ಈ ತಿಂಗಳು ಟರ್ಫ್ ಕ್ಲಬ್‌ನಲ್ಲಿ ಕುದುರೆ ರೇಸ್ ನಡೆಯುತ್ತಾ; ಸರ್ಕಾರದ ನಿಲುವೇನು?
ಬೆಂಗಳೂರು, ಮೇ. 22: ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ (ಬಿಟಿಸಿ) ಮೇ 25 ಮತ್ತು 26 ರಂದು ಕುದುರೆ ರೇಸ್ ಚಟುವಟಿಕೆ ನಡೆಯುತ್ತಾ ಇಲ್ಲವೋ ಎಂಬುದು ಈಗ ಕುತೂಹಲ ಕೆರಳಿಸಿದ್ದು, ಅದಕ್ಕೆ ಗುರುವಾರ ಉತ್ತರ ದೊರಕಲಿದೆ. ಕುದುರೆ ರೇಸ್‌ಗೆ ಷರತ್ತುಬದ್ಧ ಅನುಮತಿ ನೀಡುವ ಸಂಬಂಧ ತನ್ನ ನಿರ್ಧಾರ ತಿಳಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಹಾಗಾಗಿ ಸರ್ಕಾರ ಇದೀಗ ಏನಾದರೊಂದು ನಿಲುವು ತೆಗೆದುಕೊಳ್ಳುವುದು ಅನಿವಾರ್ಯವಾಗಲಿದೆ.
ಪರವಾನಗಿ ನವೀಕರಣಕ್ಕೆ ಕೋರಿ ಸಲ್ಲಿಸಿರುವ ಮನವಿ ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಂಗಳೂರು ಟರ್ಫ್ ಕ್ಲಬ್ ಮತ್ತು ರೇಸ್ ಕುದುರೆ ಮಾಲೀಕರ ಸಂಘ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ರಜಾಕಾಲದ ಪೀಠ ಸರ್ಕಾರಕ್ಕೆ ಈ ಸೂಚನೆ ನೀಡಿತು.

ನವೀಕರಣದ ಬಗ್ಗೆ ತೀರ್ಮಾನ
ಈಗಾಗಲೇ ಮೇ 25 ಮತ್ತು 26 ರಂದು ರೇಸಿಂಗ್‌ಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ರೇಸಿಂಗ್ ಚಟುವಟಿಕೆ ಮೇಲೆ ಸಾಕಷ್ಟು ಜನರ ಜೀವನೋಪಾಯ ಅವಲಂಬಿಸಿದೆ. ಹಾಗಾಗಿ, ಮೇ 25 ಮತ್ತು 26 ರಂದು ರೇಸಿಂಗ್ ಚಟುವಟಿಕೆಗೆ ಷರತ್ತುಬದ್ಧ ಅನುಮತಿ ನೀಡುವ ಸಂಬಂಧ ಸರ್ಕಾರ ಕೆಲವೊಂದು ಪ್ರಸ್ತಾವನೆ ಹಾಗೂ ಸೂಚನೆಗಳೊಂದಿಗೆ ಗುರುವಾರ (ಮೇ 23) ನ್ಯಾಯಾಲಯಕ್ಕೆ ಉತ್ತರಿಸಬೇಕು ಎಂದು ಸೂಚಿಸಿತು.
ಅಲ್ಲದೆ, ಯಾವ್ಯಾವ ಷರತ್ತು ವಿಧಿಸಬೇಕು ಎಂಬ ಸರ್ಕಾರ ನಿರ್ಧಾರ ತೆಗೆದುಕೊಳ್ಳಬಹುದು. ನಂತರ ಬಿಟಿಎಫ್ ಪರವಾನಗಿ ನವೀಕರಣಕ್ಕೆ ಸಂಬಂಧಿಸಿದ ಬಗ್ಗೆ ಸರ್ಕಾರ ತೀರ್ಮಾನಿಸಬಹುದು ಎಂದು ನಿರ್ದೇಶಿಸಿದ ಪೀಠ, ಅರ್ಜಿಗಳ ವಿಚಾರಣೆಯನ್ನು ಮೇ 23ಕ್ಕೆ ಮುಂದೂಡಿದೆ.

