ಸಂಪುಟ ವಿಸ್ತರಣೆ : ಕರ್ನಾಟಕ ನಾಯಕರಿಗೆ ರಾಹುಲ್ ಗಾಂಧಿ ಕರೆ
ಬೆಂಗಳೂರು, ಡಿಸೆಂಬರ್ 14 : ಸಚಿವ ಸಂಪುಟ ವಿಸ್ತರಣೆಗೆ ಕರ್ನಾಟಕ ಕಾಂಗ್ರೆಸ್ ಸಿದ್ಧವಾಗುತ್ತಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೆಹಲಿಗೆ ಬರುವಂತೆ ಕರ್ನಾಟಕದ ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದಾರೆ.
ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿದ ಬಳಿಕ ರಾಹುಲ್ ಗಾಂಧಿ ಅವರು ಮುಖ್ಯಮಂತ್ರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಬ್ಯುಸಿಯಾಗಿದ್ದರು. ಈಗ ಎಲ್ಲಾ ಕೆಲಸಗಳು ಪೂರ್ಣಗೊಂಡಿದ್ದು, ರಾಜ್ಯ ನಾಯಕರ ಭೇಟಿಗೆ ಸಮಯ ನೀಡಿದ್ದಾರೆ.
ಡಿಸೆಂಬರ್ 21ರಂದು ಸಂಪುಟ ವಿಸ್ತರಣೆ ಕುರಿತು ದೆಹಲಿಯಲ್ಲಿ ಸಭೆ ನಡೆಯಲಿದೆ. ಡಿಸೆಂಬರ್ 22ರಂದು ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದೆ. ಕರ್ನಾಟಕದ ಕಾಂಗ್ರೆಸ್ ನಾಯಕರು ಸಂಪುಟ ಸೇರುವ ಶಾಸಕರ ಪಟ್ಟಿಯನ್ನು ಹಿಡಿದು ದೆಹಲಿ ವಿಮಾನ ಹತ್ತಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ರಾಹುಲ್ ಗಾಂಧಿ ಜೊತೆಗಿನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ...

8 ಸಚಿವ ಸ್ಥಾನಗಳು ಖಾಲಿ
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟದಲ್ಲಿ 8 ಸಚಿವ ಸ್ಥಾನಗಳು ಖಾಲಿ ಇವೆ. ಇವುಗಳಲ್ಲಿ 6 ಸ್ಥಾನಗಳು ಕಾಂಗ್ರೆಸ್‌ಗೆ ಸಿಗಲಿವೆ. 6 ಸ್ಥಾನಕ್ಕಾಗಿ ಡಜನ್‌ಗೂ ಅಧಿಕ ಆಕಾಂಕ್ಷಿಗಳಿದ್ದಾರೆ. ಯಾರನ್ನು ಸಂಪುಟಕ್ಕೆ ಸೇರಿಸಬೇಕು? ಎಂಬುದು ಪಕ್ಷದ ಪಾಲಿಗೆ ಸವಾಲಿನ ಪ್ರಶ್ನೆಯಾಗಿದೆ.

ಪಕ್ಷದ ವಿರುದ್ಧ ಅಸಮಾಧಾನ
ಹಲವಾರು ತಿಂಗಳಿನಿಂದ ಸಂಪುಟ ವಿಸ್ತರಣೆ ಒಂದಲ್ಲ ಒಂದು ಕಾರಣಕ್ಕೆ ವಿಳಂಬವಾಗುತ್ತಿದೆ. ಇದರಿಂದಾಗಿ ಪಕ್ಷದ ಶಾಸಕರು ಅಸಮಾಧಾನಗೊಂಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಡಿಸೆಂಬರ್ 22ರಂದು ಸಂಪುಟ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ.

ರಾಹುಲ್ ಗಾಂಧಿ ಕರೆ
ಕರ್ನಾಟಕದ ಪಕ್ಷದ ಹಿರಿಯ ನಾಯಕರಿಗೆ ದೆಹಲಿಗೆ ಬರುವಂತೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಡಿಸೆಂಬರ್ 21ರಂದು ರಾಹುಲ್ ಗಾಂಧಿ ನಿವಾಸದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಅಂದು ಸಂಪುಟ ಸೇರುವ ಶಾಸಕರ ಪಟ್ಟಿ ಅಂತಿಮವಾಗಲಿದೆ. ಕರ್ನಾಟಕದ ನಾಯಕರು ಸಹ ಸಂಪುಟ ಸೇರುವ ಶಾಸಕರ ಪಟ್ಟಿಯನ್ನು ಹಿಡಿದು ದೆಹಲಿಗೆ ತೆರಳಲಿದ್ದಾರೆ.

ಸಂಪುಟ ಪುನಾರಚನೆ
ಸಚಿವ ಸಂಪುಟ ವಿಸ್ತರಣೆ ಜೊತೆ ಪುನಾರಚನೆಯೂ ನಡೆಯಲಿದೆ. ಇಬ್ಬರ ಸಚಿವರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ಸಭೆ ನಡೆಸಿದ ಬಳಿಕ ಯಾರು ಸಂಪುಟದಿಂದ ಹೊರ ಹೋಗಲಿದ್ದಾರೆ? ಎಂಬುದು ತೀರ್ಮಾನವಾಗಲಿದೆ.












Click it and Unblock the Notifications