ನಿಗಮ ಮಂಡಳಿ ಫೈನಲ್ ಲಿಸ್ಟ್ ರಿಜೆಕ್ಟ್ ಮಾಡಿದ್ರಾ ರಾಹುಲ್ ಗಾಂಧಿ? : ಪರಮೇಶ್ವರ್ ಹೇಳಿದಿಷ್ಟು
ಕಲಬುರಗಿ,ಡಿಸೆಂಬರ್ 27: ಲೋಕಸಭಾ ಚುನಾವಣೆ ಹಿನ್ನಲೆ ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಗೆ ತೆಗೆದುಕೊಂಡು ಹೋಗಿದ್ದ ನಿಗಮ ಮಂಡಳಿ ಅಂತಿಮ ಪಟ್ಟಿಯನ್ನ ರಾಹುಲ್ ಗಾಂಧಿ ತಿರಸ್ಕರಿಸಿದ್ದಾರೆ ಎಂಬುದಕ್ಕೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರಾಜ್ಯದ ವಿವಿಧ ನಿಗಮ ಮಂಡಳಿಗಳಿಗೆ ನೇಮಕ ಮಾಡುವಂತೆ ಕೋರಿ ಸಲ್ಲಿಸಿದ್ದ ವರದಿಯನ್ನು ರಾಹುಲ್ ಗಾಂಧಿ ತಿರಸ್ಕರಿಸಿಲ್ಲ. ಅವರೇನಿದ್ದರೂ ಶಾಸಕರು ಹಾಗೂ ಕಾರ್ಯಕರ್ತರನ್ನು ಒಳಗೊಂಡ ಲಿಸ್ಟ್ ಏಕಕಾಲಕ್ಕೆ ಕಳಿಸುವಂತೆ ಸಲಹೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಸಲಹೆಯ ಪ್ರಕಾರವೇ ಪಟ್ಟಿ ಕಳುಹಿಸಲಾಗುವುದು ಎಂದು ಗೃಹ ಸಚಿವ ಪರಮೇಶ್ವರ ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರಕಾರದಿಂದ ಸುಮಾರು 40 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯಿಂದ ನಮ್ಮ ಕೆಲಸ ಮತ್ತಷ್ಟು ಹಗುರವಾಗಿದೆ ಎಂದು ಗೃಹ ಸಚಿವ ಪರಮೇಶ್ವರ ಹೇಳಿದರು.
ನಾವು ಹೇಳುವುದಕ್ಕಿಂತ ಮೊದಲೇ ಅವರು ಎಲ್ಲವನ್ನೂ ಹೇಳಿ ನಮ್ಮ ಕೆಲಸ ಹಗುರ ಮಾಡಿದ್ದಾರೆ. ನಮಗೆ ತಪ್ಪು ಕಲ್ಪನೆ ಇತ್ತು. ನಾವೇನಿದ್ದರೂ ಕೇವಲ 4 ಸಾವಿರ ಕೋಟಿ ಅವ್ಯವಹಾರ ನಡೆದಿದೆ ಎಂದು ಭಾವಿಸಿದ್ದೆವು. ಯತ್ನಾಳರ ಪ್ರಕಾರ ಅದು 40 ಸಾವಿರ ಕೋಟಿ ರೂ. ಅನ್ನೋದು ಈಗ ಗೊತ್ತಾಗಿದೆ. ಈ ನಿಟ್ಟಿನಲ್ಲಿ ನಾವು ನಡೆಸುವ ತನಿಖೆಗೆ ಹೆಚ್ಚಿನ ಪೂರಕ ಮಾಹಿತಿ ಲಭಿಸಿದಂತಾಗಿದೆ ಎಂದು ನುಡಿದರು.

