ನಕಲಿ ಹಿಂದುತ್ವ ವಿಜೃಂಭಿಸುತ್ತಿದೆ ಎಂದ ರಾಹುಲ್ ಗಾಂಧಿ; ಬಿ ಎಸ್ ಯಡಿಯೂರಪ್ಪ ಹೇಳಿದ್ದೇನು?
ಬೆಂಗಳೂರು, ಸೆಪ್ಟೆಂಬರ್ 12: ರಾಹುಲ್ ಗಾಂಧಿಯವರು ವಿದೇಶಿ ನೆಲದಲ್ಲಿ ಹಿಂದುತ್ವದ ಕುರಿತು ಅವಹೇಳನಕಾರಿ ಮಾತನಾಡಿದ್ದಾರೆ. ಈ ಸಂಬಂಧ ರಾಹುಲ್ ಗಾಂಧಿಯವರು ಕ್ಷಮೆ ಕೇಳಬೇಕೆಂದು ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪಆಗ್ರಹಿಸಿದರು.
ಈ ಕುರಿತು ಮಂಗಳವಾರ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಯಡಿಯೂರಪ್ಪ ಅವರು ಮಾತನಾಡಿ, ಪಕ್ಷವನ್ನು ನಿರಂತರವಾಗಿ ಸಂಘಟನೆ ಮಾಡಬೇಕು. ಈ ನಿಟ್ಟಿನಲ್ಲಿ ಪದಾಧಿಕಾರಿಗಳು ಶ್ರಮಿಸಬೇಕು. 100 ದಿನಗಳಲ್ಲಿ ಸಿದ್ದರಾಮಯ್ಯನವರ ಸರಕಾರವು ಜನಪ್ರಿಯತೆ ಕಳಕೊಂಡಿದೆ. ಎಲ್ಲ ರಂಗಗಳಲ್ಲೂ ವಿಫಲವಾಗಿದೆ. ಸಿದ್ದರಾಮಯ್ಯನವರ ಸರಕಾರದ ಜನವಿರೋಧಿ ನೀತಿಯನ್ನು ಜನರಿಗೆ ತಿಳಿಸಬೇಕು. ಇದೇ 18ರಿಂದ ಕುರುಡುಮಲೆಯಿಂದ ಬಿಜೆಪಿಯ ರಾಜ್ಯಾದ್ಯಂತ ರಾಜಕೀಯ ಪ್ರವಾಸ ಆರಂಭವಾಗಲಿದೆ. ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ.

ಎಸ್‍ಸಿ, ಎಸ್‍ಟಿ ಸಮುದಾಯದ ಅನುದಾನವನ್ನು ದುರುಪಯೋಗ ಮಾಡಿಕೊಂಡು ಈ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಭೀಕರ ಬರಗಾಲ ಇದ್ದರೂ ಅದರ ಕಡೆಗೆ ಗಮನ ನೀಡುತ್ತಿಲ್ಲ ಎಂದು ಆಕ್ಷೇಪಿಸಿದರು. ಬರಪೀಡಿತ ಪ್ರದೇಶ ಘೋಷಣೆಗೆ ಆಗ್ರಹಿಸಿದರೆಂದು ತಿಳಿಸಿದ್ದಾರೆ.
ಇನ್ನೂ ಈ ವೇಳೆ ಸಂಸದ ಡಿ.ವಿ.ಸದಾನಂದ ಗೌಡ ಮಾತನಾಡಿ, ಪಕ್ಷದೊಳಗಿನ ಆಂತರಿಕ ಕಲಹದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭ್ರಮನಿರಸನಗೊಂಡಿದ್ದಾರೆ. ನಾನು 30 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಆಡಳಿತಕ್ಕೆ ಬಂದು 3 ತಿಂಗಳಲ್ಲಿ ಇಷ್ಟು ಜನವಿರೋಧಿ ಸರಕಾರವನ್ನು ಕರ್ನಾಟಕ ಮಾತ್ರವಲ್ಲದೆ ದೇಶದ ಯಾವುದೇ ರಾಜ್ಯದಲ್ಲಿ ನಾನು ಕಂಡಿಲ್ಲ ಎಂದರು. 'ಅಂತೂ ಇಂತೂ ಕರ್ನಾಟಕದಲ್ಲಿ ಅತಿ ಶೀಘ್ರವಾಗಿ ಅವರ ಆಂತರಿಕ ಗೊಂದಲಗಳಿಂದಲೇ ಆಡಳಿತಕ್ಕೆ ಇತಿಶ್ರೀ ಆಗಲಿದೆ ಎಂಬ ಬಲವಾದ ನಂಬಿಕೆ ನನ್ನದು ಎಂದು ಹೇಳಿದರು.
