ಪ್ರಧಾನಿ ಹುದ್ದೆಗೇರಲು ನಾನು ಸಿದ್ಧ ಎಂದ ರಾಹುಲ್ ಗಾಂಧಿ
ಬೆಂಗಳೂರು, ಮೇ 8: ಒಂದೊಮ್ಮೆ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ತಾವು ಪ್ರಧಾನಿ ಹುದ್ದೆ ವಹಿಸಿಕೊಳ್ಳಲು ಸಿದ್ಧ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮುಂದಿನ ಪ್ರಧಾನ ಮಂತ್ರಿಯಾಗಲು ನೀವು ಸಿದ್ದವಿದ್ದೀರಾ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. "ಕಾಂಗ್ರೆಸ್ ಚುನಾವಣೆಯಲ್ಲಿ ಯಾವ ರೀತಿಯ ಫಲಿತಾಂಶವನ್ನು ಪಡೆಯಲಿದೆ ಎನ್ನುವುದರ ಮೇಲೆ ಇದು ಅವಲಂಬಿತವಾಗಿದೆ. ಅಂದರೆ, ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ಹೌದು ನಾನು ಸಿದ್ದವಾಗಿದ್ದೇನೆ," ಎಂದರು.
ಪ್ರಧಾನಿ ನರೇಂದ್ರ ಮೋದಿ ಮುಂದಿನ ಪ್ರಧಾನ ಮಂತ್ರಿಯಾಗಿರುವುದಿಲ್ಲ ಎಂಬ ಭರವಸೆ ನನಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

"ಒಂದೊಮ್ಮೆ ಕಾಂಗ್ರೆಸ್ ಪಕ್ಷ ಉಳಿದ ಪಕ್ಷಗಳ ಜೊತೆಗಿನ ಮೈತ್ರಿಗೆ ವೇದಿಕೆಯಾಗಿದ್ದೇ ಆದಲ್ಲಿ, ಬಿಜೆಪಿಗೆ ಚುನಾವಣೆಯಲ್ಲಿ ಗೆಲ್ಲುವ ಅವಕಾಶವೇ ಇಲ್ಲ," ಎಂದು ಅವರು ಇದೇ ವೇಳೆ ವಿಶ್ಲೇಷಿಸಿದರು.
"ಮುಂದಿನ ಸರಕಾರವನ್ನು ಬಿಜೆಪಿ ರಚಿಸುವ ಸಾಧ್ಯತೆಗಳೇ ಇಲ್ಲ. ಎರಡನೆಯದಾಗಿ ಮೋದಿ ಮುಂದಿನ ಪ್ರಧಾನಿಯಾಗುವ ಸಾಧ್ಯತೆಗಳು ಅಸಾಧ್ಯವಾಗಿವೆ," ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದರು.
ವಿಪಕ್ಷಗಳ ಒಗ್ಗಟ್ಟಿನಿಂದ ಬಿಜೆಪಿ ಅಧಿಕಾರದಲ್ಲಿರಲು ಸಾಧ್ಯವಾಗುವುದಿಲ್ಲ ಎಂದ ರಾಹುಲ್ ಗಾಂಧಿ, ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ವಿಧಾನಸಭೆ ಚುನಾವಣೆಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.











Click it and Unblock the Notifications