ನವ ದೆಹಲಿಗೆ ಬರುವಂತೆ ಕಾಂಗ್ರೆಸ್ ನಾಯಕರಿಗೆ ಕರೆ!
ಬೆಂಗಳೂರು, ಫೆಬ್ರವರಿ 20; ಕರ್ನಾಟಕ ಕಾಂಗ್ರೆಸ್‌ನ ಪ್ರಮುಖ ನಾಯಕರಿಗೆ ನವದೆಹಲಿಗೆ ಬರುವಂತೆ ಪಕ್ಷದ ನಾಯಕ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಫೆಬ್ರವರಿ 25ರಂದು ದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದೆ.
2023ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ತಂತ್ರ ರೂಪಿಸಲು ಕಾಂಗ್ರೆಸ್ ಹೈಕಮಾಂಡ್ ತಂತ್ರ ರೂಪಿಸಿದೆ. ಈ ಹಿನ್ನಲೆಯಲ್ಲಿ ದೆಹಲಿಯಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತಿದೆ.
ಫೆಬ್ರವರಿ 25ರ ಸಂಜೆ 4 ಗಂಟೆಗೆ ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಸಭೆ ನಡೆಯಲಿದೆ. ಸುಮಾರು 15 ನಾಯಕರಿಗೆ ಸಭೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಸಹ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಯಾರು, ಯಾರು ಭಾಗಿ?; ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಸಭೆಗೆ ರಾಜ್ಯಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ. ಕೆ. ಹರಿಪ್ರಸಾದ್, ಕೆಪಿಸಿಸಿ ಪಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್ ಸೇರಿದಂತೆ 15 ನಾಯಕರಿಗೆ ಆಹ್ವಾನ ಬಂದಿದೆ.
ಎಐಸಿಸಿ ಪ್ರಧಾನ ಕಾರ್ಯರ್ಶಿ ಕೆ. ಸಿ. ವೇಣುಗೋಪಾಲ್ ಸಹ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಪ್ರಸ್ತುತ ವಿದ್ಯಮಾನಗಳು, ಮುಂದಿನ ಚುನಾವಣೆ ಸಿದ್ಧತೆ ಮುಂತಾದ ವಿಚಾರಗಳ ಕುರಿತು ಸಭೆಯಲ್ಲಿ ವಿವಿವರಾದ ಚರ್ಚೆ ನಡೆಯಲಿದೆ.
ಪಂಜಾಬ್, ಗೋವಾ, ಮಣಿಪುರ, ಉತ್ತರಾಖಂಡ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರು ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆ ಮೇಲೆ ಗಮನಹರಿಸಿದ್ದಾರೆ.
2033ರ ವಿಧಾನಸಭೆ ಚುನಾವಣೆಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ಎಂ. ಬಿ. ಪಾಟೀಲ್ ನೇಮಕ ಮಾಡಲಾಗಿದೆ. ಉಳಿದಂತೆ ಚುನಾವಣೆಗೆ ಯಾವುದೇ ಪದಾಧಿಕಾರಿಗಳ ನೇಮಕವಾಗಿಲ್ಲ. ಪಕ್ಷ ಚುನಾವಣೆ ಸಿದ್ಧತೆ ಆರಂಭಿಸುವ ಮೊದಲು ಪದಾಧಿಕಾರಿಗಳನ್ನು ನೇಮಿಸಿ ಜವಾಬ್ದಾರಿಗಳನ್ನು ಹಂಚಬೇಕಿದೆ.
ಸರ್ಕಾರದ ವಿರುದ್ಧ ಜಿಲ್ಲೆ, ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಹೋರಾಟಗಳನ್ನು ನಡೆಸಬೇಕಿದೆ. ಪದಾಧಿಕಾರಿಗಳ ನೇಮಕ, ರಾಜ್ಯ ಸರ್ಕಾರದ ವಿರುದ್ಧದ ಹೋರಾಟ ಮುಂತಾದ ವಿಚಾರಗಳ ಕುರಿತು ಸಭೆಯಲ್ಲಿ ವಿವರವಾದ ಚರ್ಚೆ ನಡೆಯುವ ಸಾಧ್ಯತೆ ಇದೆ.
ರಾಜ್ಯ ಕಾಂಗ್ರೆಸ್ ನಾಯಕರು ಫೆಬ್ರವರಿ 27ರಿಂದ ಮೇಕೆದಾದು ಪಾದಯಾತ್ರೆ ನಡೆಸಲಿದ್ದಾರೆ. ಇದಕ್ಕೂ ಮೊದಲು ನವದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೇಕೆದಾಟು ಪಾದಯಾತ್ರೆ ಸಮಾರೋಪ ಸಮಾರಂಭಕ್ಕೆ ಆಗಮಿಸುವಂತೆ ಹೈಕಮಾಂಡ್ ನಾಯಕರಿಗೆ ರಾಜ್ಯ ನಾಯಕರು ಆಹ್ವಾನ ನೀಡುವ ನಿರೀಕ್ಷೆ ಇದೆ.
ಈಗಾಗಲೇ ಕಾಂಗ್ರೆಸ್ ನಾಯಕರು ಸಚಿವ ಕೆ. ಎಸ್. ಈಶ್ವರಪ್ಪ ವಜಾಗೊಳಿಸಬೇಕು ಎಂದು ಆಗ್ರಹಿಸಿ ವಿಧಾನಸೌಧದಲ್ಲಿ ಗುರುವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಫೆಬ್ರವರಿ 24ರ ತನಕ ವಿಧಾನ ಮಂಡಲ ಅಧಿವೇಶನ ನಡೆಯಲಿದೆ.
ಸೋಮವಾರವೂ ಕಾಂಗ್ರೆಸ್ ನಾಯಕರು ಧರಣಿ ಮುಂದುವರೆಸಿದರೆ ವಿಧಾನಸಭೆ ಕಲಾಪವನ್ನು ಮುಂದೂಡುವ ಸಾಧ್ಯತೆ ಇದೆ. ಮಾರ್ಚ್ 4ರಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ.
2023ರ ವಿಧಾನಸಭೆ ಚುನಾವಣೆ ಬಿಜೆಪಿ, ಜೆಡಿಎಸ್ ಈಗಾಗಲೇ ಸಿದ್ಧತೆಗಳನ್ನು ನಡೆಸಿವೆ. ಜೆಡಿಎಸ್ ಮಿಷನ್ 123 ಹೆಸರಿನಲ್ಲಿ ಪಕ್ಷದ ಶಾಸಕರು, ಪದಾಧಿಕಾರಿಗಳಿಗೆ ಕಾರ್ಯಾಗಾರ ನಡೆಸಿದೆ. ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲು ತಯಾರಿ ನಡೆಸಿದೆ.
ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಮುಂದಿನ ಚುನಾವಣೆ ಹಿನ್ನಲೆ ಸರಣಿ ಸಭೆ ನಡೆಸುತ್ತಿದೆ. ವಿವಿಧ ಪಕ್ಷದ ಹಲವಾರು ನಾಯಕರು ಸಹ ಕಾಂಗ್ರೆಸ್ ಸೇರುತ್ತಿದ್ದಾರೆ.












Click it and Unblock the Notifications