ಕರ್ನಾಟಕ ಸಚಿವರ ಖಾತೆಗಳಲ್ಲಿ ಬದಲಾವಣೆ?
ಬೆಂಗಳೂರು, ಮೇ 8 : ಸಿಎಂ ಸಿದ್ದರಾಮಯ್ಯ ಸಂಪುಟದ ಸಚಿವರಿಗೆ ಹೊಸ ಪರೀಕ್ಷೆ ಎದುರಾಗಿದೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಕೆಲವು ಸಚಿವರ ಖಾತೆಯಲ್ಲಿ ಬದಲಾವಣೆಯಾಗಲಿದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಹಬ್ಬಿವೆ. ಸಚಿವರ ಕಾರ್ಯ ವೈಖರಿ ಕುರಿತು ರಾಹುಲ್ ಗಾಂಧಿಗೆ ತಂಡವೊಂದು ವರದಿ ನೀಡಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯದ ಸಚಿವರ ಕಾರ್ಯ ವೈಖರಿ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ಅದರ ಅನ್ವಯ ಅವರ ಕೆಲವು ಸಚಿವರ ಖಾತೆಗಳಲ್ಲಿ ಬದಲಾವಣೆ ಮಾಡಲು ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ. ಎಲ್ಲಾ ಸಚಿವರ ಕುರಿತು ವರದಿಯನ್ನು ನೀಡಲು ರಾಹುಲ್ ಗಾಂಧಿ ತಂಡವೊಂದನ್ನು ರಾಜ್ಯಕ್ಕೆ ಕಳುಹಿಸಿಕೊಟ್ಟಿದ್ದರು.

ಈ ತಂಡ ಸಚಿವರು ಒಂದು ವರ್ಷದ ಅವಧಿಯಲ್ಲಿ ಹೇಗೆ ಕಾರ್ಯ ನಿರ್ವಹಿಸಿದ್ದಾರೆ?, ತಮ್ಮ ಇಲಾಖೆಯ ಸಮಸ್ಯೆಗಳನ್ನು ಹೇಗೆ ಬಗೆಹರಿಸಿದ್ದಾರೆ, ಜನರು ಸಚಿವರ ಬಗ್ಗೆ ಏನು ಹೇಳುತ್ತಾರೆ? ಮುಂತಾದ ವಿಚಾರಗಳ ಕುರಿತು ಸಮಗ್ರ ವರದಿ ತಯಾರಿಸಿ ರಾಹುಲ್ ಗಾಂಧಿ ಅವರ ಕೈ ನೀಡಿದೆ. ಇದರ ಅನ್ವಯ ಸಚಿವರ ಖಾತೆಗಳಲ್ಲಿ ಬದಲಾವಣೆ ಮಾಡಲು ಚಿಂತನೆ ನಡೆದಿದೆ. [ಸಚಿವರ ಟೆಸ್ಟ್ : ಸಿದ್ದು, ಪರಮೇಶ್ವರ್ ಗುದ್ದಾಟ]
ಕೆಲವು ತಿಂಗಳ ಹಿಂದೆ ಸಚಿವರ ಮೌಲ್ಯಮಾಪನ ಮಾಡಬೇಕೆಂಬ ಮಾತುಗಳು ಕೇಳಿಬಂದಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ನಡುವಿನ ಗುದ್ದಾಟದಿಂದಾಗಿ ಈ ಮೌಲ್ಯಮಾಪನ ಸ್ಥಗಿತಗೊಂಡಿತ್ತು. ಸದ್ಯ ಸ್ವತಃ ರಾಹುಲ್ ಗಾಂಧಿ ತಂಡವೊಂದನ್ನು ಕಳುಹಿಸಿ ವರದಿ ತರಿಸಿಕೊಂಡಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ರಾಹುಲ್ ಗಾಂಧಿ ತಂಡ ನೀಡಿರುವ ವರದಿ ಬಗ್ಗೆ ಪರಿಶೀಲನೆ ನಡೆಸಲಿದ್ದು, ಸರಿಯಾಗಿ ಕೆಲಸ ಮಾಡದ ಸಚಿವರ ಖಾತೆಯನ್ನು ಬದಲಾವಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಪ್ರಮುಖವಾಗಿ 15 ಸಚಿವರ ಬಗ್ಗೆ ತಂಡ ರಾಹುಲ್ ಗಾಂಧಿಗೆ ವರದಿ ನೀಡಿದೆ.
ಯಾರ ಹೆಸರು ಶಿಫಾರಸು : ರಾಹುಲ್ ಗಾಂಧಿ ಕಳಿಸಿದ್ದ ತಂಡ ಶಾಮನೂರು ಶಿವಶಂಕರಪ್ಪ, ಆರ್.ವಿ.ದೇಶಪಾಂಡೆ, ಎಂ.ಬಿ.ಪಾಟೀಲ್, ಉಮಾಶ್ರೀ, ಎಚ್.ಸಿ. ಮಹದೇವಪ್ಪ, ಕಿಮ್ಮನೆ ರತ್ನಾಕರ್, ಶ್ರೀನಿವಾಸ್ ಪ್ರಸಾದ್, ವಿನಯಕುಮಾರ್ ಸೊರಕೆ, ಖಮರುಲ್ ಇಸ್ಲಾಂ, ಪ್ರಕಾಶ್ ಹುಕ್ಕೇರಿ, ಟಿ.ಬಿ.ಜಯಚಂದ್ರ, ಶರಣಪ್ರಕಾಶ್ ಪಾಟೀಲ, ಅಂಬರೀಶ್ ಸೇರಿದಂತೆ 15 ಸಚಿವರ ಖಾತೆಯನ್ನು ಬದಲಾವಣೆ ಮಾಡಲು ಶಿಫಾರಸು ಮಾಡಿದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ರಾಜ್ಯ ಕಾಂಗ್ರೆಸ್ ವಲಯದಲ್ಲಿ ಖಾತೆ ಬದಲಾವಣೆಯ ಬಗ್ಗೆ ಬಿಸಿ-ಬಿಸಿ ಚರ್ಚೆ ನಡೆಯುತ್ತಿದ್ದು. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಈ ಬಗ್ಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ. ಫಲಿತಾಂಶ ಪ್ರಕಟಗೊಂಡ ನಂತರ ಸಂಪುಟ ವಿಸ್ತರಣೆ, ಖಾತೆ ಬದಲಾವಣೆ ಎಂದು ಕಾಂಗ್ರೆಸ್ ಪಕ್ಷದಲ್ಲಿ ಬಿರುಸಿನ ಚಟುವಟಿಕೆ ನಡೆಯುವ ನಿರೀಕ್ಷೆ ಇದೆ.












Click it and Unblock the Notifications