ಸಿಐಡಿ ತನಿಖೆ ರದ್ದು ಕೋರಿ ಸುಪ್ರೀಂಗೆ ರಾಘವೇಶ್ವರ ಶ್ರೀ ಅರ್ಜಿ
ಬೆಂಗಳೂರು, ಮೇ 19 : ಅತ್ಯಾಚಾರ ಪ್ರಕರಣದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಸಿಐಡಿ ತನಿಖೆಯನ್ನು ರದ್ದುಗೊಳಿಸುವಂತೆ ಕೋರಿ ರಾಘವೇಶ್ವರ ಭಾರತಿ ಸ್ವಾಮೀಜಿಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಸಿಐಡಿ ತನಿಖೆ ರದ್ದು ಮಾಡುವಂತೆ ಕೋರಿ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು.
ರಾಮಕಥಾ ಗಾಯಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳ ವಿರುದ್ಧ ಸಿಐಡಿ ತನಿಖೆ ನಡೆಯುತ್ತಿದೆ. ಪ್ರಕರಣದಲ್ಲಿ ಸ್ವಾಮೀಜಿಗೆ ಈಗಾಗಲೇ ಷರತ್ತುಬದ್ಧ ಜಾಮೀನು ಸಿಕ್ಕಿದೆ. [ಶ್ರೀಗಳ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್]

ಆದರೆ, ಅವರು ತಮ್ಮ ವಿರುದ್ಧದ ಸಿಐಡಿ ತನಿಖೆ ರದ್ದು ಮಾಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮೇ 17ರಿಂದ ಕೋರ್ಟ್‌ಗೆ ಬೇಸಿಗೆ ರಜೆ ಇದ್ದು, ಸ್ವಾಮೀಜಿಯವರು ಸಲ್ಲಿಸಿರುವ ಅರ್ಜಿ ಜುಲೈ 1ರಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ. [ಸಿಐಡಿ ಮನವಿ ವಜಾ : ರಾಘವೇಶ್ವರ ಶ್ರೀ ಸದ್ಯಕ್ಕೆ ನಿರಾಳ]
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 2014ರ ಸೆಪ್ಟೆಂಬರ್‌ನಿಂದ ಸಿಐಡಿ ತನಿಖೆ ನಡೆಯುತ್ತಿದೆ. ಆದರೆ, ಇದುವರೆಗೆ ದೋಷಾರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿಲ್ಲ. ಅತ್ಯಾಚಾರದ ಆರೋಪ ಎದುರಿಸುತ್ತಿರುವ ಶ್ರೀಗಳ ವೈದ್ಯಕೀಯ ಪರೀಕ್ಷೆಗಳ ಫಲಿತಾಂಶ ಪ್ರಾಸಿಕ್ಯೂಷನ್ ವಾದಕ್ಕೆ ಪೂರಕವಾಗಿದೆ ಎಂದು ಅಡ್ವೊಕೇಟ್ ಜನರಲ್ ಹೈಕೋರ್ಟ್‌ಗೆ ಹಿಂದಿನ ವಿಚಾರಣೆ ವೇಳೆ ತಿಳಿಸಿದ್ದರು. [ರಾಘವೇಶ್ವರ ಶ್ರೀಗಳಿಗೆ ನಿಷ್ಠ : ಹವ್ಯಕ ಮಹಾಮಂಡಲ]
ಅರ್ಜಿ ತಿರಸ್ಕರಿಸಿದ್ದ ಹೈಕೋರ್ಟ್ : ಸಿಐಡಿ ತನಿಖೆ ರದ್ದು ಮಾಡುವಂತೆ ಕೋರಿ ರಾಘವೇಶ್ವರ ಶ್ರೀಗಳು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸ್ವಾಮೀಜಿ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಅಲ್ಲಿಯೂ ಮನವಿಯನ್ನು ತಿರಸ್ಕರಿಸಲಾಗಿತ್ತು.












Click it and Unblock the Notifications