ಮೀನು ಮುಟ್ಟಿ ದೇವಸ್ಥಾನ ಪ್ರವೇಶಿಸದ ರಾಹುಲ್ ಗಾಂಧಿ: ಮೂರ್ಖತನ, ಜಾಣ ನಡೆ, ಎಲೆಕ್ಷನ್ ಗಿಮಿಕ್...ಏನಿದು?
ಬೆಂಗಳೂರು, ಏಪ್ರಿಲ್. 28: ಚುನಾವಣಾ ಸಮಯದಲ್ಲಿ ಸಾಮಾಜಿಕ ಜಾಲತಾಣ ಭಾರಿ ಪ್ರಭಾವ ಬೀರುತ್ತವೆ. ಸದ್ಯಕ್ಕೆ ರಾಜ್ಯದಲ್ಲಿ ಕೈ ಪಡೆಯನ್ನು ಗೆಲ್ಲಿಸುವ ಸಾಹಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ರೆಂಡಿಂಗ್ ಟಾಪಿಕ್ ಆಗಿದ್ದಾರೆ. ಕಾರಣ ಮೀನುಗಾರ ಸಮುದಾಯದ ಮಹಿಳೆಯೊಬ್ಬರು ಉಡುಗೊರೆಯಾಗಿ ನೀಡಿದ್ದ ಮೀನನ್ನು ಮುಟ್ಟಿದ್ದಕ್ಕೆ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪ್ರವೇಶಿಸಲು ನಿರಾಕರಿಸಿದ್ದು!.
ಗುರುವಾರ ಏಪ್ರಿಲ್ 27 ರಂದು ಮೀನುಗಾರರ ಸಮಾವೇಶದ ಕೊನೆಯಲ್ಲಿ ಮಹಿಳೆಯೊಬ್ಬರು ರಾಹುಲ್ ಗಾಂಧಿಗೆ ಅಂಜಲ್ ಮೀನು ಉಡುಗೊರೆಯಾಗಿ ನೀಡಿದ್ದರು .ರಾಹುಲ್ ತುಂಬಾ ಪ್ರೀತಿಯಿಂದ ಮೀನನ್ನು ಸ್ವೀಕರಿಸಿ, ಅವರೊಂದಿಗೆ ಫೋಟೋಗೆ ಪೋಸ್ ನೀಡಿದರು. ಬಳಿಕ ಉಚ್ಚಿಲದಲ್ಲಿರುವ ಮೊಗವೀರ ಸಮುದಾಯದ ಪ್ರಮುಖ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ರಾಹುಲ್ ಭೇಟಿ ನೀಡಿದ ಸಂದರ್ಭದಲ್ಲಿ ಮೀನು ಮುಟ್ಟಿರುವ ಕಾರಣ ದೇವಸ್ಥಾನಕ್ಕೆ ಪ್ರವೇಶಿಸುವುದಿಲ್ಲ ಎಂದಿದ್ದರು.

ಈ ಘಟನೆ ಭಾರಿ ಟೀಕೆ ಮತ್ತು ಪ್ರಶಂಸೆಗಳನ್ನು ಪಡೆಯುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಲವರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ರಾಹುಲ್ ಮಾಡಿದ್ದು ಸರಿ ಎಮದರೇ, ಮತ್ತೆ ಕೆಲವರು ಮೀನುಗಾರರ ದೇವಾಸ್ಥಾನಕ್ಕೆ ಮೀನು ಮುಟ್ಟಿ ಹೋಗುವುದಿಲ್ಲ ಎಂದಿದ್ದು ಮೂರ್ಖತನ ಎಂದಿದ್ದಾರೆ. ಮತ್ತೆ ಕೆಲವರು ಇದೆಲ್ಲಾ ಚುನಾವಣಾ ಪ್ರಚಾರಕ್ಕೆ ಸರಕು ಎಂದು ಟೀಕಿಸಿದ್ದಾರೆ.
