ವಲಸೆ ಕಾರ್ಮಿಕರ ಕೊರತೆ; ರೈಲ್ವೆ ಯೋಜನೆಗಳು ವಿಳಂಬ
ಬೆಂಗಳೂರು, ಆಗಸ್ಟ್ 24: ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಕರ್ನಾಟಕವನ್ನು ಬಿಟ್ಟು ಹೋದ ವಲಸೆ ಕಾರ್ಮಿಕರು ಇನ್ನೂ ವಾಪಸ್ ಆಗುತ್ತಿಲ್ಲ. ಇದರಿಂದಾಗಿ ರೈಲ್ವೆ ಸೇರಿದಂತೆ ವಿವಿಧ ವಲಯಗಳಲ್ಲಿ ಕಾರ್ಮಿಕರ ಕೊರತೆ ಎದುರಾಗಿದೆ.
Recommended Video
ಬೆಂಗಳೂರು ನಗರ ಕರ್ನಾಟಕದಲ್ಲಿಯೇ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 1,07,875ಕ್ಕೆ ಏರಿಕೆಯಾಗಿದೆ.
ಇದರಿಂದಾಗಿ ಬೆಂಗಳೂರು ನಗರಕ್ಕೆ ವಲಸೆ ಕಾರ್ಮಿಕರು ಇನ್ನೂ ವಾಪಸ್ ಆಗುತ್ತಿಲ್ಲ. ರೈಲ್ವೆಯ ಹಲವು ಯೋಜನೆಗಳು ಉತ್ತರ ಮತ್ತು ಈಶಾನ್ಯ ರಾಜ್ಯಗಳ ಕಾರ್ಮಿಕರ ಕೊರತೆಯಿಂದಾಗಿ ವಿಳಂಬವಾಗುತ್ತಿವೆ.

ಹಲವು ರೈಲ್ವೆ ಯೋಜನೆಗಳು ಅದರಲ್ಲಿಯೂ ಜೋಡಿ ಹಳಿ ಕಾಮಗಾರಿಗಳು ಆರು ತಿಂಗಳು ವಿಳಂಬವಾಗಬಹುದು ಎಂದು ಅಂದಾಜಿಸಲಾಗಿದೆ. ಶ್ರಮಿಕ್ ರೈಲಿನ ಮೂಲಕ ತವರು ರಾಜ್ಯಕ್ಕೆ ಹೋದ ವಲಸೆ ಕಾರ್ಮಿಕರು ಅಲ್ಲಿಯೇ ಕೆಲಸ ಹುಡುಕುತ್ತಿದ್ದಾರೆ.
ಯೋಜನೆಯ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ಕಾರ್ಮಿಕರನ್ನು ಸಂಪರ್ಕಸಿ ವಾಪಸ್ ಕರೆತರಲು ಪ್ರಯತ್ನ ನಡೆಸಿದ್ದಾರೆ. ಆದರೆ ಕಾರ್ಮಿಕರು ವಾಪಸ್ ಬರಲು ನಿರಾಕರಿಸುತ್ತಿದ್ದಾರೆ. ಟ್ರಾಕ್ ನಿರ್ಮಾಣ ಸೇರಿದಂತೆ ಕೆಲವು ಕೆಲಸಗಳಲ್ಲಿ ವಲಸೆ ಕಾರ್ಮಿಕರು ಕೌಶಲ್ಯತೆ ಹೊಂದಿದ್ದು, ಅವರು ವಾಪಸ್ ಬಂದರೆ ಕೆಲಸ ವೇಗವಾಗಿ ಸಾಗಲಿದೆ.
ಬೈಯಪ್ಪನಹಳ್ಳಿ ಕೋಚಿಂಗ್ ಟರ್ಮಿನಲ್, ಹುಬ್ಬಳ್ಳಿ ನಿಲ್ದಾಣ ಕಾಮಗಾರಿ, ಹುಬ್ಬಳ್ಳಿ-ಚಿಕ್ಕಜಾಜೂರು ಜೋಡಿ ಹಳಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ತೊಂದರೆ ಉಂಟಾಗಿದೆ. ಕಾರ್ಮಿಕರು ವಾಪಸ್ ಬಂದರೆ ಕಾಮಗಾರಿ ವೇಗ ಪಡೆದುಕೊಳ್ಳಲಿದೆ, ಇಲ್ಲವಾದಲ್ಲ ನಿಗದಿತ ಗುರಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ.












Click it and Unblock the Notifications