ಏ 9 ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ 'ಸತ್ಯಮೇವ ಜಯತೇ' ರ‍್ಯಾಲಿ: ಮೋದಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಪ್ಲಾನ್
ಬೆಂಗಳೂರು, ಮಾರ್ಚ್ 01: ಏಪ್ರಿಲ್ 5 ರಂದು ಕೋಲಾರದಲ್ಲಿ ನಡೆಯಬೇಕಿದ್ದ ರಾಹುಲ್ ಗಾಂಧಿಯವರ 'ಸತ್ಯಮೇವ ಜಯತೆ' ರ‍್ಯಾಲಿಯನ್ನು ಏಪ್ರಿಲ್ 9ಕ್ಕೆ ಮುಂದೂಡಲಾಗಿದೆ. ಇದೇ ದಿನದಂದು ಮೈಸೂರಿನಲ್ಲಿ ನಡೆಯಲಿರುವ 'ಪ್ರಾಜೆಕ್ಟ್ ಟೈಗರ್' ಸುವರ್ಣ ಮಹೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್‌ನ ಈ ನಡೆಯು ರಾಜ್ಯವಷ್ಟೇ ಅಲ್ಲದೇ ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕೋಲಾರದಲ್ಲಿ ಮಾಡಿದ ಭಾಷಣಕ್ಕೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಕೋಲಾರದಿಂದ ಸಂವಿಧಾನ ಉಳಿಸುವ ಹೋರಾಟಕ್ಕೆ ಪಕ್ಷ ಮುಂದಾಗಿದೆ ಎಂದು ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೈಸೂರಿನಲ್ಲಿ ಪ್ರಧಾನಿ ಮೋದಿಯವರ ಗೋಲ್ಡನ್ ಜುಬಿಲಿ 'ಪ್ರಾಜೆಕ್ಟ್ ಟೈಗರ್' ಆಚರಣೆ ಕಾರ್ಯಕ್ರಮಕ್ಕೆ ಟಕ್ಕರ್ ನೀಡಲು ಕೋಲಾರದಲ್ಲಿ 'ಸತ್ಯಮೇವ ಜಯತೆ' ಕಾರ್ಯಕ್ರಮದ ದಿನಾಂಕವನ್ನು ಮುಂದೂಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
'ಸತ್ಯಮೇವ ಜಯತೆ ಎಂಬ ಪದವು ನಾಲ್ಕು ಸಿಂಹಗಳ ರಾಷ್ಟ್ರೀಯ ಲಾಂಛನದ ಕೆಳಗೆ ಘೋಷಣೆಯಾಗಿದೆ. ಆದ್ದರಿಂದ, ಪ್ರಾಜೆಕ್ಟ್ ಟೈಗರ್ ವಿರುದ್ಧ ನಾಲ್ಕು ಸಿಂಹಗಳ ಶಕ್ತಿಯಂತೆಯೇ ಸತ್ಯದ ಶಕ್ತಿಯನ್ನು ನಾವು ನೋಡುತ್ತೇವೆ' ಎಂದು ಕಾಂಗ್ರೆಸ್ ಹಿರಿಯ ಕಾರ್ಯಕಾರಿ ಸಮಿತಿ ಸದಸ್ಯರೊಬ್ಬರು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಕೋಲಾರದಲ್ಲಿ ನಡೆದಿದ್ದ 2019 ರ ಚುನಾವಣಾ ಪ್ರಚಾರದ ಸಮಯದಲ್ಲಿ ಮೋದಿ ಉಪನಾಮದ ಬಗ್ಗೆ ಟೀಕೆಯನ್ನು ಮಾಡಿದ್ದರು. ವಂಚಕರಾದ ನೀರವ್ ಮೋದಿ ಹಾಗೂ ಲಲಿತ್ ಮೋದಿ ಅವರನ್ನು ಉಲ್ಲೇಖಿಸಿದ್ದರು. ಆ ನಂತರ ಮೋದಿ ಎಂಬ ಉಪನಾಮೇ ಹೊಂದಿದವರೇ ಏಕೆ ಕಳ್ಳರಾಗಿರುತ್ತಾರೆ ಎಂದು ಪ್ರಶ್ನಿಸಿದ್ದರು.

ಸತ್ಯಮೇವ ಜಯತೇ ಕಾರ್ಯಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಕಾಂಗ್ರೆಸ್ ನಾಯಕರು ಇಂದು ಸಭೆಯನ್ನು ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕವು, 'ಏಪ್ರಿಲ್ 9 ರಂದು ಕೋಲಾರದಲ್ಲಿ ನಡೆಯುವ 'ಸತ್ಯ ಮೇವ ಜಯತೇ' ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್, ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್, ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು' ಎಂದು ತಿಳಿಸಿದೆ. ಈ ಟ್ವೀಟ್ ಜೊತೆ ಫೋಟೊಗಳನ್ನೂ ಹಂಚಿಕೊಂಡಿದೆ.
ಕರ್ನಾಟಕದಲ್ಲಿ ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೂರು ದಿನಗಳ ನಂತರ ಮತ ಎಣಿಕೆ ನಡೆಯಲಿದೆ. 2018 ರ ವಿಧಾನಸಭಾ ಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷವು 224 ಸದಸ್ಯರ ವಿಧಾನಸಭೆಯಲ್ಲಿ 104 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್ 80 ಸ್ಥಾನಗಳನ್ನು ಗೆದ್ದಿತ್ತು ಮತ್ತು ಜನತಾ ದಳ (ಜಾತ್ಯತೀತ) 37 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.

ಕರ್ನಾಟಕ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ವಿರೋಧ ಪಕ್ಷದ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯನವರು ಮೈಸೂರು ಜಿಲ್ಲೆಯ ವರುಣಾದಿಂದ ಸ್ಪರ್ಧಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕನಕಪುರದಿಂದ ಕಣಕ್ಕಿಳಿಯಲಿದ್ದಾರೆ. ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಅವರು ಕೊರಟಗೆರೆಯಿಂದ ಕಣಕ್ಕಿಳಿಯಲಿದ್ದಾರೆ. ಯುವ ಮುಖಂಡ ಪ್ರಿಯಾಂಕ್ ಖರ್ಗೆ ಅವರು ಚಿತ್ತಾಪುರದಿಂದ ಸ್ಪರ್ಧಿಸಲಿದ್ದಾರೆ. ಜೆಡಿಎಸ್ ಸಹ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಬಿಜೆಪಿ ಮುಂದಿನ ವಾರದಲ್ಲಿ ಅಭ್ಯರ್ಥಗಳ ಪಟ್ಟಿಯನ್ನು ಪ್ರಕಟಿಸಲಿದೆ.












Click it and Unblock the Notifications