ಹಿರಿಯ ಪತ್ರಕರ್ತ ಬೆಲೈರು ಮಹಮ್ಮದ್ ಹನೀಫ್ ಹೀಗೆ ಬರೆದಿದ್ದಾರೆ. " ಕರಾವಳಿಯ ರಾಜಕೀಯವನ್ನು ರಾಹುಲ್ ಗಾಂಧಿ ಸರಿಯಾಗಿ ಅರ್ಥ ಮಾಡಿಕೊಂಡಂತಿದೆ.
1. ಭಾಷಣದ ಮಧ್ಯೆ ಮುಸ್ಲಿಮರ ಆಝಾನ್ ಕೇಳಿಸಿದಾಗ ತಮ್ಮ ಮಾತು ನಿಲ್ಲಿಸಿದರು. 2. ಕೈಯಲ್ಲಿ ಮೀನು ಹಿಡಿದ ಹಿನ್ನೆಲೆಯಲ್ಲಿ ಮೀನುಗಾರರ ಮಹಾಲಕ್ಷ್ಮಿ ದೇವಾಲಯದ ಒಳಗೆ ಪ್ರವೇಶಿಸಲು ನಿರಾಕರಿಸಿದರು.

( ಈ ಹಿಂದಿನ ಎರಡು ಘಟನೆಗಳು ನೆನಪಾದವು) 1. ಮಹಾತ್ಮಾ ಗಾಂಧೀಜಿ 1920 ರಲ್ಲಿ ಮಂಗಳೂರಿಗೆ ಭೇಟಿ ನೀಡಿದ್ದಾಗ ಟೌನ್ ಹಾಲ್ ಪಕ್ಕದ ಮೈದಾನದಲ್ಲಿ ಭಾಷಣ ಮಾಡುತ್ತಿದ್ದಾಗ ಕಚ್ಛೇ ಮೇಮನ್ ಮಸೀದಿಯ ಆಝಾನ್ ಕೇಳಿ ಭಾಷಣವನ್ನು ಸ್ವಲ್ಪ ಹೊತ್ತು ನಿಲ್ಲಿಸಿದ್ದರು. 2. 2017 ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಾಹ್ನ ನಾನ್ ವೆಜ್ ಊಟ ಮಾಡಿದ ಬಳಿಕ ಧರ್ಮಸ್ಥಳದ ದೇವಸ್ಥಾನವನ್ನು ಪ್ರವೇಶಿಸಿದ್ದರು ಎಂದಿದ್ದಾರೆ.
ಲೇಖಕಿ ಚೇತನಾ ತೀರ್ಥಹಳ್ಳಿ, "ಬಿಜೆಪಿ ಈ ದೇಶಕ್ಕೆ ಬೇಡ ಆಗಿರುವ ಕಾರಣಗಳಲ್ಲಿ ಅದರ ಬ್ರಾಹ್ಮಣ್ಯ ಮುಖ್ಯವಾದುದು. ಮೀನು - ಮಾಂಸವನ್ನು ಅಮೇಧ್ಯದಂತೆ ಕಂಡು ಮಾಂಸಾಹಾರಿಗಳು ದಾನವರು ಅನ್ನುವಂತೆ ವರ್ತಿಸಿ ಅವರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ನೋಡುವ ಬಿಜೆಪಿ ಈ ದೇಶದ ಬಹುಸಂಖ್ಯಾತರಿಗೆ ನಿತ್ಯ ಅವಮಾನ ಮಾಡುತ್ತದೆ ಅನ್ನುವುದೂ ಒಂದು ಕಾರಣ. ಈಗ ರಾಹುಲ್ ಮಾಡಿದ್ದು ಎಲೆಕ್ಷನ್ ಗಿಮಿಕ್ಕೇ ಇರಬಹುದು. ಆದರೆ ಇದು ಅತ್ಯಂತ ಚೀಪ್ ಅದ ಗಿಮಿಕ್. ನಮ್ಮ ದೇಶಕ್ಕೆ ಬೇಕಿರುವುದು ಆಡಳಿತ ಪಕ್ಷದ ಬದಲಾವಣೆ ಅಲ್ಲ, ಆಳುವವರ ಮನಸ್ಥಿತಿಯ ಬದಲಾವಣೆ. ಎಲ್ಲಾ ಒಂದೇ ಆದ್ರೆ ಯಾವನಾದರೂ/ ಳಾದರೂ ಆಳಿಕೊಳ್ಳಲಿ, ನಾವು ಹಿಟ್ಟು ಬೀಸೋದು ಇದ್ದೇ ಇದೆ" ಎಂದಿದ್ದಾರೆ.
ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ. ಮಮತಾ ಆರ್. "ತಾಯಿ ಉಚ್ಚಿಲ ಮಹಾಲಕ್ಷ್ಮಿ ದೇವಿ ಮೀನು ತಿಂದು ದೇವಸ್ಥಾನ ಪ್ರವೇಶಿಸಿದವರನ್ನೂ ಕ್ಷಮಿಸುತ್ತಾಳೆ ಮೀನು ಮುಟ್ಟಿ ಬಂದರೂ ಹರಸುತ್ತಾಳೆ.ರಾಹುಲ್ ಗಾಂಧಿ ಮೀನು ಮುಟ್ಟಿ ದೇವಾಲಯದೊಳಗೆ ಹೋಗುವುದಿಲ್ಲ ಎಂದಿರುವ ನಡೆಯಿಂದಾಗಿ ಕರಾವಳಿ ಭಾಗದ ಮಡಿವಂತರ ನಾಲ್ಕು ಓಟುಗಳು ಕಾಂಗ್ರೆಸ್ ಗೆ ಹೋದರೆ ಅಷ್ಟೇ ಸಾಕು.. ಎಲೆಕ್ಷನ್ ಟೈಮಿನಲ್ಲಿ ಜಾಣ ನಡೆ ಪ್ರದರ್ಶಿಸುವವರೇ ಜಾಣರು" ಎಂದು ಹೇಳಿದ್ದಾರೆ.
ಗ್ಲಾಡ್ಸನ್ ಅಲ್ಮೇಡಾ ಎನ್ನುವವರು "ಮೀನಿನ ವಿಷಯದಲ್ಲಿ ರಾಹುಲ್ ಗಾಂಧಿ ಹಾಗೂ ಕಾಂಗ್ರೇಸ್ಸನ್ನು ಠೀಕಿಸಲು ಒಂದು ವಿಷಯ ಮಿಸ್ ಆಯಿತಲ್ಲ ಎಂದು ಬಿಜೆಪಿ ಹಾಗೂ ಆರೆಸ್ಸಸ್ ತಲೆ ಕೆರೆದುಕೊಳ್ಳುತ್ತಿರುವಾಗ, ಅದೇ ರಾಹುಲ್ ಹಾಗೂ ಕಾಂಗ್ರೇಸ್ಸನ್ನು ಮೃದು ಹಿಂದೂತ್ವವಾದಿಗಳೆನ್ನಲು ಒಂದು ವಿಷಯ ಸಿಕ್ಕಿತಲ್ಲವೆಂದು ಅನೇಕ ಪ್ರಗತಿಪರರು, ಭಯಂಕರ ಸೆಕ್ಯುಲರ್ ಗಳು ಹಾರಾಡುತ್ತಿದ್ದಾರೆ. Heights of Hypocrisy!" ಎಂದು ಟೀಕಿಸಿದ್ದಾರೆ.