ಅರ್ಜಿದಾರರ ಮನವಿಗೆ ಆಕ್ಷೇಪಿಸಿದ ರಾಜ್ಯ ಸರ್ಕಾರದ ಪರ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಬೆಟ್ಟಿಂಗ್ ನಲ್ಲಿ ಅವ್ಯವಹಾರ ನಡೆಸಲಾಗುತ್ತಿದೆ. ಇದರಿಂದ ಆಟೋಚಾಲಕರು ಸೇರಿದಂತೆ ಬಹುತೇಕ ಬಡವರೇ ದುಡ್ಡು ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಲಾಭ ಏನೂ ಇಲ್ಲವಾಗಿದ್ದು, ತುರ್ತು ನಿರ್ಧಾರ ಕೈಗೊಳ್ಳುವ ಅಗತ್ಯವೇನು ಇಲ್ಲ.
ಬೆಟ್ಟಿಂಗ್ ಅವ್ಯವಹಾರ ಕುರಿತು ಕ್ಲಬ್ ಸಂಬಂಧಿಸಿದರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ವಾರ್ಷಿಕ 1,300 ಕೋಟಿ ರು. ಆದಾಯ ಸಂಗ್ರಹಿಸಿದರೂ, ಅದನ್ನು ಸರ್ಕಾರದಿಂದ ಮರೆ ಮಾಚಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೇಸಿಂಗ್ ಚುಟುವಟಿಕೆಗೆ ಮಧ್ಯಂತರ ಅನುಮತಿ ನೀಡುವ ಬದಲು ಪರವಾನಗಿ ನವೀಕರಣದ ಬಗ್ಗೆಯೇ ತೀರ್ಮಾನ ಕೈಗೊಳ್ಳಲಿದೆ. ಅದಕ್ಕಾಗಿ ನಾಲ್ಕು ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು.
ವಿಚಾರಣೆ ವೇಳೆ ಬಿಟಿಸಿ ಮತ್ತು ರೇಸ್ ಕುದುರೆ ಮಾಲೀಕರ ಪರ ವಕೀಲರು, ಮಾರ್ಚ್ ಕೊನೆಯವರೆಗೂ ರೇಸಿಂಗ್ ಚಟುವಟಿಕೆ ನಡೆಸಲು ಪರವಾನಗಿ ಹೊಂದಿತ್ತು. ನಂತರ ಪರವಾನಗಿ ನವೀಕರಣಕ್ಕೆ ಕೋರಿ ಮನವಿ ಪತ್ರ ಸಲ್ಲಿಸಲಾಗಿದೆ. ಮೇ , ಜೂನ್ ಮತ್ತು ಜುಲೈ ತಿಂಗಳಲ್ಲಿ ಆನ್‌ಕೋರ್ಸ್ ಹಾಗೂ ಆಫ್‌ಕೋರ್ಸ್ ರೇಸಿಂಗ್ ಚಟುವಟಿಕೆ ನಡೆಸಲು ಅನುಮತಿ ನೀಡಲು ಸರ್ಕಾರ ಮತ್ತು ಮುಖ್ಯಮಂತ್ರಿಗಳನ್ನು ಕೋರಲಾಗಿದೆ. ಆದರೆ, ಸರ್ಕಾರ ಈವರೆಗೂ ತಮ್ಮ ಮನವಿ ಪರಿಗಣಿಸಿಲ್ಲ. ಇದರಿಂದ ರೇಸ್ ಚಟುವಟಿಕೆ ನಡೆಸಲಾಗುತ್ತಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
20 ಸಾವಿರ ಜನರ ಜೀವನೋಪಾಯ
ಅಲ್ಲದೆ, ಮೇ, ಜೂನ್ ಮತ್ತು ಜುಲೈನಲ್ಲಿ ದೇಶದ ಬೇರೆಲ್ಲೂ ರೇಸ್ ನಡೆಯುವುದಿಲ್ಲ. ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಮಾತ್ರ ನಡೆಯುತ್ತದೆ. ದೇಶದೆಲ್ಲಡೆ ಇರುವ ರೇಸ್ ಕುದುರೆಗಳು ಬೆಂಗಳೂರಿಗೆ ಬರುತ್ತವೆ. ಮೈಸೂರು ರೇಸ್ ಕ್ಲಬ್‌ಗೆ ಸರ್ಕಾರ ಅನುಮತಿ ನೀಡಿದ್ದು, ಬಿಟಿಸಿಗೆ ಮಾತ್ರ ನೀಡಿಲ್ಲ. ಸರ್ಕಾರ ಪರವಾನಗಿ ನವೀಕರಿಸದ ಹಾಗೂ ಅನುಮತಿ ನೀಡದ ಕಾರಣಕ್ಕೆ ಆದಾಯ ಸಹ ನಷ್ಟವಾಗುತ್ತಿದೆ.
ಈಗಾಗಲೇ ಸುಮಾರು 10 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಟರ್ಫ್ ಕ್ಲಬ್‌ನಲ್ಲಿ 800 ಕುದುರೆಗಳಿವೆ. ಅವುಗಳ ನಿರ್ವಹಣೆ ಮಾಡಬೇಕಿದೆ. ನೂರಾರು ಮಂದಿ ನೌಕರರರು ಇದ್ದಾರೆ. ಸರ್ಕಾರ ನಡೆಯಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 20 ಸಾವಿರ ಜನರ ಜೀವನೋಪಾಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ನ್ಯಾಯಪೀಠದ ವಿವರಿಸಿದರು.












Click it and Unblock the Notifications