ ಹಲವು ಜಿಲ್ಲೆಗಳಲ್ಲಿ ಶುರುವಾದ ಮಳೆ ಗುರುವಾರವೂ ಮುಂದುವರೆದಿದೆ, ಗುರುವಾರ ಕೂಡ ಉತ್ತರ ಒಳನಾಡಿನ ಭಾಗದಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಿದೆ.
ಬಿಸಿಲಿನಿಂದ ತತ್ತರಿಸಿದ್ದ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು ಜನರ ಖುಷಿ ಹೆಚ್ಚಿಸಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಾವಿನಹಳ್ಳಿಯಲ್ಲಿ ಸಿಡಿಲು ಬಡಿದ ಪರಿಣಾಮ 16 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.

ಕಲಬುರಗಿ ಜಿಲ್ಲೆಯಲ್ಲಿ ಕೂಡ ಅತ್ಯುತ್ತಮ ಮಳೆಯಾಗಿದೆ. ರಾಜ್ಯದಲ್ಲೇ ಅತಿ ಹೆಚ್ಚು ತಾಪಮಾನದಿಂದ ಹೈರಾಣಾಗಿದ್ದ ಕಲಬುರಗಿಯಲ್ಲಿ ಮಳೆಯಾಗಿರುವುದು ವಾತಾವರಣವನ್ನು ತಂಪಾಗಿಸಿದೆ.
First rain in Shivamogga this year#karnatakaRains@Bnglrweatherman pic.twitter.com/1Uidiv9zA1
— ChandanGowda (@ChandanGowda133) April 11, 2024
ಮಲೆನಾಡು ಶಿವಮೊಗ್ಗ ನಗರದಲ್ಲಿ ವರ್ಷದ ಮೊದಲ ಮಳೆಯಾಗಿದೆ. ಗದಗ, ಬೆಳಗಾವಿ ಜಿಲ್ಲೆಗಳಲ್ಲಿ ಕೂಡ ಭಾರಿ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಮತ್ತು ಕಳಸದಲ್ಲಿ ಕೂಡ ಮಳೆಯಾಗಿದೆ. ಬಾಗಲಕೋಟೆಯ ಜಮಖಂಡಿ ನಗರದಲ್ಲಿ ವರ್ಷಧಾರೆಯಾಗಿದೆ.
Raining 🌧️ in Jamakhandi town of Bagalkote 😍😍
— Naveen Reddy (@navin_ankampali) April 11, 2024
Credits - Kallappa pic.twitter.com/rS3ZghsLjw
ಬೀದರ್ ಜಿಲ್ಲೆ ಮತ್ತು ಮಹಾರಾಷ್ಟ್ರ ಗಡಿ ಭಾಗದಲ್ಲಿ ಗುರುವಾರ ಸಂಜೆ ಉತ್ತಮ ಮಳೆಯಾಗಿರುವುದಾಗಿ ವರದಿಯಾಗಿದೆ. ಕಳೆದ ಮೂರು ದಿನಗಳಿಂದ ಕೂಡ ಉತ್ತರ ಒಳನಾಡಿನ ಭಾಗಗಳಲ್ಲಿ ಮಳೆಯಾಗುತ್ತಿರುವುದು ಯುಗಾದಿ ಸಂಭ್ರಮವನ್ನು ಹೆಚ್ಚಿಸಿದೆ.
ಗುರುವಾರ ರಾತ್ರಿ ಬೆಳಗಾವಿ, ಬೀದರ್, ವಿಜಯಪುರ, ಧಾರವಾಡ, ಗದಗ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಮೇಲ್ಮೈ ಗಾಳಿಯೊಂದಿಗೆ ಲಘುವಾದ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ
ಏಪ್ರಿಲ್ 15ರವರೆಗೆ ಮಳೆ
ಏಪ್ರಿಲ್ 15ರವರೆಗೆ ರಾಜ್ಯದ ಹಲವು ಕಡೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ. ಏಪ್ರಿಲ್ 10ರಿಂದ 15ರವರೆಗೆ ಮಳೆಯಾಗುತ್ತದೆ ಎಂದು ಸೂಚನೆ ನೀಡಿತ್ತು, ಅದಕ್ಕೆ ತಕ್ಕಂತೆ ಯುಗಾದಿ ದಿನದಿಂದಲೇ ರಾಜ್ಯದಲ್ಲಿ ಚದುರಿದಂತೆ ಮಳೆಯಾಗುತ್ತಿದೆ.
ಏಪ್ರಿಲ್ 13 ಮತ್ತು 14 ರಂದು ರಾಜ್ಯಾದ್ಯಂತ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಇನ್ನೂ ಮೂರು ದಿನ ಉತ್ತಮ ಮಳೆಯನ್ನು ನಿರೀಕ್ಷಿಸಬಹುದು.












Click it and Unblock the Notifications