ಲೇಖಕ ವಿ.ಅರ್ ಕಾರ್ಪೆಂಟರ್, "ಅಂದು ಕಾಲ್ನಡಿಗೆಯ ಮೂಲಕ ಶ್ರೀರಂಗಪಟ್ಟಣಕ್ಕೆ ಬಂದಾಗ ಟಿಪ್ಪು ಸುಲ್ತಾನನ ಸಮಾಧಿಗೆ ಭೇಟಿ ಕೊಡಲಿಲ್ಲ...! ಇಂದು ಮೀನು ಮುಟ್ಟಿದ್ದೇನೆಂದು ದೇಗುಲಕ್ಕೆ ಹೋಗಲಿಲ್ಲ! ರಾಹುಲ್ ಗಾಂಧಿ ತಾನೂ ಕೂಡ ಒಬ್ಬ ಡರ್‌ಪೋಕ್ ಸಾಬೀತು ಮಾಡಿಕೊಂಡರು" ಎಂದು ಹೇಳಿದ್ದಾರೆ.
ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು, "ಮೀನು ಮುಟ್ಟಿರುವ ಕಾರಣಕ್ಕೆ ದೇವಸ್ಥಾನದೊಳಗೆ ಪ್ರವೇಶ ಮಾಡುವುದಿಲ್ಲ ಎನ್ನುವ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷದ ವರು ಮಾತ್ರವಲ್ಲ ನಮ್ಮ ಜಾತ್ಯತೀತ, ಪ್ರಗತಿಪರ, ಪುರೋಗಾಮಿ ಸಮುದಾಯ ಕೂಡಾ ಕೊಂಡಾಡತೊಡಗಿದೆ. ' ಬಿಜೆಪಿಯವರ ಬಾಯಿಮುಚ್ಚಿಸಿದ ಇದೊಂದು ಅದ್ಭುತ ಕಾರ್ಯತಂತ್ರ' ಎಂದೆಲ್ಲ ವ್ಯಾಖ್ಯಾನಿಸಲಾಗುತ್ತಿದೆ. ಇದು ನಮ್ಮ ಮೆದುಳಿಗೆ ಮೆತ್ತಿಕೊಂಡಿರುವ ಮಡಿ-ಮೈಲಿಗೆಯ ಮೆದು ಹಿಂದುತ್ವಕ್ಕೆ ಸಾಕ್ಷಿ. ಇದರಿಂದ ನಮ್ಮನ್ನು ನಾವೇ ಹೇಗೆ ತುಚ್ಚೀಕರಿಸಿಕೊಳ್ಳುತ್ತಿದ್ದೇವೆ, ನಮ್ಮ ಆಚಾರ-ವಿಚಾರ, ಸಂಸ್ಕೃತಿ-ಸಂಪ್ರದಾಯದ ಬಗ್ಗೆ ಎಂತಹ ಕೀಳರಿಮೆ ಬೆಳೆಸಿಕೊಂಡಿದ್ದೇವೆ ಎನ್ನುವುದು ಜಾಹೀರಾಗಿದೆ" ಎಂದಿದ್ದಾರೆ.
ಒಟ್ಟಾರೆ, ಚುನಾವಣಾ ಸಮಯದಲ್ಲಿ ರಾಹುಲ್ ಗಾಂಧಿಯವರ ಈ ನಡೆಗೆ ಪ್ರಗತಿಪರರಿಂದ ಟೀಕೆ ವ್ಯಕ್ತವಾಗಿದೆ. ಸಿದ್ದರಾಮಯ್ಯ ಅವರಿಂದ ರಾಹುಲ್ ಗಾಂಧಿ ಕಲಿಯಬೇಕಿದೆ ಎಂದು ಕೆಲವರು ಹೇಳಿದರೆ, ಬಿಜೆಪಿಗರು ಕೊಂಕು ಮಾಡಲು ಸಿಕ್ಕ ಒಂದು ಅಂಶ ತಪ್ಪಿ ಹೋಯಿತಲ್ಲ ಎಂದು ಪರಿತಪಿಸುತ್ತಿದ್ದಾರೆ ಎಂದು ಮತ್ತಷ್ಟು ಜನ ಹೇಳುತ್ತಿದ್ದಾರೆ.












Click it and Unblock the Notifications