ಸಿದ್ದರಾಮಯ್ಯನವರು 5 ವರ್ಷ ಸಿಎಂ ಆಗಿ ಅನುಭವ ಇರುವವರು. ಆದರೆ, ಅವರ ಆಡಳಿತಾನುಭವ ಎಲ್ಲಿ ಹೋಗಿದೆ ಎಂದು ಗೊತ್ತಾಗುತ್ತಿಲ್ಲ ಎಂದು ತಿಳಿಸಿದರು. ಪ್ರಾಯಶಃ ಹರಿಪ್ರಸಾದ್, ಡಿ.ಕೆ.ಶಿವಕುಮಾರ್, ರಾಯರೆಡ್ಡಿ, ಇನ್ನೂ ಹಲವಾರು ಜನ ಪಾಟೀಲರು ಸಿದ್ದರಾಮಯ್ಯರ ವಿರುದ್ಧ ಕಾಲ್ಕೆರೆದು ನಿಂತು ಜಗಳವಾಡುತ್ತಿದ್ದಾರೆ. ಇದರಿಂದ ಸಿದ್ದರಾಮಯ್ಯನವರು ಭ್ರಮನಿರಸನಗೊಂಡಿದ್ದಾರೆ ಎಂದು ತಿಳಿಸಿದರು.
ಸಿದ್ದರಾಮಯ್ಯರಿಗೆ ಈ ಪರಿಸ್ಥಿತಿ ಬರಬಾರದಿತ್ತು ಎಂಬಂತಾಗಿದೆ. ಇದು ರಾಜ್ಯದ ಹಿತಾಸಕ್ತಿಗೆ ಪೂರಕವಲ್ಲ, ಒಳ್ಳೆಯ ಆಡಳಿತ ಕೊಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಪ್ರಶ್ನೆಗೆ ಉತ್ತರಿಸಿದ ಅವರು, ಉಚಿತ ಭಾಗ್ಯಗಳು ಸರಕಾರದ ಖಜಾನೆ ಲೂಟಿಗೆ ಕಾರಣವಾಗಿವೆ. ಎಸ್‍ಸಿಎಸ್‍ಟಿ ಮೀಸಲು ಹಣದಿಂದ 11 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಅಹಿಂದ ಎನ್ನುತ್ತಿದ್ದ ಸಿದ್ದರಾಮಯ್ಯರ ಸರಕಾರ ಬೇರೆಡೆಗೆ ವರ್ಗಾಯಿಸಿದೆ ಎಂದರೆ, ಅದು ಅವರ ನೀತಿಗೆ ವಿರುದ್ಧವಾದ ನಡೆ ಎಂದು ಟೀಕಿಸಿದರು.
ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರದಲ್ಲಿ ಕೇಂದ್ರ ನಾಯಕತ್ವವು ನಿರ್ಧಾರ ತೆಗೆದುಕೊಳ್ಳಲಿದೆ. ಇದರ ಕುರಿತು ನಾವೇನೂ ಮಾತನಾಡುವಂಥದ್ದಿಲ್ಲ. ಕರ್ನಾಟಕದ ವಿದ್ಯಮಾನವನ್ನು ಗಮನಿಸಿ ಕೇಂದ್ರದ ನಾಯಕರು ಲೋಖಸಭಾ ಚುನಾವಣೆಗೆ ಬೇಕಾದ ಕಾರ್ಯತಂತ್ರದ ಕುರಿತು ಆಲೋಚಿಸಿದ್ದಾರೆ. ಅದರ ಆಧಾರದಲ್ಲಿ ಅವರು ಮುಂದುವರೆಯುತ್ತಾರೆ ಎಂದರು. ಅದರ ಕುರಿತು ನಾವಿಲ್ಲಿ ಕುಳಿತು ಕಾಮೆಂಟ್ ಮಾಡುವುದು ಸರಿಯಲ್ಲ ಎಂದು ಹೇಳಿದರು.












Click it and Unblock the Notifications