545 ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮದ ಕುರಿತು ತನಿಖೆ ನಡೆಸುತ್ತಿರುವ ಜಸ್ಟಿಸ್ ವೀರಪ್ಪನವರ ಸಮಿತಿಗೆ ಯಾರ ಮೇಲೆ ಅನುಮಾನ ಬಂದರೂ ಅವರಿಗೆ ನೋಟಿಸ್ ನೀಡುವ ಅಧಿಕಾರವಿದೆ. ಸಮಿತಿಯ ಅಧಿಕಾರವನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಚಿವ ಡಾ.ಅಶ್ವತ ನಾರಾಯಣ ಅವರಿಗೆ ಸಮಿತಿ ನೋಟಿಸ್ ನೀಡಿರುವ ಕುರಿತು ಮಾತನಾಡಿದ ಅವರು, ಅವರಿಗೆ ಸಿಕ್ಕ ಮಾಹಿತಿ ಮೇರೆಗೆ ಯಾರನ್ನು ಬೇಕಾದರೂ ತನಿಖೆಗೆ ಹಾಜರಾಗುವಂತೆ ಕರೆಯಿಸಿಕೊಳ್ಳುತ್ತಾರೆ. ತನಿಖಾ ಸಮಿತಿಗೆ ಯಾವ ಮಾಹಿತಿ ಇದೆಯೋ ನಮಗೆ ಗೊತ್ತಿಲ್ಲ. ಅವರು ಯಾರನ್ನು ಬೇಕಾದರೂ ಕರೆಯಿಸಿ ವಿಚಾರಣೆ ನಡೆಸಬಹುದು ಎಂದರು.
ಜಸ್ಟೀಸ್ ವೀರಪ್ಪನವರ ಸಮಿತಿ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸುತ್ತದೆ. ಸಮಿತಿ ಏನು ವರದಿ ನೀಡುತ್ತದೆ ಎಂಬುದನ್ನು ಈಗಲೇ ಹೇಳಲು ಆಗುವುದಿಲ್ಲ. ವರದಿ ಬಂದ ಮೇಲೆ ಕಾನೂನಿನ ಚೌಕಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಪರಿಶೀಲಿಸಲಾಗುವುದು ಎಂದರು.
ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಮಾರಿ ಸಿದ್ದ ಎಂದು ನೀಡಿರುವ ಹೇಳಿಕೆ ವಿರುದ್ಧ ಈಗಾಗಲೇ ದೂರು ದಾಖಲಿಸಲಾಗಿದೆ. ಸಾರ್ವಜನಿಕ ಬದುಕಿನಲ್ಲಿರುವವರು ಸಂಯಮದಿಂದ ಮಾತಾಡುವ ರೂಢಿ ಮಾಡಿಕೊಳ್ಳಬೇಕು. ಜನರು ನಮ್ಮನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ ಎಂಬ ಪ್ರಜ್ಞೆ ಇರಬೇಕಾಗುತ್ತದೆ ಎಂದು ಕಿವಿಮಾತು ಹೇಳಿದರು.
ಇಂಗ್ಲಿಷ್ ನಾಮಫಲಕದ ವಿರುದ್ಧ ಕರವೇ ಕಾರ್ಯಕರ್ತರು ರಾಜ್ಯಾದ್ಯಂತ ನಡೆಸುತ್ತಿರುವ ಹೋರಾಟದ ಕುರಿತು ಮಾತನಾಡಿ, ಸರಕಾರ ತನ್ನ ಎಲ್ಲ ಇಲಾಖೆಗಳಲ್ಲಿ ಕನ್ನಡದಲ್ಲೇ ವ್ಯವಹರಿಸುತ್ತಿದೆ. ನಮ್ಮ ಎಲ್ಲ ಸಚಿವರು ಮತ್ತು ಅಧಿಕಾರಿಗಳು ಕೂಡ ಕನ್ನಡದಲ್ಲೇ ವ್ಯವಹಾರ ನಡೆಸುತ್ತಿದ್ದಾರೆ. ಕೆಲವು ಸಂದರ್ಭದಲ್ಲಿ ಹೊರಗಿನಿಂದ ಬಂದವರಿಗೆ ಕನ್ನಡ ಗೊತ್ತಾಗೋದಿಲ್ಲ. ಹಾಗಾಗಿ, ಅವರಿಗೋಸ್ಕರ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆಯಬೇಕಾಗುತ್ತದೆ. ರಾಜಧಾನಿ ಮತ್ತು ನಗರ ಹಾಗೂ ಪಟ್ಟಣಗಳಲ್ಲಿ ಕನ್ನಡ-ಇಂಗ್ಲಿಷ್ ಎರಡೂ ನಾಮಫಲಕ ಹಾಕಬೇಕಾಗುತ್ತದೆ. ಹಾಗೊಂದುವೇಳೆ, ಕನ್ನಡದಲ್ಲಿಯೇ ಇರಬೇಕು ಎನ್ನುವುದಾದರೆ ನಮಗೇನೂ ತೊಂದರೆಯಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.












Click it and Unblock the Notifications